ಪುಟ:ಕ್ರಾಂತಿ ಕಲ್ಯಾಣ.pdf/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೭೭ ಗಲಭೆಯಾಗಬಹುದು. ಶಾಂತಿರಕ್ಷಣೆಗೆ ಅಗತ್ಯವಾದ ಸೈನ್ಯದಳಗಳು ಸಿದ್ದವಾಗಿರುವಂತೆ ಕಾರ್ಯಕರ್ತನಿಗೆ ಸುದ್ದಿ ಕಳುಹಿಸತಕ್ಕದ್ದು,” ಎಂದು ಹೇಳಿದನು. ನಗರ ಅರಮನೆಗಳ ಸುರಕ್ಷತೆಗೆ ಅಗತ್ಯವಾದ ಈ ನಿಯಂತ್ರಣ ಕಾರ್ಯವನ್ನು ಮುಗಿಸಿದ ಮೇಲೆ ಮಾಧವ ನಾಯಕನು ತನ್ನ ಆಪ್ತ ಕಾರ್ಯದರ್ಶಿಯನ್ನು ಕರೆದು, "ಈ ರಾತ್ರಿಯೇ ಮಂಗಳವೇಡೆಗೆ ಅವಸರದ ಓಲೆ ಕಳುಹಿಸಬೇಕಾಗಿದೆ,” ಎಂದನು. ಕಾರ್ಯದರ್ಶಿ ಹೇಳಿದನು : “ಶಿಬಿರದಲ್ಲಿನ ಅವಸರದ ಭಟರಿಗೆ ಸಿದ್ಧವಾಗಿರುವಂತೆ ಹೇಳಿದ್ದೇನೆ. ಅವರಲ್ಲೊಬ್ಬನನ್ನು ಕಳುಹಿಸಬಹುದು.” ಹಾಗಾದರೆ ಮಂಗಳವೇಡೆಯ ಮಂಡಲೇಶ್ವರ ಕುಮಾರ ಸೋಮೇಶ್ವರ ದೇವರಿಗೆ ಕಳುಹಿಸಲು ಇಂದಿನ ಘಟನೆಗಳ ಸಂಕ್ಷಿಪ್ತ ವರದಿಯೊಂದನ್ನು ರಚಿಸಬೇಕಾಗುವುದು.” “ಆಜ್ಞೆ ಬಿಜ್ಜಳರಾಯರ ಮರಣದ ಸುದ್ದಿ.....” “ಕೊಲೆಯ ವಿವರಗಳನ್ನು ತಿಳಿಸುವ ಅಗತ್ಯವಿಲ್ಲ. ಬಿಜ್ಜಳರಾಯರು ಚಾವಡಿಯಲ್ಲಿದ್ದಾಗ ಅಪರಿಚಿತರಿಬ್ಬರು ಒಳಗೆ ಬಂದು ಅವರನ್ನು ಇರಿದು ಕೊಂದರು ಎಂದು ಬರೆದರೆ ಸಾಕು.” “ಹಾಗೆಯೇ ಮಾಡುತ್ತೇನೆ.” “ಮತ್ತು ಸೋಮೇಶ್ವರ ದೇವರಿಗೆ ನಾನು ಬರೆದಂತೆ ಒಂದು ಪತ್ರ - ಬರೆಯಬೇಕು. ವಿಷಯ ಬಹಳ ರಹಸ್ಯವಾದದ್ದು.” “ವಿಷಯವೇನೆಂಬುದನ್ನು ತಿಳಿಸಿದರೆ ಪತ್ರ ಬರೆಯುತ್ತೇನೆ.” “ಬಿಜ್ಜಳರಾಯರು ಹತರಾದಾಗ ನಿಮಗೆ ಪತ್ರ ಬರೆಯುತ್ತಿದ್ದರು. ಅರ್ಧ ಮುಗಿದ ಆ ಪತ್ರ ನನ್ನ ಹತ್ತಿರ ಇದೆ. ನೀವು ಕಲ್ಯಾಣಕ್ಕೆ ಬಂದಾಗ ಕೊಡುತ್ತೇನೆ. ತಮ್ಮ ಅನಂತರ ಚಾಲುಕ್ಯರಾಜ್ಯದ ಸರ್ವಾಧಿಕಾರವನ್ನು ನಿಮಗೆ ಕೊಡುವುದು ಬಿಜ್ಜಳ ರಾಯರ ಉದ್ದೇಶವಾಗಿತ್ತು. ಅವರು ಅದನ್ನು ನನಗೆ ತಿಳಿಸಿದ್ದರು. ಅವರ ಪತ್ರದಲ್ಲಿ ಅದರ ಸ್ಪಷ್ಟ ಸೂಚನೆ ಇದೆ. ನಿಮ್ಮ ಪೂಜ್ಯ ಪಿತೃವರ್ಯರು ಉದ್ದೇಶಿಸಿದ್ದಂತೆ ಚಾಲುಕ್ಯರಾಜ್ಯದ ಸರ್ವಾಧಿಕಾರವನ್ನು ವಹಿಸಿಕೊಳ್ಳಲು ಅಗತ್ಯವಾದ ಸೈನ್ಯದೊಡನೆ ನೀವು ಕೂಡಲೇ ಕಲ್ಯಾಣಕ್ಕೆ ಪ್ರಯಾಣ ಮಾಡಬೇಕಾಗಿ ನಮ್ರತೆಯಿಂದ ಸೂಚಿಸುತ್ತೇನೆ' ಎಂದು ಕುಮಾರ ಸೋಮೇಶ್ವರ ದೇವರಿಗೆ ನಾನು ಬರೆದಂತೆ ಬರೆಯಬೇಕು.” ಆಜ್ಞೆಯಂತೆ ವರದಿಯನ್ನೂ ಪತ್ರವನ್ನೂ ಕೂಡಲೇ ಸಿದ್ಧಗೊಳಿಸುವುದಾಗಿ ಕಾರ್ಯಕರ್ತ ಹೇಳಿದನು. ಅವನ ಸ್ವಾಮಿನಿಷ್ಠೆ ದಕ್ಷತೆಗಳಲ್ಲಿ ಮಾಧವ ನಾಯಕನಿಗೆ ಸಂಪೂರ್ಣ ವಿಶ್ವಾಸವಿದ್ದಿತು.