ಪುಟ:ಕ್ರಾಂತಿ ಕಲ್ಯಾಣ.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೦ ಕ್ರಾಂತಿ ಕಲ್ಯಾಣ ಕರ್ಣದೇವನ ಮನೋಭೂಮಿಯಲ್ಲಿ ಈ ಪ್ರಶ್ನೆಗಳು ಮಿಂಚಿನ ವೇಗದಿಂದ ಉದಯಿಸಿ ಅಸ್ತವಾದವು. ಮಡಿದ ಹಂತಕನು ಯಾರೆಂಬುದು ಪ್ರಕಟವಾದರೆ ಕೊಲೆಯ ಹೊಣೆ, ನಿರ್ಬಂಧಿತ ಅರಸನ ರಕ್ಷಕನಾಗಿದ್ದ ತನ್ನ ಮೇಲೆ ಬೀಳುವುದೆಂದು ಕರ್ಣದೇವ ತಿಳಿದನು. ಗುರುತು ಹಚ್ಚಲು ಪ್ರಯತ್ನಿಸುವವನಂತೆ ಕೆಲವು ಕ್ಷಣಗಳು ನೆಟ್ಟ ದೃಷ್ಟಿಯಿಂದ ಹಂತಕನನ್ನು ನೋಡುತ್ತಿದ್ದು ಬಳಿಕ ಕರ್ಣದೇವ, “ನೀವು ಹೇಳಿದ್ದು ಸರಿ, ಹೆಗ್ಗಡೆಗಳೆ. ಯಾರೋ ಅಪರಿಚಿತ ಮನುಷ್ಯ, ನಗರದ ನಿವಾಸಿಯಲ್ಲವೆಂದು ಕಾಣುತ್ತದೆ,” ಎಂದನು. ಅವರು ಪುನಃ ಚಾವಡಿಗೆ ಹಿಂದಿರುಗಿದಾಗ ಮಂಚದ ನಾಲ್ಕು ಕಡೆಗಳಲ್ಲಿ ದೀಪಗಳು ಬೆಳಗುತ್ತಿದ್ದವು. ಮೃತದೇಹದ ಮೇಲೆ ಹೂವುಗಳನ್ನು ಹರಡಿತ್ತು. ಅಂತಃಪುರದ ರಾಣಿಯರು, ಹೆಗ್ಗಡತಿಯರು, ದಾಸಿಯರು ಸುತ್ತ ನಿಂತಿದ್ದರು. ಅಳುವಿನ ದನಿ ಎಲ್ಲೆಡೆ ಕೇಳಿ ಬರುತ್ತಿತ್ತು. “ನೀವು ಇಲ್ಲಿಯೇ ಇರುವುದು ಅಗತ್ಯ ಹೆಗ್ಗಡೆಗಳೆ. ಯಾರೂ ದೇಹವನ್ನು ಮುಟ್ಟದಂತೆ ಎಚ್ಚರದಿಂದ ನೋಡಿಕೊಳ್ಳಿರಿ. ನಾನು ಬಿಡಾರಕ್ಕೆ ಹೋಗಿ ಪುನಃ ಮುಂಜಾವಿಗೆ ಬರುತ್ತೇನೆ. ಅಂತ್ಯದರ್ಶನಕ್ಕಾಗಿ ಜಗದೇಕಮಲ್ಲರಸರನ್ನು ಸಂಗಡ ಕರೆದುಕೊಂಡು ಬರಬೇಕಾಗುವುದು,” ಎಂದು ಹೆಗ್ಗಡೆಗೆ ಹೇಳಿ ಕರ್ಣದೇವ ಮಹಾದ್ವಾರದ ಒಳಗಣ ಬಯಲಿಗೆ ಬಂದನು. ತನ್ನೊಡನೆ ಬಂದಿದ್ದ ಬೋಯಿಗಳು, ರಕ್ಷಕ ಭಟರು, ಮೇನೆಯನ್ನು ಅಲ್ಲಿ ಬಿಟ್ಟು ಎಲ್ಲಿಯೋ ಹೋಗಿದ್ದರು. ಮೇನೆಯ ಹಿಂದೆ ನಾಲ್ಕಾರು ಮಾರು ದೂರದಲ್ಲಿ ಹತರಾದ ಹಂತಕ ಮತ್ತು ಕಾವಲು ಭಟರ ದೇಹಗಳು ಬಿದ್ದಿದ್ದವು. ಇಬ್ಬರು ಭಟರು ಅಲ್ಲಿ ಕಾವಲಿದ್ದರು. ಕರ್ಣದೇವ ಭಟರನ್ನು ಕರೆದು, “ನನ್ನ ಬೋಯಿಗಳು ಭಟರು ಎಲ್ಲಿರುವರೋ ಹುಡುಕಿ ಕರೆದುಕೊಂಡು ಬನ್ನಿರಿ,” ಎಂದು ಹೇಳಿದನು. “ನಾನು ಹೋಗಿ ಹುಡುಕುತ್ತೇನೆ, ಒಡೆಯರೆ. ನನ್ನ ಸಂಗಡಿಗ ಇಲ್ಲಿ ಕಾವಲಿರುತ್ತಾನೆ,” ಎಂದು ಭಟನು ಬಿನ್ನವಿಸಿಕೊಂಡನು. “ಅವರು ಅರಮನೆಯ ಅಂಗಣದಲ್ಲಿರುವರೋ ಹೊರಗೆ ಹೋಗಿರುವರೋ ತಿಳಿಯದು. ನೀವು ಒಬ್ಬೊಬ್ಬರು ಒಂದೊಂದು ಕಡೆ ಹೋಗಿ ಹುಡುಕಿರಿ. ನಾನು ಇಲಿಯೇ ಇರುತ್ತೇನೆ. ಸತ್ತ ದೇಹಗಳು ಎದ್ದು ಓಡಿ ಹೋಗುವುದಿಲ್ಲ,” ಎಂದನು ಪುನಃ ಕರ್ಣದೇವ.