ಪುಟ:ಕ್ರಾಂತಿ ಕಲ್ಯಾಣ.pdf/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೬ ಕ್ರಾಂತಿ ಕಲ್ಯಾಣ ಮುಚ್ಚಿದ್ದ ಬಾಗಿಲನ್ನು ತೆರೆಸಿದನು. ಅಲ್ಲಿ ಅವರು ಕಂಡ ದೃಶ್ಯ ರೌದ್ರ ಬೀಭತ್ಸಗಳ ವ್ಯಂಗ್ಯ ನಿರೂಪಣದಂತಿತ್ತು. ಕೊನೆಗಾಲದ ಒದ್ದಾಟದಲ್ಲಿ ಕೈಕಾಲುಗಳು ತಿರುವು ಮುರುವಾಗಿದ್ದ ಬಿಜ್ಜಳನ ದೇಹ ಒಂದು ಕಡೆ, ಅದರ ಹತ್ತಿರ ಇನಿಸು ದೂರದಲ್ಲಿ ಕಡಿಯಲ್ಪಟ್ಟಿದ್ದ ತಲೆ ಇನ್ನೊಂದು ಕಡೆ, ಬಿದ್ದಿದ್ದವು. ಕಡಿದ ಕೊರಳ, ಇರಿದ ಹೊಟ್ಟೆಯ ಗಾಯಗಳಿಂದ ರಕ್ತ ಹರಿದು ಹೆಪ್ಪು ಕಟ್ಟಿತ್ತು. ಹೆಗ್ಗಡೆಗೆ ಧೈರ್ಯ ಹೇಳಿದ ಕರ್ಣದೇವ, ಈ ಘೋರ ದೃಶ್ಯವನ್ನು ಕಂಡಾಗ, “ಅಣ್ಣಾ ! ಅಣ್ಣಾ!” ಎಂದು ಚೀರಿದನು. ಕೆಳಗೆ ಬಿದ್ದಿದ್ದ ತಲೆಯನ್ನೆತ್ತಿ ಹಿಡಿದು, “ಎಂಥ ಘೋರ ಮೃತ್ಯು ನಿನಗಾಗಿ ಕಾದಿತ್ತು !” ಎಂದು ಕೊರಗಿ ನುಡಿದನು. ಅಷ್ಟರಲ್ಲಿ ಹೆಗ್ಗಡೆ ಅಂತಃಗೃಹದಿಂದ ಪ್ರಶಸ್ತವಾದ ಮಂಚವೊಂದನ್ನು ತರಿಸಿ ಚಾವಡಿಯಲ್ಲಿ ಹಾಕಿಸಿ, ಇಬ್ಬರು ಭಟರ ಸಹಾಯದಿಂದ ಬಿಜ್ಜಳನ ದೇಹವನ್ನು ಅದರ ಮೇಲಿಟ್ಟನು. ಕರ್ಣದೇವ ಕೈಯ್ಯಲ್ಲಿದ್ದ ರುಂಡವನ್ನು ಮುಂಡಕ್ಕೆ ಸೇರಿಸಿ ಕಾಲುಗಳ ಮೇಲೆ ತಲೆಯಿಟ್ಟು ಅಳುವುದಕ್ಕೆ ಪ್ರಾರಂಭಿಸಿದನು. ಅಣ್ಣನ ಅಕಾಲ ಮರಣಕ್ಕಾಗಿ ಅಳುತ್ತಿದ್ದ ತಮ್ಮನನ್ನು ಸಮಾಧಾನಪಡಿಸುವ ಸಾಂತ್ವನದ ಮಾತುಗಳನ್ನಾಡುವ ಅವಕಾಶವಾಗಲಿ, ಅನುಕಂಪವಾಗಲಿ, ಆಗ ಅಲ್ಲಿದ್ದ ಹಿರಿಯ ಅಧಿಕಾರಿಗಳಾದ ಹೆಗ್ಗಡೆ ದಂಡನಾಯಕರಿಗಿರಲಿಲ್ಲ. ಚಾವಡಿಯ ನೆಲದ ಮೇಲಿನ ರಕ್ತದ ಕಲೆಗಳನ್ನು ತೊಳೆಸುವುದರಲ್ಲಿ ಹೆಗ್ಗಡೆ ಕರ್ಣದೇವನನ್ನು ಮರೆತನು. ತನ್ನೊಡನೆ ಬಂದಿದ್ದ ಸೈನ್ಯದಳಗಳ ನಿಯಂತ್ರಣದ ಚಿಂತೆಯಲ್ಲಿ ಮಾಧವ ನಾಯಕನು ಹೊರಗೆ ಹೋದನು. ಅವನು ಮಹಾದ್ವಾರದ ಬಳಿ ಬಂದಾಗ ಅರಮನೆಯ ಕಾವಲು ಭಟರಿಗೂ, ಸೈನ್ಯದಳಗಳ ನಾಯಕರಿಗೂ ವಾಗ್ಯುದ್ಧ ಆರಂಭವಾಗಿತ್ತು. ಕಾವಲು ಭಟರು ಸೈನ್ಯದಳಗಳನ್ನು ಒಳಗೆ ಬಿಡಲು ನಿರಾಕರಿಸಿದ್ದರು. ಸೈನ್ಯದಳದವರು ನುಗ್ಗಿ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದರು. ಮಾಧವ ನಾಯಕನು ತನ್ನ ಕಡೆಯವರನ್ನು ಜಂಕಿಸಿ, “ತಾನು ಒಳಗೆ ಹೋಗಿ ಬರುವಷ್ಟರಲ್ಲಿ ಇಷ್ಟೆಲ್ಲ ಗೊಂದಲ ಮಾಡುವುದೆ? ಬಿಜ್ಜಳರಾಯರ ಅವಸಾನದಿಂದ ಅರಮನೆ ಈಗ ಸಾವಿನ ಮನೆಯಾಗಿದೆ. ಅಲ್ಲಿಗೆ ನಿಮ್ಮ ಪ್ರವೇಶವನ್ನು ನಿರಾಕರಿಸಿ ಕಾವಲು ಭಟರು ಸೂಕ್ತವನ್ನೇ ಮಾಡಿದರು. ನೀವು ಮುಂಜಾವಿನವರೆಗೆ ಅರಮನೆಯ ಸುತ್ತ ಕಾವಲಿರತಕ್ಕದ್ದು", ಎಂದು ಆಜ್ಞೆ ಮಾಡಿದನು. ದಳದ ನಾಯಕನನ್ನು ಕರೆದು ರಹಸ್ಯವಾಗಿ, “ನನ್ನ ಅನುಮತಿ ಪತ್ರವಿಲ್ಲದೆ ಅರಮನೆಗೆ ಯಾರನ್ನೂ ಬಿಡಲಾಗದು. ಸಾವಿನ ಸುದ್ದಿ ನಗರದಲ್ಲಿ ಹರಡಿದರೆ