ಪುಟ:ಕ್ರಾಂತಿ ಕಲ್ಯಾಣ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಕ್ರಾಂತಿ ಕಲ್ಯಾಣ

ಮೇಲೆ ಕುಳಿತು ಪ್ರಜೆಗಳಿಗೆ ದರ್ಶನ ಕೊಡಲಿಲ್ಲ. ಅದಕ್ಕೊಂದು ವಿಶೇಷ ಕಾರಣವಿದೆ. ನವರಾತ್ರಿ ಮುಗಿದ ಕೆಲವು ದಿನಗಳ ಮೇಲೆ ಅವರು ಅಸ್ವಸ್ಥರಾದರು. ವೈದ್ಯರು ನಡೆಸಿದ ಚಿಕಿತ್ಸೆ ಇದುವರೆಗೆ ವಿಫಲವಾಗಿದೆ. ಪ್ರಭುಗಳು ಈಗಲೂ ಅದೇ ಸ್ಥಿತಿಯಲ್ಲಿದ್ದಾರೆ."

"ಅದೇ ಸ್ಥಿತಿಯೆಂದರೆ? ರೋಗವೇನೆಂಬುದನ್ನು ತಿಳಿಯಲು ವೈದ್ಯರು ಅಸಮರ್ಥರಾದರೆ?"

"ರೋಗದ ಲಕ್ಷಣಗಳು ವಿಚಿತ್ರವಾದ್ದರಿಂದ ವೈದ್ಯರು ಯಾವುದನ್ನೂ ಗೊತ್ತಾಗಿ ಹೇಳುವುದಿಲ್ಲ."

"ಲಕ್ಷಣಗಳೇನು?"

"ಒಂದೊಂದು ಸಾರಿ ಪ್ರಭುಗಳು ಮತಿಭ್ರಮಣೆಯಾದವರಂತೆ ನಡೆದುಕೊಳ್ಳುತ್ತಾರೆ. ತಮ್ಮ ಗೌರವ ಅಂತಸ್ತುಗಳನ್ನು ಮರೆತು ಮಕ್ಕಳಂತೆ ಆಡುತ್ತಾರೆ. ಸಂದರ್ಶನ ಕಾಲದಲ್ಲಿ ನೀವು ಅದೊಂದನ್ನೂ ಗಮನಿಸದವರಂತೆ ನಡೆದುಕೊಳ್ಳಬೇಕು. ನೀವು ಗಮನಿಸುತ್ತಿರುವಿರೆಂದು ಸಂದೇಹವಾದರೂ ಪ್ರಭುಗಳು ರೇಗಿಬಿಡುತ್ತಾರೆ. ಈ ವಿಚಾರ ನಿಮಗೆ ಮೊದಲೇ ಎಚ್ಚರಿಕೆ ಕೊಡುವುದು ನನ್ನ ಕರ್ತವ್ಯ."

ಅಗ್ಗಳನು ನಕ್ಕು "ಧರ್ಮಾಧಿಕಾರಿಗಳು ನನ್ನ ವಿಚಾರದಲ್ಲಿ ನಿಶ್ಚಿಂತರಾಗಬಹುದು. ರಾಜವಂಶೀಯರ ಸಮ್ಮುಖದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ರಾಜಾಂತಃಪುರಗಳನ್ನ ಅನುಭವದಿಂದ ರಾಜವಂಶೀಯರ ಬಗೆಗೆ ಒಂದು ನಿರ್ಧಾರಕ್ಕೆ ಬಂದಿದ್ದೇನೆ," ಎಂದನು.

ಕ್ರಮಿತನ ಕುತೂಹಲ ಕೆರಳಿತು. "ನಿಮ್ಮ ನಿರ್ಧಾರವೇನು?" ಎಂದು ಕೇಳಿದನು.

"ರಾಜಾಂತಃಪುರದ ಸ್ತ್ರೀಯರಲ್ಲಿ ನೂರಕ್ಕೆ ತೊಂಭತ್ತು ಜನ ಅಕ್ಕಳೆಯರು. ರಾಜವಂಶೀಯರಾದ ಪುರುಷರು ಸಾಮಾನ್ಯವಾಗಿ ತಿಳಿಗೇಡಿಗಳು, ಇಲ್ಲವೇ ವಿಷಯಾಸಕರು."

"ಅಕ್ಕಳೆಯರೆಂದರೆ?"

"ಗಣಿಕೆಯರಂತೆ ನಡೆದುಕೊಳ್ಳುವ ಕುಲೀನ ಮಹಿಳೆಯರು. ಪಂಪ ಮಹಾಕವಿ ಅವರ ವಿಚಾರ ಸ್ವಾರಸ್ಯವಾಗಿ ವರ್ಣಿಸಿದ್ದಾನೆ. ನಯ ನೋಟ ಕೂಟಗಳಂತೆ ದಿಟ್ಟತನ ಮೆಲ್ನುಡಿ ವಿಭ್ರಮ ವಿಲಾಸಗಳಲ್ಲಿ ಆ ಕುಲೀನ ಸ್ವೈರಿಣಿಯರು ಜಾತಿ ಸೂಳೆಯರನ್ನು ಮೀರಿಸುವರೆಂದು ಅವನ ಅಭಿಪ್ರಾಯ."

ಅಗ್ಗಳನ ಬಿಚ್ಚುಮನದ ನುಡಿಗಳನ್ನು ಕೇಳಿ ಕ್ರಮಿತನು ಬೆಬ್ಬೆರಗಾದನು.