ಪುಟ:ಕ್ರಾಂತಿ ಕಲ್ಯಾಣ.pdf/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ ಆಮೇಲೆ ನೋಡಬಹುದೆಂದು ಹಾಗೆಯೇ ಇಟ್ಟಿದ್ದೆ.” -ಎಂದು ಹೇಳಿ ನಾಗರಾಜ ಆಜ್ಞೆಯ ಮುದ್ರೆಯೊಡೆದು ನೋಡಿದನು. “ಪುನಃ ಆಜ್ಞೆ ಮಾಡುವವರೆಗೆ ನಗರದ ಮಹಾದ್ವಾರಗಳನ್ನು ಮುಚ್ಚಿರತಕ್ಕದ್ದು. ನಮ್ಮ ವಿಶೇಷ ಅನುಮತಿಯಿಲ್ಲದೆ ಯಾರನ್ನೂ ನಗರದಿಂದ ಹೊರಗೆ ಹೋಗಲು, ನಗರದೊಳಗೆ ಬರಲು ಬಿಡಕೂಡದು,” ಎಂದು ಮಾಧವ ದಂಡನಾಯಕನು ಆಜ್ಞೆ ಮಾಡಿದ್ದನು. “ನೀವು ಸ್ವಲ್ಪ ತಡವಾಗಿ ಬಂದಿದ್ದರೂ ಈ ಆಜ್ಞೆ ನನ್ನ ಕೈಕಟ್ಟಿ ಬಿಡುತ್ತಿತ್ತು, ಅಯ್ಯನವರೆ. ಶಿವನು ರಕ್ಷಿಸಿದನು,” ಎಂದು ನಿಟ್ಟುಸಿರಿಟ್ಟು ನುಡಿದನು ನಾಗರಾಜ. “ಕಲಿದೇವರ ದೇವನು ನಂಬಿದವರನ್ನು ಕೈಬಿಡುವುದಿಲ್ಲ,” ಎಂದು ಮಾಜಿ ದೇವರು ಉತ್ತರಿಸಿದರು. ಶರಣರೆಲ್ಲ ಮಹಾದ್ವಾರದಿಂದ ಹೊರಗೆ ಹೋದ ಮೇಲೆ ಮಾಚಿದೇವರು ನಾಗರಾಜನಿಂದ ಬೀಳ್ಕೊಳ್ಳುತ್ತ "ಅರಮನೆಯ ದುರ್ಘಟನೆಯ ವಿಚಾರ ಏನಾದರೂ ತಿಳಿಯಿತೆ?” ಎಂದು ಕೇಳಿದರು. ನಾಗರಾಜ ಪಿಸುದನಿಯಲ್ಲಿ ಹೇಳಿದನು : "ಧರ್ಮಾಧಿಕರಣದ ರಹಸ್ಯ ಸಭೆಯಿಂದ ಅರಮನೆಗೆ ಹಿಂದಿರುಗಿದ ಕೊಂಚ ಹೊತ್ತಿಗೆ ಬಿಜ್ಜಳರಾಯರು ಕೊಲೆಯಾದರಂತೆ. ಕರ್ಣದೇವರಸರು ಬಂಧನದಲ್ಲಿ. ಮಾಧವ ದಂಡನಾಯಕರು ತಾವೇ ಸರ್ವಾಧಿಕಾರಿಯಾಗಲು ಪ್ರಯತ್ನಿಸುತ್ತಿದ್ದಾರೆ. ಶರಣರ ಯಾತ್ರಾದಳವನ್ನು ನೀವು ಬೇಗ ಆಂಜನೇಯ ಹೊಳೆ ದಾಟಿಸಿಬಿಡಿ, ಅಯ್ಯನವರೆ” ಮಾಚಿದೇವರು ಕೆಲವು ಕ್ಷಣಗಳು ಸ್ತಂಭಿತರಂತೆ ನಿಂತುಬಿಟ್ಟರು. ಬಳಿಕ ಅವರು ಗಂಭೀರವಾಗಿ ಹೆಜ್ಜೆಯಿಡುತ್ತ ಶರಣರ ಯಾತ್ರಾದಳವನ್ನು ಹಿಂಬಾಲಿಸಿದರು. ಪೂರ್ವಾಹ್ನ ಮೊದಲ ಜಾಮ ಮುಗಿಯುತ್ತಿದ್ದಂತೆ ಶರಣರ ಯಾತ್ರಾದಳ ಆಂಜನೇಯ ಹೊಳೆಯನ್ನು ದಾಟಿತು. ಹೊಳೆಯಾಚಿನ ದಡದಲ್ಲಿ ಗಣಾಚಾರದ ಭಕ್ತಯೋಧರ ಮುಂಚೂಣಿ ತಂಡ ಅವರನ್ನು ಸ್ವಾಗತಿಸಲು ಸಿದ್ದವಾಗಿ ನಿಂತಿತ್ತು. ಮಾಚಿದೇವರನ್ನು ಕಂಡಾಗ ಅವರು, “ಕಲಿದೇವರದೇವ ಉಘ ! ಉಘ !” ಎಂದು ಜಯಧ್ವನಿ ಮಾಡಿದರು. ಬಳಿಕ ಅವರು ಶರಣರನ್ನು ಹೊಳೆಯಾಚೆ ಸುಮಾರು ಹರದಾರಿ ದೂರದಲ್ಲಿದ್ದ ತಮ್ಮ ಶಿಬಿರಕ್ಕೆ ಕರೆದುಕೊಂಡು ಹೋದರು, ಅಲ್ಲಿ ಶರಣರಿಗಾಗಿ ಎರಡು ದೊಡ್ಡ ಹಸಿರುವಾಣಿ ಮಂಟಪಗಳು ರಚಿಸಲ್ಪಟ್ಟಿದ್ದವು. ಹಿಂದಿನ ದಿನ ಮುಂಜಾವಿನಲ್ಲಿ ಮಹಮನೆಯನ್ನು ಬಿಟ್ಟಿದ್ದ ಶರಣ ಶರಣೆಯರು ಸ್ನಾನ ಪೂಜೆ ಆರೋಗಣೆಗಳಿಗೆ ಸಿದ್ಧ ಮಾಡುತ್ತಿದ್ದರು.