ಪುಟ:ಕ್ರಾಂತಿ ಕಲ್ಯಾಣ.pdf/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಹಾಪ್ರಸ್ಥಾನ

೪೧೫

ಸಂಕೇತವಾಗಿ. ಪ್ರಜಾಪೀಡಕ ರಾಜಸತ್ತೆ ಅಧಿಕಾರದಲ್ಲಿರುವವರೆಗೆ ನಿರುಪದ್ರವಿಗಳೂ ನಿಸ್ಸಹಾಯಕರೂ ಆದ ಪ್ರಜೆಗಳಿಗೆ ಅರಣ್ಯವೇ ವಾಸಿ. ಅದಕ್ಕಾಗಿ ಶರಣರು ಸಹ್ಯಾದ್ರಿಯ ವನ್ಯಪ್ರದೇಶಗಳಲ್ಲಿ ಆಶ್ರಮಗಳನ್ನು ರಚಿಸಿಕೊಂಡು ಅರಣ್ಯವಾಸಿಗಳಾಗಿ ತಮ್ಮ ಮಣಿಹವನ್ನು ಪೂರೈಸಲು ನಿರ್ಧರಿಸಿದ್ದಾರೆ.”

ಮಾರಯ್ಯನವರ ನುಡಿಗಳೂ ಕರ್ಣದೇವನನ್ನು ಮತ್ತೆ ತೊಡಕಿನಲ್ಲಿ ಹಾಕಿದವು. “ನಿಮ್ಮ ಮಾತುಗಳು ನನಗೆ ಅರ್ಥವಾಗುತ್ತಿಲ್ಲ, ಅಣ್ಣನವರೆ,” ಎಂದನು ಅವನು.

ಮಾರಯ್ಯನವರು ಮತ್ತೆ ನುಡಿದರು : “ಶರಣರು ತಿಳಿದಿರುವಂತೆ ಮಾನವರಲ್ಲಿ ಎರಡು ವರ್ಗ-ಪ್ರಜಾಪೀಡಕರು, ಪ್ರಜಾಸಾಮಾನ್ಯರು ಎಂದು. ರಾಜನು, ಅವನ ಅಧೀನರಾಗಿ ರಾಜಾಜ್ಞೆಗಳನ್ನು ಕಾರ್ಯಗತ ಮಾಡುವ ಮಂತ್ರಿ ಸಾಮಂತರು, ಅಧಿಕಾರಿ ನಿಯುಕ್ತರು. ಕರಣಿಕ-ಸೈನಿಕ-ಭಟರು, ಇವರು ಮೊದಲ ವರ್ಗ. ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪ್ರಜಾಪೀಡಕರು. ತಾವು ದುಡಿಯದೆ ಬೇರೆಯವರ ದುಡಿತದಲ್ಲಿ ಹೆಚ್ಚಿನ ಭಾಗವನ್ನು ವಂಚನೆಯಿಂದಲೋ ಬಲಾತ್ಕಾರದಿಂದಲೋ ಕಸಿದುಕೊಂಡು ಅದರಿಂದ ಜೀವಿಸುವುದರಿಂದ ಇವರನ್ನು ಪರೋಪಜೀವಿಗಳೆಂದೂ ಕರೆಯುತ್ತಾರೆ. ಕೃಷಿ, ಕಲೆ, ವಾಣಿಜ್ಯ ಮುಂತಾದ ಕಾಯಕಗಳಿಂದ ಜೀವಿಸುವವರೆಲ್ಲ ಎರಡನೆಯ ವರ್ಗ. ಪ್ರಜಾಸಾಮಾನ್ಯರು, ಪ್ರಜಾಪೀಡಕರೆಂದು ಕರೆಯಲ್ಪಡುವ ಮೊದಲನೆಯ ವರ್ಗದವರು, ಪ್ರಜಾಸಾಮಾನ್ಯರೆಂದು ಕರೆಯಲ್ಪಡುವ ಎರಡನೆಯ ವರ್ಗದವರನ್ನು ಸುಲಿದು ತಿನ್ನಲು ರಾಜಸತ್ತೆಯಲ್ಲಿ ಹೆಚ್ಚು ಅವಕಾಶ ಅನುಕೂಲಗಳಿರುವುದರಿಂದ ಶರಣರು ಅದನ್ನು ವಿರೋಧಿಸುತ್ತಾರೆ. ರಾಜಸತ್ತೆಯ ಪ್ರಭಾವಲಯದಿಂದ ಸಾಧ್ಯವಿದ್ದಷ್ಟು ದೂರದಲ್ಲಿರುವುದು ವಲಸೆಯ ಉದ್ದೇಶಗಳಲ್ಲೊಂದು.”

“ರಾಜನಿಲ್ಲದ ರಾಜ್ಯವುಂಟೆ ? ನೀವು ಹೇಳುವುದು ಪರಸ್ಪರ ವಿರೋಧವಾಗಿದೆ, ಅಣ್ಣನವರೆ.” -ಕರ್ಣದೇವ ಯೋಚಿಸಿ ಹೇಳಿದನು.

ಮಾರಯ್ಯನವರೆಂದರು : “ಪ್ರಜಾಪೀಡೆಗೆ ಎಲ್ಲಿ ಅವಕಾಶವಿರುವುದಿಲ್ಲವೋ, ಅಥವಾ ಗಣನೀಯವಲ್ಲದ ಅಲ್ಪ ಅವಕಾಶ ಮಾತ್ರ ಇರುವುದೋ ಅಂತಹ ರಾಜ್ಯ ಪದ್ದತಿ ಬೇಕು ಶರಣರಿಗೆ.”

“ಯಾವುದಿದೆ ಅಂತಹ ರಾಜ್ಯ ವಿಧಾನ?”

“ಭಾರತದ ಇತಿಹಾಸ ಪುರಾಣಗಳು ಅದಕ್ಕೆ ಉತ್ತರ ಕೊಡುತ್ತವೆ, ಕರ್ಣ ದೇವರಸರೆ. ನಮ್ಮ ದೇಶದಲ್ಲಿ ವೇದಗಳ ಕಾಲದಿಂದ ಗಣರಾಜ್ಯ ಪದ್ಧತಿ ಆಚರಣೆಯಲ್ಲಿತ್ತು. ಪ್ರಜೆಗಳನ್ನು ಪ್ರತಿನಿಧಿಸುವ ಸಮಿತಿ ಸಂಸ್ಥೆಗಳು ರಾಜ್ಯದ