ಪುಟ:ಕ್ರಾಂತಿ ಕಲ್ಯಾಣ.pdf/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೦೩ ಶಿಬಿರದ ನಡುವೆಯಿದ್ದ ಅಶ್ವತ್ಥ ಮರದಡಿಯ ವಿಶಾಲವಾದ ಜಗುಲಿಯ ಮೇಲೆ ಸಕಲೇಶ ಮಾದರಸರು, ಚೆನ್ನಬಸವಣ್ಣನವರು, ಸೊಡ್ಡಲ ಬಾಚರಸರು, ಇವರೇ ಮೊದಲಾದ ಹಿರಿಯ ಶರಣರನ್ನು ಕುಳ್ಳಿರಿಸಿ, ಮಾಚಿದೇವರು ಅವರಿಗೆ ಗಣಾಚಾರದ ಭಕ್ತಯೋಧರ ಪರಿಚಯ ಮಾಡಿಕೊಟ್ಟರು. ಬಳ್ಳಿಗಾವೆ, ಸಿಂಧವಾಡಿ ಕೋಗಲೆ, ವೇಣುಗ್ರಾಮ ಮುಂತಾದ ಕಡೆಗಳಿಂದ ಶರಣರ ರಕ್ಷಣೆಗಾಗಿ ಬಂದಿದ್ದ ಯೋಧರೂ ಅವರ ಸಂಗಡಿದ್ದರು. ಸಭ್ಯಾಚಾರದ ಈ ಪ್ರಸ್ತಾವನೆ ಮುಗಿದ ಮೇಲೆ ಮಾಚಿದೇವರು ನೆರೆದಿದ್ದವರನ್ನು ಉದ್ದೇಶಿಸಿ ಹೇಳಿದರು : "ಮಹಮನೆಯ ಶರಣರನ್ನು ಕಲ್ಯಾಣದ ಮೃತ್ಯು ಪಂಜರದಿಂದ ಪಾರುಮಾಡಿ ಆಂಜನೇಯ ಹೊಳೆ ದಾಟಿಸುವುದು ನನ್ನ ದೊಡ್ಡ ಹೊಣೆಯಾಗಿತ್ತು. ಕಲಿದೇವರ ದೇವನ ಕರುಣೆಯಿಂದ ಅದನ್ನು ನಿರ್ವಹಿಸಲು ನಾನು ಶಕ್ತನಾದೆ. ಇನ್ನು ಮುಂದೆ ಉಳಿವೆಯನ್ನು ಸೇರುವವರೆಗೆ ಅವರ ರಕ್ಷಣೆಯ ಹೊಣೆ ನನ್ನಂತೆ ಇಲ್ಲಿ ನೆರದಿರುವ ಭಕ್ತಯೋಧರಿಗೂ ಸೇರಿರುತ್ತದೆ. ಉಳಿವೆಯ ಮಾರ್ಗದಲ್ಲಿ ನಾವು ಮುಂದೆ ಮುಂದೆ ಹೋದಂತೆ ನಮ್ಮ ಬಲವೂ ಹೆಚ್ಚುತ್ತದೆ. ಸೊನ್ನಲಾಪುರದ ಸಿದ್ದರಾಮ ಶಿವಯೋಗಿಗಳು, ಅಬ್ಬಲೂರಿನ ಏಕಾಂತ ರಾಮಯ್ಯನವರು, ಅಣ್ಣಿಗೇರಿಯ ಗೊಗ್ಗಿದೇವರಸರು, ತಾಳಿಕೋಟೆಯ ವಿರುಪರಸರು, ಸಿಂಧನಾಡಿನ ಇಮ್ಮಡಿ ರಾಚಮಲ್ಲರಸರು, ದಶಗಣದ ಸಿಂಗಿದೇವರು, ತಮ್ಮ ಕಡೆಯ ಗಣಾಚಾರಿ ದಳಗಳನ್ನು ಕಳುಹಿಸಿರುವುದಾಗಿ ಸುದ್ದಿ ಬಂದಿದೆ. ಬಿಜ್ಜಳರಾಯರ ಮಹಾಸೈನ್ಯ ಮುಂದೆ ನಮ್ಮನ್ನೇನೂ ಮಾಡಲಾರದು. ವಲಸೆ ಹೊರಡಲು ನಿರಾಕರಿಸಿ ಕಲ್ಯಾಣದಲ್ಲಿ ಉಳಿದ ಜಂಗಮರ ಮತ್ತು ಶರಣರ ವಿಚಾರದಲ್ಲಿ ನನ್ನ ಅನುಕಂಪ ವಿಷಾದಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸುವುದು ನನಗೆ ಅತಿದುಃಖದ ಕರ್ತವ್ಯವಾಗಿದೆ. ಅವರ ರಕ್ಷಣೆಗೆ ಏರ್ಪಡಿಸಲು ಅಸಮರ್ಥನಾದೆನೆಂಬುದು ನನ್ನ ದೊಡ್ಡ ಚಿಂತೆ. ಮಾಧವ ನಾಯಕನ ದಯಾಶೂನ್ಯ ಮಹಾಕ್ರೂರಿ ಸೈನ್ಯದಳಗಳು ಅವರನ್ನು ಮತ್ತಾವ ಹಿಂಸೆಗಳಿಗೆ ಗುರಿಪಡಿಸುವುದೋ ಯಾರು ಬಲ್ಲರು. ಕಲ್ಯಾಣದ ಶೈವಮಠಗಳನ್ನೆಲ್ಲ ನಾಶಮಾಡಿ, ಶರಣ ಧರ್ಮವನ್ನು ನಿರ್ಮೂಲಗೊಳಿಸುವುದು ಬಿಜ್ಜಳನ ಉದ್ದೇಶ. ಅದನ್ನು ಕಾರ್ಯಗತ ಮಾಡಲು ಅವನು ಮಾಧವ ನಾಯಕನನ್ನು ಮಹಾಸೇನಾನಿಯಾಗಿ ನಿಯಮಿಸಿದನು. ಕಲ್ಯಾಣದ ಮೃತ್ಯುಂಪಂಜರದಲ್ಲಿ ಇನ್ನೂ ಉಳಿದಿರುವ ಶರಣರನ್ನು ರಕ್ಷಿಸುವುದು ಕಲಿದೇವರ ದೇವನಿಗೆ ಮಾತ್ರ ಸಾಧ್ಯ.” -ಎಂದು ಹೇಳಿ ಮಾಚಿದೇವರು ಒಂದು ಸಾರಿ ಸಭೆಯ ಸುತ್ತ ದೃಷ್ಟಿ