ಪುಟ:ಕ್ರಾಂತಿ ಕಲ್ಯಾಣ.pdf/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೪ ಕ್ರಾಂತಿ ಕಲ್ಯಾಣ ಪಂಜಿನ ಬೆಳಕಿನಲ್ಲಿ ಶತಪಥ ತಿರುಗಾಡುತ್ತಿದ್ದ ನಾಗರಾಜ, “ಆ ಜಂಗಮರು ಯಾರು ಅಣ್ಣನವರೆ? ತಂಡದ ನಾಯಕನ ವೇಷ ವಿಚಿತ್ರವಾಗಿತ್ತು?” ಎಂದನು. ಮಾಚಿದೇವರು ಹೇಳಿದರು : “ನೀವು ಸಪಾದಲಕ್ಷ ದೇಶದ ಹೆಸರು ಕೇಳಿಲ್ಲವೆ? ತಂಡದ ನಾಯಕ ಅಲ್ಲಿಯ ಅರಸನ ಸಹೋದರ. ಪದವಿ ಅಧಿಕಾರಗಳನ್ನು ಬಿಟ್ಟು ಕೊಟ್ಟು ಯಾತ್ರಾತಂಡದ ರಕ್ಷಣೆಗಾಗಿ ಸಂಗಡ ಬಂದಿದ್ದಾರೆ. ಬಸವಣ್ಣನವರ ದರ್ಶನಕ್ಕಾಗಿ ಅವರು ಕೂಡಲಸಂಗಮಕ್ಕೆ ಹೊರಟಿದ್ದಾರೆ.” “ತಂಡದ ನಾಯಕ ಎಲ್ಲ ಆಯುಧಗಳನ್ನೂ ಧರಿಸಿದ ಮಾತ್ರಕ್ಕೆ ತಂಡದ ರಕ್ಷಣೆಯಾಗುವುದೆ?” -ನಾಗರಾಜ ನಸುನಕ್ಕು ಪ್ರಶ್ನಿಸಿದ. “ನಾನು ನಾಯಕನನ್ನು ಆ ಪ್ರಶ್ನೆ ಕೇಳಿದೆ. ಅದಕ್ಕವನು ಕೊಟ್ಟ ಉತ್ತರ ಅವನ ವೇಷದಷ್ಟೇ ವಿಚಿತ್ರವಾಗಿತ್ತು.” “ಏನು ಹೇಳಿದ, ಅಣ್ಣನವರೇ?” 'ನಾನು ಈ ಆಯುಧಗಳನ್ನೆಲ್ಲ ಏಕಕಾಲದಲ್ಲಿ ಧರಿಸಿರುವುದು ತೋರಿಕೆಗಾಗಿ; ಜನರನ್ನು ಹೆದರಿಸಲು. ಎಂತಹ ವೀರನೇ ಆಗಿರಲಿ ಒಬ್ಬನು ಏಕಕಾಲದಲ್ಲಿ ಇಷ್ಟೆಲ್ಲ ಆಯುಧಗಳನ್ನು ಉಪಯೋಗಿಸುವುದು ಸಾಧ್ಯವೆ? ನಮ್ಮ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ರಜಪೂತರಿದ್ದಾರೆ. ತಂಡದಲ್ಲಿರುವ ಪ್ರತಿಯೊಬ್ಬರಿಗೂ ಆಯುಧಗಳ ಉಪಯೋಗ ಅಭ್ಯಾಸವಾಗಿದೆ. ಸಮಯ ಬಂದಾಗ ಅವರು ತಮ್ಮ ಕೈಯಲ್ಲಿರುವ ದಂಡಗಳಿಂದಲೆ ಶತೃವನ್ನೆದುರಿಸಬಲ್ಲರು,' ಎಂದು.” “ಬಸವಣ್ಣನವರ ಕೀರ್ತಿ ಆ ದೂರದೇಶದವರೆಗೆ ಹರಡಿದ್ದು ಹೇಗೆ, ಅಣ್ಣನವರೆ?” “ಸಾಧು ಸಂತರೆಂದರೆ ನಮ್ಮವರಿಗೆ ಅಷ್ಟೊಂದು ಆದರ, ನಾಗರಾಜ, ಈಗ ಚಾಲುಕ್ಯರಾಜ್ಯದ ಅರಸು ಯಾರೆಂಬುದು ಕೂಡ ಆ ದೇಶದ ಜನಕ್ಕೆ ತಿಳಿಯದು. ಆದರೆ ಬಸವಣ್ಣನವರ ಹೆಸರನ್ನು ಮಾತ್ರ ಅವರೆಲ್ಲ ಕೇಳಿದ್ದಾರೆ. ಅಂತಹ ಮಹಾತ್ಮರನ್ನು ರಾಜಧಾನಿಯಿಂದ ಹೊರಗೆ ಕಳುಹಿಸಿ ಬಿಜ್ಜಳರಾಯರು ಅನ್ಯಾಯ ಮಾಡಿದರು.” ಮಾಚಿದೇವರು ರಾಜ್ಯ ರಾಜಕೀಯಗಳ ವಿಚಾರ ಹೇಳಿದಾಗ ಮೌನವಾಗಿ ಸುಮ್ಮನಿರುವುದು ನಾಗರಾಜನ ಪದ್ಧತಿಯಾಗಿತ್ತು. ಕಲ್ಯಾಣದ ಸುತ್ತು ಮುತ್ತಿನ ಗ್ರಾಮಪ್ರದೇಶಗಳಲ್ಲಿ ಮಾಚಿದೇವರ ಆಜ್ಞೆ ಆದೇಶಗಳು ರಾಜಾಜ್ಞೆಯಂತೆಯೇ ನಡೆಯುವುದೆಂಬುದು ಅವನಿಗೆ ತಿಳಿದಿತ್ತು. ಗಣಾಚಾರಿ ಭಕ್ತರ ಒಂದು ಸೈನ್ಯದಳವನ್ನೇ ಮಾಚಿದೇವರು ರಚಿಸುತ್ತಿರುವುದಾಗಿ ಜನ ಹೇಳುವುದನ್ನು ಅವನು ಕೇಳಿದ್ದನು. ಈ ಬಗೆಯ ಸುದ್ದಿ ಸುಳುಹುಗಳನ್ನು ಕೇಳಿದರೂ ಕೇಳದಂತಿರುವುದು ಸೈನ್ಯಾಧಿಕಾರಿ