ಪುಟ:ಕ್ರಾಂತಿ ಕಲ್ಯಾಣ.pdf/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೬೯

ನಿರ್ಧಾರ ; ಕುಮಾರ ಸೋಮೇಶ್ವರನ ಪತ್ರಲೇಖಕ, ಈ ಎಲ್ಲ ವಿಚಾರಗಳನ್ನು
ಈಗಾಗಲೆ ವರದಿ ಮಾಡಿರಬಹುದು. ಆದರೆ ಇಂದು ನಡೆದ ಕರ್ಣದೇವನ
ವಿರೋಧ ಪ್ರದರ್ಶನ, ಅದರ ವಿವರಣೆಯನ್ನು ಪತ್ರಲೇಖಕನ ವಿವೇಚನೆಗೆ ಬಿಡದೆ
ತಾನೇ ಬರೆಯುವುದುತ್ತಮವೆಂದು ಬಿಜ್ಜಳನು ಭಾವಿಸಿದನು. ಕರ್ಣದೇವನ
ವರ್ತನೆಯಿಂದ ಒದಗಬಹುದಾದ ವಿಪತ್ತನ್ನು ವಿವರಿಸಿ ತನ್ನ ಅಧೀನಸ್ಥವಾದ
ಸೈನ್ಯದೊಡನೆ ಕೂಡಲೇ ಕಲ್ಯಾಣಕ್ಕೆ ಬರುವಂತೆ ಕುಮಾರ ಸೋಮೇಶ್ವರನಿಗೆ
ಬರೆಯುವುದು ಬಿಜ್ಜಳನ ಉದ್ದೇಶವಾಗಿತ್ತು.
ಬಿಜ್ಜಳನ ದೊಡ್ಡ ಸೈನ್ಯ ಆಗ ಕಲ್ಯಾಣದಲ್ಲಿತ್ತು. ಮಾಧವ ನಾಯಕನಂತಹ
ದಕ್ಷನಾದ ಅಧಿಕಾರಿ ಅದರ ದಂಡನಾಯಕನಾಗಿದ್ದನು. ಆದರೆ ಆ ಸೈನ್ಯದಲ್ಲಿ
ಸುಮಾರು ಅರ್ಧದಷ್ಟು ಅಧಿಕಾರಿಗಳು, ಸೈನ್ಯದಳಗಳು, ಕರ್ಣದೇವನ
ಅಭಿಮಾನಿಗಳಾಗಿದ್ದರು. ಕರ್ಣದೇವನ ವಿರೋಧ ಉಲ್ಬಣಿಸಿ ಘರ್ಷಣೆ ನಡೆದರೆ,
ಅವರು ಕರ್ಣದೇವನ ಕಡೆ ಸೇರಬಹುದೆಂದು ಬಿಜ್ಜಳನು ಹೆದರಿದನು. ಪಟ್ಟಾಭಿಷಿಕ್ತ
ಚಾಲುಕ್ಯ ಅರಸು ಜಗದೇಕಮಲ್ಲ. ಅವನನ್ನು ಕರ್ಣದೇವನ ರಕ್ಷಣೆಯಲ್ಲಿಟ್ಟಿದ್ದು
ಅವಿವೇಕವೆಂದು ಬಿಜ್ಜಳನು ಭಾವಿಸಿದನು.
“ರಾಜ್ಯಭಾರ ನಿರೂಪಣೆ”ಯ ಅನಂತರ ತನ್ನನ್ನು ಎದುರಿಸುತ್ತಿರುವ ಈ
ವಿಷಮ ಪರಿಸ್ಥಿತಿಯ ಮುಖ್ಯ ಕಾರಣ, ಮಂಗಳವೇಡೆಯ ಅಗ್ನಿದಾಹದಿಂದ
ತನ್ನಲ್ಲಾದ ಉದ್ರಿಕ್ತ ಪರವರ್ತನೆಯೇ ಎಂದು ಬಿಜ್ಜಳನು ಅರಿತಿದ್ದನು. ಇತರರು
ಉನ್ಮಾದವೆಂದು ಭಾವಿಸಬಹುದಾದ ತನ್ನ ಉದ್ರಿಕ್ತ ಮನಃಪ್ರವೃತ್ತಿಯನ್ನು ತಡೆದಿಟ್ಟು
ಸಂಯಮ ವಿವೇಚನೆಗಳಿಂದ ನಡೆಯಲು ಕಳೆದೆರಡು ವಾರಗಳಿಂದ ಅವನು
ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿದ್ದವು. ಉರಿಯ ನಡುವೆ, ಉರಿ ಬಣ್ಣದ
ಸೀರೆಯುಟ್ಟು ಉರಿಯೊಡನೆ ಉರಿಯಾಗಿ ಬೆಳಗುವ ಅಗ್ನಿಕನ್ನೆಯಂತೆ ಕಾಮೇಶ್ವರಿ
ಎದುರಿಗೆ ನಿಂತು ಉರಿಯುವ ಕೈಗಳಿಂದ ತನ್ನನ್ನು.....ಮುಂದೆ.....ಮುಂದೆ-
ಯಾವುದೋ ಅಗೋಚರ, ಅವ್ಯಕ್ತ ಮಹಾಪ್ರಪಾತದ ತುತ್ತ ತುದಿಗೆ ತಳ್ಳುತ್ತಿರುವುದಾಗಿ
ಬಿಜ್ಜಳನು ತಿಳಿದನು.
ಸುಮಾರು ಒಂದು ವಾರಕ್ಕೆ ಮೊದಲು, ಅರಮನೆಯ ಇದೇ ಭಾಗದಲ್ಲಿ,
ಇದೇ ಸ್ಥಳದಲ್ಲಿ ನಡೆದ ಘಟನೆ ಬಿಜ್ಜಳನಿಗೆ ತಟ್ಟನೆ ನೆನಪಾಯಿತು. ಐಯಾವಳೆಯ
ಐನೂರ್ವರು ಮಹಾಸಂಘದ ಅಧ್ಯಕ್ಷನೆಂದು ಪರಿಚಯ ಹೇಳಿಕೊಂಡ ಆ
ಸನ್ಯಾಸಿ, ಹರಳಯ್ಯ ಮಧುವರಸ ಶೀಲವಂತರ ಬಿಡುಗಡೆಗಾಗಿ ಅವನು ಎದುರಿಗೆ
ಸುರಿದ ಸುವರ್ಣರಾಶಿ, ಇವು ಬಿಜ್ಜಳನ ಕಣ್ಣ ಮುಂದೆ ನಿಂತವು. ಸನ್ಯಾಸಿಯ