ಪುಟ:ಕ್ರಾಂತಿ ಕಲ್ಯಾಣ.pdf/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೨ ಕ್ರಾಂತಿ ಕಲ್ಯಾಣ ವಾಸಗೃಹಕ್ಕೆ ಎತ್ತಿಕೊಂಡು ಹೋಗಿ ಮಲಗಿಸಬೇಕು,” ಎಂದು ಹೇಳಿದನು. ಹೆಗ್ಗಡೆಗೆ ಅರ್ಥವಾಯಿತು. ಭಟರನ್ನು ಕಳುಹಿಸಿ, ಉರಿಯುತ್ತಿದ್ದ ದೀಪಗಳನ್ನು ಆರಿಸಿ, ಬಳಿಕ ಅವರಿಬ್ಬರು ಜಗದೇಕಮಲ್ಲನ ದೇಹವನ್ನು ಅರಮನೆಯ ಹಿಂಭಾಗದಲ್ಲಿದ್ದ ವಾಸಗೃಹಕ್ಕೆ ತೆಗೆದುಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದರು. ಹೆಗ್ಗಡೆ ಸಂಜೆಗೆ ಮೊದಲೇ ಆಜ್ಞೆ ಮಾಡಿದ್ದಂತೆ ಅರಮನೆಯ ಆ ಭಾಗದಲ್ಲಿ ಕಾವಲು ಭಟರೊಬ್ಬರೂ ಇರಲಿಲ್ಲ. ಜಗದೇಕಮಲ್ಲನ ಪಸಾಯಿತನು ಹೊರಗಿನ ಬಾಗಿಲುಗಳನ್ನು ಭದ್ರಪಡಿಸಿ ಪಾರ್ಶ್ವದ ಮೊಗಶಾಲೆಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದನು. ಕರ್ಣದೇವ ಮತ್ತು ಹೆಗ್ಗಡೆಯ ಹೊರತಾಗಿ ಆಗ ಯಾರೂ ಅಲ್ಲಿ ಎಚ್ಚರವಾಗಿರಲಿಲ್ಲ. ಕರ್ಣದೇವ ಹೆಗ್ಗಡೆಗೆ ನಡೆದುದೆಲ್ಲವನ್ನೂ ವಿವರಿಸಿ, "ರಾಜಗೃಹದಿಂದ ಜಗದೇಕಮಲ್ಲ ತಪ್ಪಿಸಿಕೊಂಡು ಹೋದ ವಿಚಾರ ಬಯಲಾದರೆ ಅಣ್ಣನವರ ಕೊಲೆಗೆ ನಾವು ಕಾರಣರೆಂದು ಜನ ತಿಳಿಯುವರು. ನಿನ್ನ ತಲೆ ಉರುಳುವುದು. ಚಾಲುಕ್ಯ ಸರ್ವಾಧಿಕಾರಿಯಾಗುವ ನನ್ನ ಆಸೆ ಮಣ್ಣುಗೂಡುವುದು. ನಾವು ಬಹಳ ಎಚ್ಚರದಿಂದ ನಡೆದುಕೊಳ್ಳಬೇಕು. ಮೃತದೇಹದ ಸಮವಸ್ತ್ರಗಳನ್ನು ತೆಗೆದು, ಎಂದಿನ ಉಡಿಗೆಗಳನ್ನು ಹಾಕಿ ಮಂಚದ ಮೇಲೆ ಮಲಗಿಸಬೇಕು. ಸಹಾಯವಿಲ್ಲದೆ ನೀನೊಬ್ಬನೇ ಈ ಕಾರ್ಯ ಮಾಡಬಲ್ಲೆಯಾ?” ಎಂದು ಕೇಳಿದನು. “ಮಾಡುತ್ತೇನೆ, ನೀವು ದಯಮಾಡಿ ಅರಮನೆಯ ಈ ಭಾಗಕ್ಕೆ ಭಟರಾರೂ ಬರದಂತೆ ನೋಡಿಕೊಂಡರೆ ಸಾಕು,” ಎಂದು ಹೆಗ್ಗಡೆ ಒಪ್ಪಿಕೊಂಡನು. ಅದರಂತೆ ಮೃತದೇಹದ ಗಾಯಗಳನ್ನು ತೊಳೆದು, ಮುಖಕ್ಕೆ ಹಚ್ಚಿದ್ದ ಬಣ್ಣವನ್ನು ಒರೆಸಿ, ಎಂದಿನ ಉಡುಪುಗಳನ್ನು ಹಾಕಿ ಮಂಚದ ಮೇಲೆ ಮಲಗಿಸಲು ಹೆಗ್ಗಡೆಗೆ ಪ್ರಹರ ಕಾಲ ಹಿಡಿಯಿತು. ಶವಾಗಾರದ ಈ ಕಾರ್ಯವನ್ನು ಮುಗಿಸಿ ಅವನು ಅರಮನೆಯ ಚಾವಡಿಗೆ ಹೋದಾಗ ಕರ್ಣದೇವ ಸುಖಾಸನದಲ್ಲಿ ಕುಳಿತೇ ನಿದ್ದೆ ಮಾಡುತ್ತಿದ್ದನು. ಹೆಗ್ಗಡೆ ಅವನನ್ನು ಎಚ್ಚರಗೊಳಿಸಿ, “ಎಲ್ಲವನ್ನೂ ಮಾಡಿ ಮುಗಿಸಿದ್ದೇನೆ,” ಎಂದನು. “ಈಗ ನೀನು ಸಮುಖದ ಪಸಾಯಿತನನ್ನು ಕರೆದುಕೊಂಡು ವಾಸಗೃಹಕ್ಕೆ ಹೋಗಿ ನೋಡಿ ಜಗದೇಕಮಲ್ಲರಸರು ಸತ್ತರೆಂದು ಬೊಬ್ಬೆ ಎಬ್ಬಿಸಬೇಕು,” ಎಂದು ಕರ್ಣದೇವ ಹೇಳಿದನು. ತುಸುಹೊತ್ತಿನ ಮೇಲೆ ರಾಜಗೃಹದ ಎಲ್ಲ ಕಡೆ ಸುದ್ದಿ ಹರಡಿತು,