ಪುಟ:ಕ್ರಾಂತಿ ಕಲ್ಯಾಣ.pdf/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೩೯೫ ಅನುಸರಿಸಬೇಕಾದ ಆತ್ಮರಕ್ಷಕ ನೀತಿಯೆಂದು ತಿಳಿದು ಅವನು ಸುಮ್ಮನಿದ್ದನು. “ನಾಳೆ ಮುಂಜಾವಿಗೆ ನಗರವನ್ನು ತ್ಯಜಿಸಲು ನಾವು ನಿರ್ಧರಿಸಿದ್ದೇವೆ, ನಾಗರಾಜ, ನಮ್ಮ ಗಾಡಿಗಳು, ಶರಣರ ತಂಡ, ಬ್ರಹ್ಮಮುಹೂರ್ತದಲ್ಲಿ ಮಹಮನೆಯನ್ನು ಬಿಟ್ಟು ಮಹಾದ್ವಾರದಲ್ಲಿ ಬಂದು ನಿಲ್ಲುವುದು. ನೀವು ಅರ್ಧ ಘಳಿಗೆ ಮೊದಲು ಬಾಗಿಲು ತೆಗೆಸಿದರೆ, ಜನಸಂದಣಿ ಪ್ರಾರಂಭವಾಗುವ ಮೊದಲೆ ಹೊಳೆದಾಟಲು ಅನುಕೂಲ.” -ಹೊರಡುವ ಮೊದಲು ಮಾಚಿದೇವರು ನಾಗರಾಜನಿಗೆ ರಹಸ್ಯವಾಗಿ ಹೇಳಿದರು. “ಸೂರ್ಯೋದಯಕ್ಕೆ ಬಾಗಿಲು ತೆರೆದು ಸೂರ್ಯಾಸ್ತಕ್ಕೆ ಮುಚ್ಚಬೇಕೆಂದು ರಾಜಾಜ್ಞೆ ಅಣ್ಣನವರೆ. ನಾಳೆ ನಾನು ಮೂಡಣ ದಿಕ್ಕಿನಲ್ಲಿ ಸೂರ್ಯನ ಬೆಳಕು ಕಂಡ ಕೂಡಲೆ ಬಾಗಿಲು ತೆಗೆಸುತ್ತೇನೆ. ಮಹಮನೆಯ ಗಾಡಿಗಳಿಂದ ಜನ ಸಂಚಾರಕ್ಕೆ ಅಡ್ಡಿಯಾಗದಿರಲೆಂಬುದು ನನ್ನ ಉದ್ದೇಶ.” ಎಂದು ನಾಗರಾಜ ಎಚ್ಚರದಿಂದ ಉತ್ತರ ಕೊಟ್ಟನು. ದಿಡ್ಡಿ ಬಾಗಿಲಿಂದ ನಗರವನ್ನು ಪ್ರವೇಶಿಸಿ ಮಾಚಿದೇವರು ಮಹಮನೆಯ ಕಡೆ ನಡೆದರು. ನಗರ ಮಧ್ಯದ ಅಂಗಡಿ ಬೀದಿಗಳನ್ನು ಅವರು ದಾಟಿ ಹೋಗಬೇಕಾಗಿತ್ತು. ಅವರು ಅಂಗಡಿ ಬೀದಿಗೆ ಬಂದಾಗ ಜನರು ಅಲ್ಲಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ ನಿಂತು ಮಾತಾಡುತ್ತಿರುವುದನ್ನು ಕಂಡರು. ಅಂಗಡಿ ಮುಂಗಟ್ಟುಬಾಗಿಲುಗಳನ್ನು ವರ್ತಕರು ಅವಸರವಸರವಾಗಿ ಮುಚ್ಚುತ್ತಿದ್ದರು. ಯಾವುದೋ ಅದೃಶ್ಯ ಅವ್ಯಕ್ತ ಭೀತಿ ನಗರವನ್ನು ಮಸುಗುತ್ತಿರುವಂತೆ ಭಾಸವಾಯಿತು. ಪರಿಚಿತನಾದ ಹರದನೊಬ್ಬನನ್ನು ಹತ್ತಿರ ಕರೆದು ಮಾಚಿದೇವರು, “ಸುದ್ದಿಯೇನು ಶೆಟ್ಟರೆ? ಪೇಟೆಯ ಜನರೇಕೆ ಬೆದರಿದಂತೆ ಕಾಣುತ್ತದೆ?” ಎಂದು ಕೇಳಿದರು. “ಜನ ನಿಜವಾಗಿ ಬೆದರಿದ್ದಾರೆ, ಅಯ್ಯನವರೆ, ಏನು ಕಂಡು ಬೆದರಿದರೋ ಯಾರಿಗೂ ತಿಳಿಯದು. ಬೆದರಿಕೆಯ ಕಾರಣ ವಾಸ್ತವದಲ್ಲಿ ಮಕ್ಕಳಾಟದ ಗುಮ್ಮ ಆದರೂ ಆಗಬಹುದು. ಬರುಬರುತ್ತ ಕಲ್ಯಾಣದ ಬದುಕು ವಿಚಿತ್ರವಾಗುತ್ತಿದೆ.” -ಎಂದು ಶೆಟ್ಟಿ ಮಾರ್ಮಿಕವಾಗಿ ಉತ್ತರ ಕೊಟ್ಟನು. ಮಾಚಿದೇವರು ಕೆಲವು ಕ್ಷಣಗಳು ಯೋಚಿಸುತ್ತಿದ್ದು, ಈ ಬೆದರಿಕೆ ಪ್ರಾರಂಭವಾದದ್ದು ಹೇಗೆ?” ಎಂದು ಕೇಳಿದರು. ಶೆಟ್ಟಿ ಹೇಳಿದನು : “ಕೊಂಚ ಹೊತ್ತಿಗೆ ಮೊದಲು ಧರ್ಮಾಧಿಕರಣದ