ಪುಟ:ಕ್ರಾಂತಿ ಕಲ್ಯಾಣ.pdf/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೬೭


ಭಂಗ ತಂದರು. ವರ್ಣಭೇದವನ್ನು ನಿರಾಕರಿಸಿ ಸ್ತ್ರೀ ಶೂದ್ರ ಅಸ್ಪೃಶ್ಯರಿಗೂ ಸಮಾನಾಧಿಕಾರ ಕೊಟ್ಟರು. ಅದರಿಂದಾದ ವಿಷಫಲವನ್ನು ನಾವು ಉಣ್ಣಬೇಕಾಗಿದೆ. ಕರ್ಣದೇವರಸರು ಬಿಜ್ಜಳರಾಯರ ಸಹೋದರರೆಂಬ ಕಾರಣದಿಂದ ನಾನು ಅವರನ್ನು ಗೌರವಿಸುತ್ತೇನೆ. ಆದರೆ ಪ್ರಭುತ್ವ ರಾಜಕೀಯಗಳಲ್ಲಿ ಅವರು ಕೇವಲ ಶಿಶು, ಅಭ್ಯಾಸ ಅನುಭವಗಳಿಲ್ಲದ ಹಸುಗೂಸು. ತಮ್ಮ ಬುದ್ಧಿ ಪರಿಮಿತಿಯನ್ನು ತಿಳಿದುಕೊಳ್ಳಲಾರದೆ ಅವರು, ತಮಗೆ ತಿಳಿಯದ ರಾಜಿಕಕ್ಕೆ ಪ್ರವೇಶಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದು ವಿಷಾದಕರ. ಅವರು ನನ್ನ ಸಲಹೆಯ ವಿಚಾರದಲ್ಲಿ ಪ್ರಕಟಿಸಿದ ವಿರೋಧಕ್ಕೆ ಅವರ ಅವಿವೇಕ ಅನನುಭವಗಳು ಕಾರಣವೆಂದು ಉಪೇಕ್ಷಿಸುತ್ತೇನೆ,”

“ಅವಿವೇಕ! ಅನನುಭವ! ವ್ಯಕ್ತಿನಿಂದೆ! ಅಧ್ಯಕ್ಷರು ಇದನ್ನು ಅನುಮೋದಿಸುವರೆ?” ಎಂದು ಕರ್ಣದೇವನು ಚಡಪಡಿಸಿ ಎದ್ದು ನಿಂತನು.

ಬಿಜ್ಜಳನು ಮಾತಾಡಲಿಲ್ಲ. ಕರ್ಣದೇವನಿಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿ, ಮಾಧವ ನಾಯಕನ ಮೇಲೆ ಅನುಮೋದನೆಯ ದೃಷ್ಟಿ ಬೀರಿದನು.

ಮಾಧವ ನಾಯಕನು ಮುಂದುವರಿದು ಹೇಳಿದನು: “ಕರ್ಣದೇವರಸರು ರಸಿಕರು, ವಿಲಾಸಪ್ರಿಯರು. ರಾಜಗೃಹದ ಗಣಿಕಾವಾಸ ಅವರಿಗೆ ಅನುಕೂಲವಾದ ಕಾರ್ಯಕ್ಷೇತ್ರ, ಆ ತಾವರೆ ಕೊಳದಲ್ಲಿ ಗಜರಾಜನಂತ ವಿಹರಿಸಲಿ ಅವರು. ನನ್ನ ಅಡ್ಡಿಯಿಲ್ಲ. ದಯಮಾಡಿ ಅವರು ರಾಜಿಕದಿಂದ ವಿರಮಿಸಿದರೆ ನಾವು ಉಳಿದುಕೊಳ್ಳುತ್ತೇವೆ.”

ಕರ್ಣದೇವನ ಕಣ್ಣುಗಳು ಕಿಡಿಯುಗುಳಿದವು. ಕ್ರೋಧಾವೇಶದಿಂದ ಸಿಡಿದೆದ್ದು ಅವನು, "ಸಾಮಂತ ಸಭೆಯನ್ನು ಕೊಂಡೆಯರ ಪಡಸಾಲೆಯಾಗಿ ಮಾಡುವುದು ನಿಮ್ಮಿಚ್ಛೆಯಾದರೆ ನನಗೆ ಹೋಗಲು ಅನುಮತಿ ಕೊಡಿರಿ. ಒಂದು ಕ್ಷಣವೂ ನಾನಿಲ್ಲಿರುವುದಿಲ್ಲ,” ಎಂದು ಸಭೆಯಿಂದ ಹೊರಗೆ ಹೋದನು. ಅವನನ್ನು ಯಾರೂ ತಡೆಯಲಿಲ್ಲ. ಸಮಾಧಾನ ಪಡಿಸಲು ಪ್ರಯತ್ನಮಾಡಲಿಲ್ಲ.

ಸಭೆಯಲ್ಲಿ ಸ್ತಬ್ಧಮೌನ. ಸಭಾಂಗಣದ ಬಾಗಿಲು ಮೊಗಶಾಲೆಗಳಲ್ಲಿ ಕಾದು ನಿಂತಿದ್ದ ಪರಿವಾರದ ಭಟ ಪಸಾಯಿತ ದೀವಟಿಗೆಯವರಲ್ಲಿ ಸ್ವಲ್ಪ ಗೊಂದಲವಾಯಿತು. ಕರ್ಣದೇವನ ಪರಿವಾರದವರು ತಮ್ಮ ಪ್ರಭುವಿನ ಹಿಂದೆ ಹೋದರು. ಅವರಲ್ಲಿ ದೀವಟಿಗೆಯ ಭಟರಿಬ್ಬರು ಅಲ್ಲಿಯೇ ಉಳಿದು, ಬಿಜ್ಜಳನ ಪರಿವಾರದೊಡನೆ ಸೇರಿಕೊಂಡದ್ದನ್ನು ಯಾರೂ ಗಮನಿಸಲಿಲ್ಲ.

ಸಭೆ ಮುಂದುವರಿದು ಮಾಧವ ನಾಯಕನ ಸಲಹೆ ಅಂಗೀಕರಿಸಲ್ಪಟ್ಟಿತು. ನಾರಣಕ್ರಮಿತನು ಸಲಹೆಯ ಪ್ರಯೋಜನ ಸಮರ್ಪಕತೆಗಳನ್ನು ಕುರಿತು ದೀರ್ಘವಾಗಿ