ಪುಟ:ಕ್ರಾಂತಿ ಕಲ್ಯಾಣ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಕ್ರಾಂತಿ ಕಲ್ಯಾಣ

ಬಿಜ್ಜಳನ ಸಹೋದರನಿಗೆ ಸಹಜವಾದ ದರ್ಪದಿಂದ ಕರ್ಣದೇವನು ಅಗ್ಗಳನನ್ನು ತಲೆಯಿಂದ ಕಾಲವರೆಗೆ ನಿಟ್ಟಿಸಿ, "ಅಗ್ಗಳದೇವ! ಎಲ್ಲಿಯೋ ಕೇಳಿದ ಹಾಗಿದೆ ಹೆಸರು!" ಎಂದನು.

"ಇದುವರೆಗೆ ಇವರು ಚಾಲುಕ್ಯ ಮಹಾರಾಣಿ ಕಾಮೇಶ್ವರೀ ದೇವಿಯವರ ಮನೆ ಹೆಗ್ಗಡೆಯಾಗಿದ್ದರು. ಈಗ ಜಗದೇಕಮಲ್ಲರ ಕಾವ್ಯೋಪದೇಶಕರಾಗಿ ಬಂದಿದ್ದಾರೆ."

"ಇವರ ಕೆಲಸ?"

"ಹೆಸರೇ ಕೆಲಸವನ್ನು ಹೇಳುವುದಲ್ಲವೆ? ಮಹಾರಾಜರೆದುರಿಗೆ ಕಾವ್ಯ ನಾಟಕಗಳನ್ನು ಪಠಿಸಿ ಅರ್ಥ ಹೇಳುವುದು."

ಕರ್ಣದೇವನ ಮುಖ ಗಂಭೀರವಾಯಿತು. "ಎಂದಿನಿಂದ ಮಹಾರಾಜರ ಈ ಕಾವ್ಯಾಸಕ್ತಿ? ಆ ವಿಚಾರ ಅಣ್ಣನವರಿಗೆ ವರದಿ ಮಾಡಿದವರಾರು?" ಎಂದು ಚಡಪಡಿಸಿದನು. ಈ ಅವಿನಯದ ಪ್ರಶ್ನೆಗಳಿಗೆ ಉತ್ತರ ಕೊಡುವುದು ಧರ್ಮಾಧಿಕಾರಿಯ ಕೆಲಸವಲ್ಲವೆಂದು ಭಾವಿಸಿ ಕ್ರಮಿತನು ಮೌನವಾಗಿದ್ದನು.

ಕೊಂಚ ಹೊತ್ತಿನ ಮೇಲೆ ಕರ್ಣದೇವನು ಪುನಃ ಹೇಳಿದನು: "ಆ ಚಪಲ ಹೆಣ್ಣಿನ ಸೇವೆ ಮಾಡಲಾರದೆ ಇವರೇ ಅಣ್ಣನವರನ್ನು ಆಶ್ರಯಿಸಿರಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದರಲ್ಲಿ ತಮ್ಮ ಬುದ್ಧಿಯೆಲ್ಲವನ್ನು ಉಪಯೋಗಿಸುತ್ತಿದ್ದಾರೆ ಅಣ್ಣನವರು."

ಬಿಜ್ಜಳನ ಮೇಲೆ ಕರ್ಣದೇವನ ಅಸಮಾಧಾನಕ್ಕೆ ತಾನು ಅಪೇಕ್ಷಿಸಿದ ಯುವರಾಜ ಪದವಿ ದೊರಕದಿದ್ದುದು ಕಾರಣವೆಂದು ಕ್ರಮಿತನು ತಿಳಿದಿದ್ದನು. ಅನುನಯದ ಮೃದುಕಂಠದಿಂದ, "ಈ ಸಾಮಾನ್ಯ ವಿಚಾರಕ್ಕೆ ನೀವು ಇಷ್ಟೊಂದು ಕೋಪಮಾಡಬಾರದು, ಕರ್ಣದೇವರಸರೆ. ಬಸವಣ್ಣನವರ ನಿರ್ವಾಸನದಿಂದ ಬಿಜ್ಜಳರಾಯರ ಮನಸ್ಸು ಕೆಟ್ಟಿದೆ. ಎರಡು ದಿನ ಕಳೆಯಲಿ, ನಾನು ಎಲ್ಲವನ್ನು ಸರಿಪಡಿಸುತ್ತೇನೆ. ನಿಮ್ಮ ಸಲಹೆಯಿಲ್ಲದೆ ರಾಜಗೃಹದಲ್ಲಿ ಯಾವ ಕಾರ್ಯವೂ ನಡೆಯದಂತೆ ಏರ್ಪಡಿಸುತ್ತೇನೆ" ಎಂದು ಸಮಾಧಾನ ಹೇಳಿದನು.

ತನ್ನ ವಿಷಯವಾಗಿ ಈ ಮಾತುಗಳು ನಡೆಯುತ್ತಿದ್ದಂತೆ ಅಗ್ಗಳನು ಉದಾಸೀನನಂತೆ ಓಲಗಶಾಲೆಯ ಬಾಗಿಲನ್ನು ನೋಡುತ್ತ ನಿಂತಿದ್ದನು. ಕರ್ಣದೇವನ ಉದ್ಧಟವರ್ತನೆಯ ವಿಚಾರ ಅವನು ಕೇಳಿದ್ದನು. ಒಂದು ಸಾರಿ ಸಾಮಂತರ ಸಭೆಯಲ್ಲಿ ಕರ್ಣದೇವನು ಕಾಮೇಶ್ವರಿಯ ಬಗೆಗೆ ಕುಚೋದ್ಯದ ಮಾತಾಡಿ ಬಿಜ್ಜಳನಿಂದ ಬೈಗುಳ ತಿಂದಿದ್ದನೆಂದು ಜನ ಹೇಳುತ್ತಿದ್ದುದು ಅಗ್ಗಳನಿಗೆ ತಿಳಿದಿತ್ತು.