ಪುಟ:ಕ್ರಾಂತಿ ಕಲ್ಯಾಣ.pdf/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೬೮

ಕ್ರಾಂತಿ ಕಲ್ಯಾಣ


ಮಾತಾಡಿದನು. ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ಹೊಣೆ ಮಾಧವ ನಾಯಕನಿಗೆ ವಹಿಸಲ್ಪಟ್ಟಿತು.

ಸಭೆ ಮುಗಿದು ಬಿಜ್ಜಳನು ಅಂದಣವೇರಿ ಕಲಚೂರ್ಯ ಅರಮನೆಗೆ ಹೊರಟಾಗ ಅವನ ಸುತ್ತ ಇದ್ದ ವಿಪುಲ ಪರಿವಾರದಲ್ಲಿ ಇಬ್ಬರು ಹೊಸ ದೀವಟಿಗೆಯವರಿದ್ದುದನ್ನು ತಿಳಿಯುವ ಅವಕಾಶವಾಗಲಿ, ನಿಪುಣತೆಯಾಗಲಿ, ಹೆಗ್ಗಡೆ ಕಾರ್ಯಕರ್ತರಿಗೆ ಉಳಿದಿರಲಿಲ್ಲ.

ಬಿಜ್ಜಳ ಕರ್ಣದೇವರ ನಡುವೆ ಆ ರಾತ್ರಿ ಪ್ರಕಟ ಸಭೆಯಲ್ಲಿ ನಡೆದ ಘರ್ಷಣೆ ಅವರಿಬ್ಬರ ಪರಿವಾರದ ಹೆಗ್ಗಡೆ ಕಾರ್ಯಕರ್ತರನ್ನು ತಲ್ಲಣಗೊಳಿಸಿತ್ತು. {{***|3} ಕಲಚೂರ್ಯ ಅರಮನೆಯನ್ನು ಸೇರಿದೊಡನೆಯೇ ಬಿಜ್ಜಳನು ಸರ್ವಾಧಿಕಾರಿ ಚಾವಡಿಯ ವಿಶ್ರಾಂತಿ ಗೃಹದಲ್ಲಿ ಕುಳಿತು ಕರಣಿಕ ಕಾರ್ಯಕರ್ತರಿಗೆ ಹೇಳಿ ಕಳುಹಿಸಿದನು. ಆರೋಗಣೆಗಾಗಿ ಅಂತಃಪುರಕ್ಕೆ ಹೋಗುವ ಮೊದಲು ಅವಸರದ ರಾಜಕಾರ್ಯವನ್ನು ಮುಗಿಸುವುದು ಅವನ ಉದ್ದೇಶವಾಗಿತ್ತು.

ಪ್ರಭುವಿನ ಆಗಮನಕ್ಕಾಗಿ ಕಾದಿದ್ದ ಕರಣಿಕ ಹೆಗ್ಗಡೆಗಳು ಕಾರ್ಯಕರ್ತರು ಓಡುತ್ತ ಅಲ್ಲಿಗೆ ಬಂದರು. ಸಾಮಂತ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ನಿರ್ಣಯದ ಪ್ರತಿಯನ್ನು ಕರಣಿಕನಿಗೆ ಕೊಟ್ಟ ಬಿಜ್ಜಳನು, “ಇದರಂತೆ ನಿರೂಪಗಳನ್ನು ಕೂಡಲೇ ಸಿದ್ಧಗೊಳಿಸಿ ನನ್ನ ಹಸ್ತಾಕ್ಷರಕ್ಕಾಗಿ ತರತಕ್ಕದ್ದು,” ಎಂದು ಹೇಳಿದನು.

ಕರಣಿಕನು ಹೋದ ಮೇಲೆ ಬಿಜ್ಜಳನು ಕಾರ್ಯಕರ್ತನ ಕಡೆ ತಿರುಗಿ, “ಈ ರಾತ್ರಿಯೇ ಮಂಗಳವೇಡೆಗೆ ಹೊರಡಲು ಅವಸರದ ಭಟರಿಬ್ಬರು ಸಿದ್ಧವಾಗಿರಲಿ. ಇನ್ನೆರಡು ಘಳಿಗೆ ಬಿಟ್ಟು ಬಂದರೆ ಪತ್ರ ಕೊಡುತ್ತೇನೆ. ಅಲ್ಲಿಯವರೆಗೆ ಯಾರನ್ನೂ ಒಳಗೆ ಬಿಡದಂತೆ ಕಾವಲುಗಾರರಿಗೆ ಆಜ್ಞೆಮಾಡು,” ಎಂದು ಹೇಳಿಕಳುಹಿಸಿದನು.

ಪಾರ್ಶ್ವದಲ್ಲಿ ಪೀಠದ ಮೇಲೆ ಲೇಖನೋಪಕರಣಗಳು ಅಣಿಯಾಗಿದ್ದವು. ಬಿಜ್ಜಳನು ತನಗೆ ಬೇಕಾದ ಕಡತ ಓಲೆಕಂಠಗಳನ್ನು ತಗೆದುಕೊಂಡು ಕುಮಾರ ಸೋಮೇಶ್ವರನಿಗೆ ಪತ್ರ ಬರೆಯಲು ಕುಳಿತನು.

ಆರಂಭದ ಒಕ್ಕಣೆ ಮುಗಿದ ಮೇಲೆ ಮುಂದೇನು ಬರೆಯುವುದೆಂಬ ಯೋಚನೆಗೆ ಮೊದಲಾಯಿತು. ತಾನು ಮಂಗಳವೇಡೆಯಿಂದ ಕಲ್ಯಾಣಕ್ಕೆ ಬಂದ ಮೇಲಿನ ನಾಲ್ಕು ವಾರಗಳ ಅವಧಿಯಲ್ಲಿ ಎಷ್ಟೆಲ್ಲ ಪ್ರಾಮುಖ್ಯ ಘಟನೆಗಳು ನಡೆದವು ! ಧರ್ಮಾಧಿಕರಣದ ವಧಾಜ್ಞೆ, ಅಪರಾಧಿಗಳನ್ನು ಉಳಿಸಲು ನಡೆದ ಪ್ರಯತ್ನಗಳು, ಅಪರಾಧಿಗಳನ್ನು ಶೂಲಕ್ಕೇರಿಸಿದುದು, ವಲಸೆ ಹೋಗಲು ಶರಣರ