ಪುಟ:ಕ್ರಾಂತಿ ಕಲ್ಯಾಣ.pdf/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮ ಕ್ರಾಂತಿ ಕಲ್ಯಾಣ ಓಲೆಯನ್ನು ನಾಗಲಾಂಬೆಗೆ ಕೊಟ್ಟಳು. ನಾಗಲಾಂಬೆ ಓದಿದಳು. “ಇಪ್ಪೆಯ ಹೂವನನುಗೊಳಿಸಲು...” ಎಂಬ ವಚನದಡಿಯಲ್ಲಿ, “ನಾನಾರ ಸಾರುವನೆಂದು ಚಿಂತಿಸಲೇಕಯ್ಯ?” ಎಂಬ ಇನ್ನೊಂದು ವಚನವನ್ನೂ ಸೇರಿಸಿದ್ದಳು ನೀಲಲೋಚನೆ. “ಇದು ನಿನ್ನ ಅಂತ್ಯ ನಿರ್ಧಾರವೆ?” ನಾಗಲಾಂಬೆ ಗಂಭೀರವಾಗಿ ಪ್ರಶ್ನಿಸಿದಳು. ನೀಲಲೋಚನೆ ತಲೆಯಾಡಿಸಿ ಒಪ್ಪಿಕೊಂಡಳು. “ಕಲ್ಯಾಣದ ದುರ್ಘಟನೆಯನ್ನು ಬಸವೇಶನಿಗೆ ತಿಳಿಸಲು ಅಪ್ಪಣ್ಣ ಹೋಗುತ್ತಿದ್ದಾನೆ. ಮೊದಲು ಆ ಕಾರ್ಯ ಮಾಡಿ ಆಮೇಲೆ ನಿನ್ನ ಓಲೆ ಕೊಡುವಂತೆ ಅವನಿಗೆ ಹೇಳುತ್ತೇನೆ. ನಿನ್ನ ನಿರ್ಧಾರದ ಅಂತಃಸತ್ವವನ್ನು ಅರಿಯುವ ಆತ್ಮ ವಿಶ್ವಾಸವನ್ನು ಬಸವೇಶನಿಗೆ ಕರುಣಿಸಲಿ ಸಂಗಮನಾಥನು,” -ಎಂಬ ನಾಗಲಾಂಬೆ ಅಲ್ಲಿಂದ ಹೊರಟಳು. ನೀಲಲೋಚನೆ ಮೌನ. “ತಾನು ಮಾಡಿದ್ದು ಸರಿಯೆ?” ಎಂಬ ಚಿಂತೆಯಲ್ಲಿ ಮಗ್ನವಾಗಿತ್ತು ಅವಳ ಚಿತ್ತ. ಆ ಮೌನವನ್ನು ಭೇದಿಸಲು ಗಂಗಾಂಬಿಕೆ ಇಚ್ಚಿಸಲಿಲ್ಲ. ಪಡಿಹಾರಿ ಅಪ್ಪಣ್ಣನನ್ನು ಕೂಡಲ ಸಂಗಮಕ್ಕೆ ಕಳುಹಿಸಿ ನಾಗಲಾಂಬೆ ಶಿಬಿರಕ್ಕೆ ಬಂದಾಗ ಅಶ್ವತ್ಥ ಕಟ್ಟೆಯ ಬಳಿ ಚೆನ್ನಬಸವಣ್ಣನವರು, ಮಾಚಿದೇವರು, ಇಬ್ಬರು ಹೊಸ ಜಂಗಮರ ಸಂಗಡ ಮಾತಾಡುತ್ತಿರುವುದನ್ನು ಕಂಡು ಸಮೀಪಕ್ಕೆ ಹೋದಳು. ಸೊನ್ನಲಾಪುರದ ಸಿದ್ದರಾಮೇಶ್ವರ ಶಿವಯೋಗಿ ಮತ್ತು ಮೋಳಿಗೆಯ ಮಾರಯ್ಯ, ಇವರು ಕೊಂಚ ಹೊತ್ತಿನ ಮೊದಲು ಅಲ್ಲಿಗೆ ಬಂದಿದ್ದರು. ಶಿವಯೋಗಿ ಹೇಳುತ್ತಿದ್ದರು : “ನಿಮ್ಮಿಂದ ವಲಸೆಯ ಸುದ್ದಿ ಬಂದ ದಿನೇ ಹೊರಡಲು ಯೋಚಿಸಿದೆ. ಅಷ್ಟರಲ್ಲಿ ಯಾತ್ರೆಗಾಗಿ ಉಜ್ಜಯಿನಿಗೆ ಹೋಗಿದ್ದ ಏಳು ನೂರು ಎಪ್ಪತ್ತು ಮಂದಿ ಜಂಗಮರು ಸೊನ್ನಲಾಪುರಕ್ಕೆ ಬಂದರು. ಅವರ ಊಟ ಉಪಚಾರ ವಸತಿಗಳೀಗೆ ಏರ್ಪಡಿಸಲು ಒಂದು ದಿನ ನಿಲ್ಲಬೇಕಾಯಿತು. ಮರುದಿನ ಹೊರಟವನು ಈ ದಿನ ಮುಂಜಾವಿನಲ್ಲಿ ಕಲ್ಯಾಣಕ್ಕೆ ಬಂದೆ. ಮೋಳಿಗೆಯ ಮಾರಯ್ಯನವರು ನಗರದ ದುರ್ಘಟನೆಯನ್ನು ವಿವರಿಸಿ ನೀವು ನೆನ್ನಿನ ರಾತ್ರಿಯೇ ನಗರವನ್ನು ಬಿಟ್ಟುದಾಗಿ ತಿಳಿಸಿದರು, ನಮ್ಮನ್ನು ಇಲ್ಲಿಗೆ ಕರೆತಂದರು. ನೀವು ಯಾವ ಉದ್ದೇಶದಿಂದ ವಲಸೆ ಹೊರಟಿರುವಿರೋ ಆ ಕಾರ್ಯ ಸಫಲವಾಗಲೆಂದು ಕಪಿಲ ಸಿದ್ಧಮಲ್ಲಿಕಾರ್ಜುನನಲ್ಲಿ ನಮ್ಮ ಪ್ರಾರ್ಥನೆ.” ಶುಭಾಶಯಗಳಿಗಾಗಿ ವಂದಿಸಿ ಚೆನ್ನಬಸವಣ್ಣನವರು, “ನೀವು ನಮ್ಮ ಸಂಗಡ ಉಳಿವೆಗೆ ಬರುವುದಿಲ್ಲವೆ ?” ಎಂದು ಕೇಳಿದರು.