ಪುಟ:ಕ್ರಾಂತಿ ಕಲ್ಯಾಣ.pdf/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೩೯೩ ಗಂಗಾಂಬಿಕೆಯರೇ ಎಲ್ಲ ಕೆಲಸಕ್ಕೆ ನಿಲ್ಲಬೇಕಾಯಿತು. ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಬಾಲಕ ಸಂಗಮನಾಥ ಕಾಯಿಪಲ್ಲೆಗಳ ತಟ್ಟೆಗಳನ್ನು ಮುಂದಿಟ್ಟುಕೊಂಡು ಕುಳಿತ. ಅತಿಥಿ ಜಂಗಮರ ಸ್ನಾನ ಪೂಜೆ ಆರೋಗಣೆಗಳು ಮುಗಿಯಲು ಸಂಜೆಯಾಯಿತು. ಜಂಗಮರು ಸಂತೃಪ್ತರಾಗಿ ನಾಗಲಾಂಬೆ ನೀಲಲೋಚನೆ ಗಂಗಾಂಬಿಕೆಯರನ್ನು ಹರಸಿದರು. ಜಂಗಮರ ಮುಖಂಡನು ನಾಗಲಾಂಬೆಗೆ ವಂದಿಸಿ, “ನಿಮ್ಮನ್ನು ಪರೀಕ್ಷೆ ಮಾಡಲು ನಾವು ಬಂದಂತಾಯಿತು, ಅಕ್ಕನವರೆ. ಬಸವಣ್ಣನವರು ನಿಮ್ಮನ್ನು ಹಡೆದ ತಾಯೆಂದೇ ಗೌರವಿಸುವರೆಂದು ಕೇಳಿದ್ದೆವು. ಆ ಗೌರವಕ್ಕೆ ನೀವು ಎಲ್ಲ ಬಗೆಯಿಂದಲೂ ಅರ್ಹರೆಂಬುದು ಈಗ ನಮಗೆ ಮನವರಿಕೆಯಾಯಿತು,” ಎಂದು ಪ್ರಶಂಸಿಸಿದನು. ಮಾಚಿದೇವರು ಚೆನ್ನಬಸವಣ್ಣನವರನ್ನು ಕರೆದು, "ಈಚೆಗೆ ಕೆಲವು ದಿನಗಳಿಂದ ಸಂಜೆಯಾಗುತ್ತಲೆ ನಗರದ ಮಹಾದ್ವಾರಗಳನ್ನು ಮುಚ್ಚಿಬಿಡುತ್ತಾರೆ. ನಾನು ಇವರನ್ನು ಈಗಲೇ ನಗರದಿಂದ ಹೊರಗೆ ಕರೆದುಕೊಂಡು ಹೋಗಿ ಹೊಳೆ ದಾಟಿಸಿ ಬರುತ್ತೇನೆ. ನೀವು ಅಷ್ಟರಲ್ಲಿ ಪಾತ್ರೆ ಪರಿಕರಗಳನ್ನು ಶುದ್ಧಿಗೊಳಿಸಿ ಗಾಡಿಗಳನ್ನು ತುಂಬಿ ಸಿದ್ದರಾಗಿದ್ದರೆ ನಾವು ಈ ರಾತ್ರಿಯೇ ಮಹಮನೆಯನ್ನು ಬಿಟ್ಟು ಮಹಾದ್ವಾರದ ಬಳಿ ತಂಗಿದ್ದು ಮುಂಜಾವಿನಲ್ಲಿ ನಗರವನ್ನು ಬಿಡಬಹುದು. ಇಲ್ಲವೆ ಇನ್ನಾವ ವಿಘ್ನಗಳು ಎದುರಿಗೆ ನಿಲ್ಲುವುವೋ? ಈ ಶಾಪಗ್ರಸ್ಥ ಪಾಪಪುರಿಯಲ್ಲಿ ಇನ್ನೊಂದು ದಿನವಿರುವುದೂ ನನಗಿಷ್ಟವಿಲ್ಲ,” ಎಂದರು. ನಗರದ ನೈರುತ್ಯ ಮಹಾದ್ವಾರದಲ್ಲಿ ಕಾವಲಿದ್ದ ಸೈನ್ಯದಳದ ನಾಯಕ ನಾಗರಾಜ ಮಾಚಿದೇವರಿಗೆ ಪರಿಚಿತನು. ಹಿಂದೆ ಅವರು ಚಾಲುಕ್ಯ ಸೈನ್ಯದಲ್ಲಿ ಅಧಿಕಾರಿಯಾಗಿದ್ದಾಗ ನಾಗರಾಜ ಅವರ ಭಟನಾಗಿದ್ದನು. ಕಾಲಕ್ರಮದಲ್ಲಿ ಮಾಚಿದೇವರು ಅಧಿಕಾರ ಬಿಟ್ಟು ಜಂಗಮರಾಗಿ, ನಾಗರಾಜ ನಾಯಕ ಪದವಿಗೇರಿದ್ದರೂ ಹಿಂದಿನ ಪ್ರಭುಶೃತ್ಯ ಸಾಂಕೇತಿಕವಾಗಿ ಉಳಿದುಕೊಂಡು ಬಂದಿತ್ತು. ಮಾಚಿದೇವರೊಡನೆ ಯಾತ್ರಾ ತಂಡವೊಂದು ಬರುತ್ತಿದೆಯೆಂಬ ಸುದ್ದಿ ತಿಳಿದ ಕೂಡಲೆ ಅವನು ಬಾಗಿಲು ಮುಚ್ಚಿಸುವುದನ್ನು ತಡಮಾಡಿ ಯಾತ್ರಾತಂಡ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟನು. “ನಾನು ಇವರನ್ನು ಹೊಳೆ ದಾಟಿಸಿ ಹಿಂದಿರುಗುತ್ತೇನೆ, ನಾಗರಾಜ ದಿಡ್ಡಿಬಾಗಿಲು ತೆರೆದಿರಲಿ,” ಎಂದು ಹೇಳಿ ಮಾಚಿದೇವರು ಯಾತ್ರಾತಂಡದೊಡನೆ ಹೋದರು. ಪ್ರಹರಾನಂತರ ಅವರು ಹಿಂದಿರುಗಿದಾಗ ದಿಡ್ಡಿಯ ಬಾಗಿಲ ಹೊರಗೆ