ಪುಟ:ಕ್ರಾಂತಿ ಕಲ್ಯಾಣ.pdf/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಹಾಪ್ರಸ್ಥಾನ

೪೧೯

ಭಕ್ತ, ಮಾಹೇಶ್ವರ, ಪ್ರಸಾದಿ, ಈ ಮೂರು ಸ್ಥಳಗಳಲ್ಲಿ, ಸೀಮಿತವಾಗಿದ್ದ ಶರಣಧರ್ಮ, ಪ್ರಾಣಲಿಂಗಿ ಸ್ಥಳದಲ್ಲಿ ಆ ಸೀಮಾಬಂಧನಗಳಿಂದ ಮುಕ್ತವಾಗಿ ವಿಶ್ವದತ್ತ ನಡೆಯುತ್ತದೆ; ಜಾತಿ ಮತ ಕಾಲ ದೇಶಗಳ ಪರಿಮಿತಿಯನ್ನು ದಾಟಿ ತನ್ನ ಪ್ರಭಾವಲಯದಲ್ಲಿ ಮನುಕುಲವನ್ನೇ ಅಳವಡಿಸಿಕೊಳ್ಳುವ ವಿಶ್ವಧರ್ಮವಾಗುತ್ತದೆ.

" 'ಕಕ್ಷೆ, ಕರಸ್ಥಳ, ಕಂಠ' ಎಂದು ಪ್ರಾರಂಭವಾಗುವ ಈ ವಚನದಲ್ಲಿ ಪ್ರಭುದೇವರು ಪ್ರಾಣಲಿಂಗಿ ಸ್ಥಳವನ್ನು ನಿರೂಪಿಸುತ್ತ ಶರಣಧರ್ಮವನ್ನು ವಿಶ್ವಧರ್ಮವನ್ನಾಗಿ ಮಾರ್ಪಡಿಸುವ ಯುಕ್ತಿಯನ್ನು ಸೂಚಿಸಿದ್ದಾರೆ. ಅಂಗವೆಂದರೆ ಜೀವ, ಲಿಂಗವೆಂದರೆ ಬ್ರಹ್ಮ. ಈ ಜೀವಬ್ರಹ್ಮೈಕ್ಯವನ್ನು ಶರಣಧರ್ಮ ಲಿಂಗಾಂಗ ಸಾಮರಸ್ಯವೆಂದು ನಿರ್ದೇಶಿಸುತ್ತದೆ. ಕ್ರಮ ಕ್ರಮವಾಗಿ ಜೀವಬ್ರಹ್ಮೈಕ್ಯವನ್ನು ಸಾಧಿಸುವುದು ಷಟ್‌ಸ್ಥಳದ ಉದ್ದೇಶ. ಭಕ್ತ, ಮಾಹೇಶ್ವರ, ಪ್ರಸಾದಿ ಸ್ಥಳಗಳಲ್ಲಿ ಹೇಳಲ್ಪಟ್ಟ ವಿಧಿನಿಷೇದ ರೂಪವಾದ ಕರ್ಮಗಳಿಂದ ಸಂಸ್ಕಾರ ವಿಭಿನ್ನವೂ, ನಿವೃತ್ತಿ ಪ್ರಧಾನವೂ ಆದ ಜ್ಞಾನದ ಕಡೆಗೆ ತಿರುಗುತ್ತಾನೆ. ಅಂತರಂಗದಲ್ಲಿ ಬ್ರಹ್ಮವನ್ನು ಅರಿಯುವ ಶಿವಯೋಗ ವಿಧಾನವನ್ನು ತಿಳಿಯದ ಭಕ್ತ ಮಾಹೇಶ್ವರ ಪ್ರಸಾದಿ ಸ್ಥಳದ ಸಾಧಕರು, ಕಂಕುಳು, ಅಂಗೈ, ಕೊರಳು, ಶಿರಸ್ಸು, ಮುಖ, ಈ ಸ್ಥಾನಗಳಲ್ಲಿ, ಬ್ರಹ್ಮನ ಪ್ರತೀಕವಾದ ಲಿಂಗವನ್ನು ಸಜ್ಜೆ ಅಥವಾ ಸಂಪುಟದಲ್ಲಿಟ್ಟು ಆ ಸೆಜ್ಜೆ ಅಂಗಕ್ಕೆ ಸೋಂಕುವಂತೆ ಧರಿಸುವ ವಿಧಾನ ಹೇಳಲ್ಪಟ್ಟಿತು. ಇವು ಬಹಿರಂಗ ಲಾಂಛನಗಳು ಮಾತ್ರ. ಅಂತರಂಗದಲ್ಲಿ ಬ್ರಹ್ಮವನ್ನು ಅಳವಡಿಸಿಕೊಳ್ಳುವ ಶಿವಯೋಗ ವಿಧಾನವನ್ನು ಪ್ರಭುದೇವರು ಈ ವಚನದಲ್ಲಿ ಮುಂದೆ ನಿರೂಪಿಸಿದ್ದಾರೆ.

“ಬ್ರಹ್ಮರಂಧ್ರ, ಹುಬ್ಬುಗಳ ನಡುವಿನ ಸ್ಥಳ, ಮೂಗಿನ ತುದಿ ಮತ್ತು ಚೌಕ ಅಥವಾ ಮೂಲಾಧಾರ ಚಕ್ರ, ಈ ನಾಲ್ಕು ಸ್ಥಾನಗಳಲ್ಲಿ ಪ್ರಾಣಲಿಂಗಿಯು ಬ್ರಹ್ಮವನ್ನು ಅರಿಯಬೇಕು. ಬ್ರಹ್ಮರಂಧ್ರದಲ್ಲಿ ಬ್ರಹ್ಮನ ಪ್ರತಿಕವಾದ ಪರಮಾತ್ಮನು, ಹುಬ್ಬಿನ ನಡುವೆ ಜಂಗಮದ ಸಂಕೇತವಾದ ಜ್ಞಾನ, ಮೂಗಿನ ತುದಿಯಲ್ಲಿ ಆನಂದದ ಗುರುತಾದ ಪ್ರಸಾದ ಮತ್ತು ಮೂಲಾಧಾರದಲ್ಲಿ, ವಿಶ್ರಾಂತಿಯ ಸಂಕೇತವಾದ ಅನುಭಾವ, ಇವು ತಮ್ಮ ನಿಜರೂಪದಿಂದ ಅಭಿವ್ಯಕ್ತವಾಗುತ್ತವೆ. ಹೃದಯದ ಮಧ್ಯದ ಅನಾಹತ ಚಕ್ರವೇ ಈ ಎಲ್ಲ ಸಾಕ್ಷಾತ್ಕಾರಗಳ ಕೇಂದ್ರವೆಂಬುದನ್ನು 'ಅಷ್ಟದಳ ಮಧ್ಯದಲ್ಲಿ ಸರ್ವಸ್ವಾಯತ' ಎಂಬ ನುಡಿ ಸೂಚಿಸುತ್ತದೆ. ಈ ವಿಧಾನದಿಂದ ಬ್ರಹ್ಮವನ್ನು ತನ್ನಲ್ಲಿ ಅಳವಡಿಸಿಕೊಂಡ ಶರಣರಿಗೆ ಮುಕ್ತಿ ಸಮೀಪವಾಗುತ್ತದೆ, ಎಂದು ವಚನದ ತಾತ್ಪರ್ಯ.

“ಮೇಲಿನ ವಚನದಲ್ಲಿ ಸೂಚಿಸಲ್ಪಟ್ಟಿರುವ ಶಿವಯೋಗ ಪ್ರಕ್ರಿಯೆಯನ್ನು