ಪುಟ:ಕ್ರಾಂತಿ ಕಲ್ಯಾಣ.pdf/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೨ ಕ್ರಾಂತಿ ಕಲ್ಯಾಣ ತಂಡದ ನಾಯಕನು ಎಲ್ಲರಂತೆ ಕಪಿನಿ ಚೀವರಗಳನ್ನು ಧರಿಸಿದ್ದರೂ ಅವನ ವೇಷ ವಿಚಿತ್ರವಾಗಿತ್ತು. ಕಚ್ಚೆ ಧೋತ್ರ, ನಡುಕಟ್ಟು ಎದೆಪಟ್ಟ ಅವುಗಳಿಗೆ ಕಟ್ಟಿದ್ದ ಕತ್ತಿ ಕಠಾರಿ ಪರಶು ಗದೆ ಮುಂತಾದ ಆಯುಧಗಳು, ಬೆನ್ನಿಗೆ ಕಟ್ಟಿದ್ದ ಗುರಾಣಿ ಬತ್ತಳಿಕೆಗಳು, ಅವನನ್ನು ವಿಚಿತ್ರಯೋಧನನ್ನಾಗಿ ಮಾಡಿದ್ದವು. ಸಿಡಿಲಂತೆ ಕರ್ಕಶವಾದ ಕಂಠದಿಂದ ಅವನು ಪ್ರಾಕೃತದಲ್ಲಿ ಹೇಳಿದನು : “ನಾವು ಬಸವಣ್ಣನವರ ದರ್ಶನಕ್ಕಾಗಿ ಸಪಾದಲಕ್ಷವನ್ನು ಬಿಟ್ಟು ಮೂರು ತಿಂಗಳಾಯಿತು. ಕಳ್ಳಕಾಕರಿಂದ ತುಂಬಿದ ದುರ್ಗಮ ಪಥದಲ್ಲಿ ಇವರನ್ನು ಸುರಕ್ಷಿತವಾಗಿ ಕರೆದುಕೊಂಡು ಇಂದು ಮುಂಜಾವಿಗೆ ಕಲ್ಯಾಣಕ್ಕೆ ಬಂದೆವು. ಬಸವಣ್ಣನವರು ಕೂಡಲ ಸಂಗಮದಲ್ಲಿರುವುದಾಗಿ ತಿಳಿಯಿತು. ನಿಮ್ಮಲ್ಲಿ ದಾಸೋಹ ಮುಗಿಸಿಕೊಂಡು ನಾವು ಇಂದೇ ಸಂಗಮಕ್ಕೆ ಹೊರಡಲು ಯೋಚಿಸಿದ್ದೇವೆ.” ಸಕಲೇಶ ಮಾದರಸರು ಮೌನ, ಮಾಚಿದೇವರು, “ಕಲ್ಯಾಣದಲ್ಲಿ ನೂರೆಂಟು ಜಂಗಮ ಮಠಗಳಿವೆ. ಅವುಗಳನ್ನೆಲ್ಲ ಬಿಟ್ಟು ನೀವು ಮಹಮನೆಗೆ ಬಂದ ಕಾರಣ?” ಎಂದು ಕುತೂಹಲದಿಂದ ಪ್ರಶ್ನಿಸಿದರು. ತಂಡದ ನಾಯಕನ ಮುಖ ಮಿದುನಗೆಯಿಂದ ಅರಳಿತು. “ಸಾವಿರ ನಕ್ಷತ್ರಗಳು ಹರಿಸಲಾಗದ ಕತ್ತಲನ್ನು ಒಬ್ಬ ಚಂದ್ರ ಹರಿಸುವನಲ್ಲವೆ? ಕಲ್ಯಾಣದಲ್ಲಿ ಮಹಮನೆಯ ಚಂದ್ರನಂತೆ. ಬಂದ ಜಂಗಮರನ್ನು ನೀವು ಹಿಂದಕ್ಕೆ ಕಳುಹಿಸುವುದಾದರೆ ಉಪವಾಸದಿಂದ ಸಂಗಮಕ್ಕೆ ಹೊರಡಬೇಕಾಗುವುದು,” ಎಂದನು ಅವನು. ಈ ಮಾತುಗಳು ನಡೆಯುತ್ತಿದ್ದಂತೆ ನಾಗಲಾಂಬೆ ಚೆನ್ನಬಸವಣ್ಣನವರು ಅಲ್ಲಿಗೆ ಬಂದರು. “ಬಂದ ಅತಿಥಿ ಜಂಗಮರನ್ನು ಹಿಂದಕ್ಕೆ ಕಳುಹಿಸುವುದು ಮಹಮನೆಗೆ ಸಲ್ಲ. ಇವರನ್ನು ಅತಿಥಿಶಾಲೆಯಲ್ಲಿ ಮೂರ್ತ ಮಾಡಿಸಿರಿ, ಅಣ್ಣ. ಸ್ನಾನ ಪೂಜೆ ಆರೋಗಣೆಗಳಿಗೆ ನಾವು ಸಿದ್ಧಮಾಡುತ್ತೇವೆ,” ಎಂದಳು ನಾಗಲಾಂಬೆ. ಮಾದರಸರಾಗಲಿ, ಮಾಚಿದೇವರಾಗಲಿ ನಾಗಲಾಂಬೆಗೆ ಪ್ರತಿ ಹೇಳುವುದು ಸಾಧ್ಯವಿರಲಿಲ್ಲ, “ವಲಸೆಗೆ ವಿಘ್ನ ತರುವುದು ಶಿವನಿಚ್ಚೆಯಾದರೆ ಹಾಗೆಯೇ ನಡೆಯಲಿ” ಎಂದು ಭಾವಿಸಿ ಅವರು ಸುಮ್ಮನಾದರು. ಗಾಡಿಗಳಿಗೆ ಹೇರಿದ್ದ ಪಾತ್ರ ಪದಾರ್ಥ ಪರಿಕರಗಳನ್ನು ಪುನಃ ಕೆಳಗಿಳಿಸಿದರು. ಅತಿಥಿಗೃಹ ಪಾಕಶಾಲೆಗಳ ಕಾಯಕಕ್ಕೆ ಗೊತ್ತಾಗಿದ್ದ ಶರಣ ಶರಣೆಯರ ತಂಡ ಮುಂಜಾವಿನಲ್ಲಿ ನಗರವನ್ನು ಬಿಟ್ಟು ಸಾಮಾನು ಸರಂಜಾಮುಗಳೊಡನೆ ಆಂಜನೇಯ ಹೊಳೆಯಾಚಿನ ಶಿಬಿರಕ್ಕೆ ಹೋಗಿದ್ದುದರಿಂದ ನಾಗಲಾಂಬೆ ನೀಲಲೋಚನೆ 3