ಪುಟ:ಕ್ರಾಂತಿ ಕಲ್ಯಾಣ.pdf/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೩೮೯ ನೀಲಾ. ನನ್ನ ಸರದಿ ಮುಗಿಯಿತು, ಈಗ ನಿನ್ನ ಸರದಿ. ಸಂಗಮನಾಥನ ಪಾಲನೆ ಪೋಷಣೆಗಾಗಿ ನಾನು ಶರಣರ ಸಂಗಡ ಉಳಿವೆಗೆ ಹೋಗುತ್ತೇನೆ. ನೀನು ನಾಳೆಯೆ ಕೂಡಲಸಂಗಮಕ್ಕೆ ಹೋಗು. ಗುರುಕುಲದ ಮೇನೆ ಇಲ್ಲಿಯೇ ಇದೆ. ರಕ್ಷಕ ಭಟರು ಸಂಗಡಿದ್ದಾರೆ. ನಿನ್ನ ಪ್ರವಾಸ ಸುಲಭವಾಗುವುದು.” -ಗಂಗಾಂಬಿಕೆ ಅನುನಯದಿಂದ ಹೇಳಿದಳು. ಆದರೆ ಆ ಮಾತಿನ ಹಿಂದಿದ್ದ ವಿಷಣ್ಣತೆಯನ್ನು ನೀಲಲೋಚನೆಯಿಂದ ಮುಚ್ಚಿಡುವುದು ಅವಳಿಗೆ ಸಾಧ್ಯವಾಗಲಿಲ್ಲ. ನೀಲಲೋಚನೆ ಕೂಡಲೆ ಉತ್ತರ ಕೊಡಲಿಲ್ಲ. ಅನೇಕ ಕ್ಷಣಗಳು ಯೋಚಿಸುತ್ತಿದ್ದು ಬಳಿಕ ಅವಳು, “ನಾನು ಸಂಗಮಕ್ಕೆ ಹೋಗಬೇಕೆಂಬುದು ಅವರ ಇಷ್ಟವೆ? ಆ ಮಾತನ್ನು ಅವರು ಸ್ಪಷ್ಟವಾಗಿ ಹೇಳಿದರೆ?” ಎಂದು ಕೇಳಿದಳು. “ಅವರ ಮನಸ್ಸಿನ ಹಂಬಲವನ್ನು ನಾನು ತಿಳಿಯಲಾರೆನೆ, ನೀಲಾ? ಪಡಿಹಾರಿ ಅಪ್ಪಣ್ಣನು ಸಂಗಮಕ್ಕೆ ಬಂದಾಗ ಅವರ ಮನಸ್ಸು ನಿನ್ನ ವಿಚಾರದಲ್ಲಿ ಅನುಕಂಪದಿಂದ ತಳಮಳಗೊಂಡಿತ್ತು. ಅವರು ಸಂಗಮಕ್ಕೆ ಹೋದ ಮೇಲೆ ನೀನು ಒಂದು ಸಾರಿಯೂ ಕಲಚೂರ್ಯ ಅರಮನೆಗೆ ಹೋಗಲಿಲ್ಲವೆಂದು ತಿಳಿದಾಗ ಅವರು, 'ನೀಲಳನ್ನು ಕೆಲವು ದಿನಗಳು ಇಲ್ಲಿಗೆ ಕರೆಸಿಕೊಂಡರೆ ಒಳ್ಳೆಯದಲ್ಲವೆ?' ಎಂದು ನನ್ನ ಸಲಹೆ ಕೇಳಿದರು, ನಾನು ಅಪ್ಪಣ್ಣನ ಸಂಗಡ ಕಲ್ಯಾಣಕ್ಕೆ ಹಿಂದಿರುಗಿ ನಿನ್ನನ್ನು ಕಳುಹಿಸುವುದಾಗಿ ಹೇಳಿದಾಗ ಒಪ್ಪಿಕೊಂಡರು.” ಗಂಗಾಂಬಿಕೆಯ ಉತ್ತರದಿಂದ ನೀಲಲೋಚನೆ ಮತ್ತೆ ವಿಚಲಿತೆಯಾದಳು. ಮನಸ್ಸಿನ ವಿಷಣ್ಣಭಾವವನ್ನು ಮುಚ್ಚಿಡಲು ಅವಳು, “ಹಠಾತ್ತಾಗಿ ಎಲ್ಲವನ್ನೂ ಬಿಟ್ಟು ಸನ್ಯಾಸಿಯಂತೆ ಸಂಗಮಕ್ಕೆ ಹೋದ ಅವರಿಗೆ ಈಗ ಪತ್ನಿಯ ಹಂಬಲವೇಕೆ?” ಎಂದು ಕಟಕಿಯಾಡಿದಳು. ನೀಲಲೋಚನೆಯ ಉದ್ದೇಶ ಗಂಗಾಂಬಿಕೆಗೆ ಅರಿವಾಯಿತು. ಮಿದುನಗೆ ಸೂಸಿ ಅವಳು ಹೇಳಿದಳು : “ಅವರ ಹಂಬಲದ ಕಾರಣ ನಿನ್ನ ಹಂಬಲದ ನೆರಳೆಂಬುದನ್ನು ಮರೆತೆಯ, ನೀಲಾ? ಅವರ ಚಿತ್ತ ಸ್ಪಟಿಕಶಿಲೆಯಂತೆ ನಿರ್ಮಲ. ನಿನ್ನ ವಿರಹಜ್ವಾಲೆ ಅವರಲ್ಲಿ ಪ್ರತಿಬಿಂಬಿಸಿದೆ. ಅದು ಶಾಂತವಾಗಬೇಕಾದರೆ ನೀನು ಸಂಗಮಕ್ಕೆ ಹೋಗಿ ನಾಲ್ಕು ದಿನಗಳು ಅವರ ಸಹವಾಸದಲ್ಲಿರುವುದು ಅಗತ್ಯ. ಅದಕ್ಕಾಗಿಯೇ ನನ್ನ ಈ ಹಂಚಿಕೆ.” ನೀಲಲೋಚನೆ ಅಪ್ರತಿಭೆಯಾದಳು. ಚತುರತೆಯಿಂದ ಯಾವುದನ್ನು ಮುಚ್ಚಿಡಲು ತಾನು ಪ್ರಯತ್ನಿಸಿದಳೋ ಅದು ಗಂಗಾಂಬಿಕೆಗೆ ತಿಳಿಯಿತೆಂದು ಲಜ್ಜೆಯಾಗಿ ನಿಟ್ಟುಸಿರಿಟ್ಟು ಹೇಳಿದಳು : “ನಾನೇ ಚತುರೆಯೆಂಬ ಭಾವನೆಯಿಂದ