ಪುಟ:ಕ್ರಾಂತಿ ಕಲ್ಯಾಣ.pdf/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೭೯ ಕೊಟ್ಟಿದ್ದ ನಿರ್ಣಯಗಳ ಪ್ರತಿಯನ್ನೂ, ಅದರಂತೆ ಸಿದ್ದವಾಗಿದ್ದ ನಿರೂಪಗಳನ್ನೂ ಕರಣಿಕನು ಕರ್ಣದೇವನಿಗೆ ತೋರಿಸಿದನು. ಅವುಗಳನ್ನು ಓದಿದಾಗ ಕರ್ಣದೇವನ ಹುಬ್ಬುಗಳು ಗಂಟಿಕ್ಕಿದವು, ಹಣೆ ಸುಕ್ಕುಗಟ್ಟಿತು. ತೀವ್ರ ಯಾತನೆಯಿಂದ ಎದೆ ಹಿಂಡಿದಂತಾಯಿತು. ಕಲ್ಯಾಣದ ಎಲ್ಲ ಶೈವಮಠಗಳನ್ನು ಧ್ವಂಸಮಾಡಿ, ಪ್ರತಿಭಟಿಸುವ ಶರಣರನ್ನು ಕರುಣೆಯಿಲ್ಲದೆ ಕೊಲ್ಲಲು ಮಾಧವ ನಾಯಕನಿಗೆ ಅಧಿಕಾರ ಕೊಡುವ ನಿರೂಪಗಳಾಗಿದ್ದವು ಅವು. ಹಿಂದೆ ಎಂದೆಂದೂ ಚಾಲುಕ್ಯರಾಜ್ಯದಲ್ಲಿ ನಡೆಯದಿದ್ದ ಈ ಮಹಾನ್ ಘೋರ ಹತ್ಯೆ, ಅತ್ಯಾಚಾರ ಅಂದು ಮಧ್ಯರಾತ್ರಿ ಆರಂಭವಾಗಬೇಕಾಗಿತ್ತು. ಇನ್ನೊಂದು ಘಳಿಗೆ ತಡವಾಗಿದ್ದರೆ ನಿರೂಪಗಳಿಗೆ ಹಸ್ತಾಕ್ಷರ ಬಿದ್ದು ಮಾಧವ ನಾಯಕನ ಕೈ ಸೇರುತ್ತಿದ್ದವು. ಅಣ್ಣನಿಗೆ ನಿಜವಾಗಿ ಉನ್ಮಾದ. ಇಲ್ಲವೇ ಇಂತಹ ಆಜ್ಞೆಯನ್ನು ಚಿಂತಿಸುವುದಾಗಲಿ, ಕಾರ್ಯಗತಮಾಡುವುದಾಗಲಿ ಸಾಧ್ಯವೆ? ಕರ್ಣದೇವ ಕರಣಿಕನ ಕಡೆ ತಿರುಗಿ, “ ಈ ನಿರ್ಣಯ ನಿರೂಪಗಳ ವಿಚಾರ ಸದ್ಯದಲ್ಲಿ ರಹಸ್ಯವಾಗಿರಬೇಕು. ಯಾರಾದರೂ ನಿನ್ನನ್ನು ಕೇಳಿದರೆ, 'ಪ್ರಭುಗಳು ಸಾಮಂತ ಸಭೆಯಿಂದ ಹಿಂದಿರುಗಿದ ಮೇಲೆ ನನಗೇನು ಹೇಳಲಿಲ್ಲ' ಎಂದು ಉತ್ತರ ಕೊಡಬೇಕು, ತಿಳಿಯಿತೇ, ತಲೆ ಹೋಗುವ ವಿಚಾರ. ಇವು ಸದ್ಯದಲ್ಲಿ ನನ್ನ ಹತ್ತಿರ ಇರಲಿ,” ಎಂದನು. - “ಒಡೆಯರ ಆಜ್ಞೆ” ಎಂದು ಕರಣಿಕ ಒಪ್ಪಿಕೊಂಡನು. ಅವನನ್ನು ಕಳುಹಿಸಿ ಕರ್ಣದೇವ, "ಹತನಾದ ಹಂತಕನ ದೇಹವೆಲ್ಲಿದೆ?” ಎಂದನು. ಬಳಿಕ ಅವರು ಮಹಾದ್ವಾರದ ಒಳಗಿನ ಬಯಲಲ್ಲಿ ಮಡಿದ ಹಂತಕನ ಮತ್ತು ಕಾವಲುಭಟರ ದೇಹಗಳಿದ್ದ ಸ್ಥಳಕ್ಕೆ ಹೋದರು. ಪಂಜಿನ ಬೆಳಕಿನಲ್ಲಿ ಹಂತಕನ ಮುಖ ನೋಡಿದಾಗ ಕರ್ಣದೇವ ಬೆದರಿದನು. ದೊಡ್ಡಾಟದಲ್ಲಿ ಖಳನಾಯಕನ ಪಾತ್ರದಂತೆ ಮುಖಕ್ಕೆ ಬಳಿದಿದ್ದ ಹಸಿರು, ಕೆಂಪು ಬಣ್ಣಗಳ ಚಿತ್ರಣದಲ್ಲಿಯೂ ಹಂತಕನ ಗುರುತು ಹಿಡಿದನು ಕರ್ಣದೇವ. ಅವನು ತನ್ನ ಪಾನಗೋಷ್ಠಿಯ ಗೆಳೆಯ, ಪಟ್ಟಾಭಿಷಿಕ್ತ ಚಾಲುಕ್ಯ ಅರಸು, ಭಂಡರಾಜ ಜಗದೇಕಮಲ್ಲನೆಂಬುದನ್ನು ತಿಳಿದನು. ರಾಜಗೃಹದಿಂದ ಅವನು ತಪ್ಪಿಸಿಕೊಂಡದ್ದು ಹೇಗೆ? ದೀವಟಿಗರ ಸಮವಸ್ತ್ರ ಅವನಿಗೆಲ್ಲಿ ಸಿಕ್ಕಿತು ? ಅವನ ಸಂಗಡಿದ್ದ ಇನ್ನೊಬ್ಬ ಹಂತಕನಾರು?