ಪುಟ:ಕ್ರಾಂತಿ ಕಲ್ಯಾಣ.pdf/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೨೯ ಆಗ ಅವನ ಸಂಗಡಿದ್ದ ಬೊಮ್ಮರಸ ಬ್ರಹ್ಮಶಿವರನ್ನೂ ಬಸವಣ್ಣನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಆ ಅಲ್ಪ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ಬಸವಣ್ಣನವರು ಪ್ರಶ್ನಿಸಿದ್ದನ್ನು ಕೇಳಿದಾಗ ಅಗ್ಗಳನು ಸಹಜವಾಗಿ ಅಚ್ಚರಿಗೊಂಡನು. ಅಲ್ಲಿಂದೀಚೆಗೆ ನಡೆದ ಘಟನೆಗಳಲ್ಲಿ ತನ್ನ ಹಾಗೂ ತನ್ನ ಗೆಳೆಯರ ಪಾತ್ರವನ್ನು ನೆನೆಸಿಕೊಂಡಾಗ ಭೀತಿ ಆತಂಕಗಳು ತಲೆದೋರದೆ ಇರಲಿಲ್ಲ. “ನನ್ನ ಗೆಳೆಯರೊಬ್ಬರು ಸ್ವಸ್ಥಳಕ್ಕೆ ಹಿಂದಿರುಗಿದರು. ಇನ್ನೊಬ್ಬರು ಸಂಗಡಿದ್ದಾರೆ,” ಎಂದು ಅವನು ಜಂಗಮ ತಂಡದೊಡನೆ ನಾಗರಿಕ ವೇಷದಲ್ಲಿದ್ದ ಬ್ರಹ್ಮಶಿವನನ್ನು ತೋರಿಸಿದನು. ಈ ಮಾತುಗಳು ನಡೆಯುತ್ತಿದ್ದಂತೆ ಬ್ರಹ್ಮಶಿವನು ಉತ್ತರಾಪಥದ ಜಂಗಮರನ್ನು ವೇದಿಕೆಯ ಸುತ್ತ ನಿಲ್ಲಿಸಿದನು. ವಿಚಿತ್ರ ವೇಷಭೂಷಣಗಳ ಆ ಜಂಗಮರನ್ನು ಏಕಕಾಲದಲ್ಲಿ ಅಲ್ಲಿ ಕಂಡು ಬಸವಣ್ಣನವರು ಅವರೆಲ್ಲರಿಗೆ ಕೈಯೆತ್ತಿ ನಮಸ್ಕಾರ ಮಾಡಿದರು. ಅವರ ಪರಿಚಯ ಮಾಡಿಕೊಡುತ್ತ ಅಗ್ಗಳನು ಹೇಳಿದನು : “ಈ ಜಂಗಮರು ಉತ್ತಾರಾಪಥದ ಸಪಾದಲಕ್ಷ ದೇಶದಿಂದ ಅಣ್ಣನವರ ದರ್ಶನಕ್ಕಾಗಿ ಕಲ್ಯಾಣಕ್ಕೆ ಬಂದರು. ನೀವು ಕೂಡಲ ಸಂಗಮದಲ್ಲಿರುವುದಾಗಿ ಕೇಳಿ ಆ ದಿನವೇ ಇಲ್ಲಿಗೆ ಪಯಣ ಮಾಡಿದರು. ಕರ್ಹಾಡಕ್ಕೆ ಹೊರಟಿದ್ದ ನಾವು ಅವರ ಸಂಗಡ ಬಂದೆವು. - ಬಸವಣ್ಣನವರ ಮುಖದಲ್ಲಿ ವಿಷಾದದ ನೆರಳು ಸುಳಿಯಿತು. “ಬಂದ ಜಂಗಮಕ್ಕೆ ದಾಸೋಹ ನಡೆಸಲು ಈಗ ನಾನು ಅಸಮರ್ಥನು. ಗುರುಕುಲದ ಪ್ರಾಧ್ಯಾಪಕರಿಗೆ ಇವರು ಬಂದಿರುವ ವಿಚಾರ ತಿಳಿಸಿದರೆ ಒಳ್ಳೆಯದು,” ಎಂದರು. “ಇವರು ಕಲ್ಯಾಣದಲ್ಲಿ ಒಂದು ದಿನ ಮಹಮನೆಯ ಅತಿಥಿಗಳಾಗಿದ್ದು ದಾಸೋಹ ಮುಗಿಸಿಕೊಂಡು ಇಲ್ಲಿಗೆ ಬಂದರು, ಅಣ್ಣನವರೆ. ನಿಮ್ಮ ಪ್ರವಚನ ಕೇಳಿ ದಾಸೋಹಕ್ಕಿಂತ ಹೆಚ್ಚಿನ ತೃಪ್ತಿ ಆಗಿದೆ ಅವರಿಗೆ, ಪ್ರಭುದೇವರ ವಚನಗಳನ್ನು ಪ್ರಾಕೃತಕ್ಕೆ ಅನುವಾದ ಮಾಡಿ ಹೇಳಿದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲ.” ಎಂದು ಅಗ್ಗಳನು ಸಮಾಧಾನ ಹೇಳಿದನು. ಬಸವಣ್ಣನವರು ಉತ್ತರ ಕೊಡಲಿಲ್ಲ. ಅನ್ಯಮನಸ್ಕರಾಗಿ ಶೂನ್ಯದ ಕಡೆಗೆ ನೋಡುತ್ತಿದ್ದರು ಅವರು. ಅಗ್ಗಳನು ಪುನಃ ಹೇಳಿದನು : “ಕಲ್ಯಾಣದ ದುರ್ವಾರ್ತೆಯಿಂದ ನಿಮ್ಮ ಮನಸ್ಸು ಕಲಕಿದೆ, ಅಣ್ಣನವರೆ. ಈಗ ನಾನು ಹೆಚ್ಚು ತೊಂದರೆ ಕೊಡುವುದಿಲ್ಲ. ಈ ಜಂಗಮರಿಗೆ ಪ್ರಾಕೃತದಲ್ಲಿ ನಾಲ್ಕು ಮಾತು ಹೇಳಿದರೆ ಸಾಕು.”