ಪುಟ:ಕ್ರಾಂತಿ ಕಲ್ಯಾಣ.pdf/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ಹೋದರು ಎಂಬುದನ್ನು ತಿಳಿಯಲು ಇನ್ನೆರಡು ದಿನಗಳಾದರೂ ನಾವು ಕಲ್ಯಾಣದಲ್ಲಿರಬೇಕಾಗಿತ್ತು,” ಎಂದನು ಬ್ರಹ್ಮಶಿವ. “ನಾವು ಹಾಗೆ ಮಾಡಿದ್ದರೆ ಮಾಧವ ನಾಯಕನ ಸೈನಿಕರಿಗೆ ಸಿಕ್ಕಿಬೀಳುತ್ತಿದ್ದೆವು. ಬಿಜ್ಜಳನ ಅಂತ್ಯಸಂಸ್ಕಾರ ಮುಗಿದ ಕೂಡಲೆ ಮಾಧವ ನಾಯಕನು ನಗರದ ಮಹಾದ್ವಾರಗಳನ್ನು ಮುಚ್ಚಿಸಿ ತನ್ನ ಸೈನಿಕರನ್ನು ಕಾವಲಿಟ್ಟನು. ಬೋನಿಗೆ ಸಿಕ್ಕ ಇಲಿಗಳಂತೆ ನಾವು ನಗರದ ಸೆರೆಮನೆಯಲ್ಲಿ ಕೊಳೆಯಬೇಕಾಗುತ್ತಿತ್ತು.” “ಚಾಲುಕ್ಯ ಸರ್ವಾಧಿಕಾರಿಯ ಶವಸಂಸ್ಕಾರಕ್ಕೆ ಅದೆಷ್ಟೊಂದು ಸೈನ್ಯ ! ಅದೆಷ್ಟೊಂದು ವೈಭವ ! ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲನ ಶವಸಂಸ್ಕಾರ ಅದೊಂದೂ ಇಲ್ಲದೆ ಸಾಮಾನ್ಯ ರೀತಿಯಲ್ಲಿ ಮುಗಿಯಿತು.” “ಮೃತದೇಹವನ್ನು ಕರ್ಣದೇವ ರಹಸ್ಯವಾಗಿ ರಾಜಗೃಹಕ್ಕೆ ತರದೇ ಹೋಗಿದ್ದರೆ ಜಗದೇಕಮಲ್ಲರಸರು ಕೊಲೆಗಡುಕನ ಅನಾಮಿಕ ಸಂಸ್ಕಾರ ಪಡೆಯುತ್ತಿದ್ದರು. ಕರ್ಣದೇವನ ಸಮಯೋಚಿತ ಚತುರತೆ ಅವರನ್ನು ಆ ಅಪಮಾನದಿಂದ ರಕ್ಷಿಸಿತು. ಬೊಮ್ಮರಸನು ಆ ರಾತ್ರಿಯೇ ನಗರದಿಂದ ಪಾರಾಗಿರಬೇಕು,” ಅಗ್ಗಳನ ಉತ್ತರದಿಂದ ಬ್ರಹ್ಮಶಿವನಿಗೆ ಸಮಾಧಾನವಾಗಲಿಲ್ಲ. “ನಿಡುಗಲ್ ದುರ್ಗದಲ್ಲಿ ರಸವಾದದ ಗೀಳಿಗೆ ಬಿದ್ದಿದ್ದ ಬೊಮ್ಮರಸನನ್ನು ಈ ಒಳಸಂಚಿನಲ್ಲಿ ಸಿಕ್ಕಿಸಿದವನು ನಾನು. ಈಗ ಅವನೇನಾದನೆಂದು ಚಿಂತಿಸಬೇಡವೇ,” ಎಂದು ಭಾವಿಸಿ ಅವನು ತುಸು ಹೊತ್ತು ಮೌನವಾಗಿದ್ದು ಬಳಿಕ, “ಮುಂದೆ ನಾವೇನು ಮಾಡುವುದು, ಅಗ್ಗಳ?” ಎಂದನು. “ಉತ್ತರಾಪಥದ ಜಂಗಮರ ತಂಡ ಕಲ್ಯಾಣ ನೌಕಾಶ್ರಯದ ಮಾರ್ಗವಾಗಿ ಸೋಮನಾಥಕ್ಕೆ ಹೋಗುತ್ತದೆ. ಕರ್ಹಾಡದವರೆಗೆ ನಾವೂ ಅವರ ಸಂಗಡ ಹೋಗುವುದು. ಅದೇ ಸದ್ಯದಲ್ಲಿ ಸುರಕ್ಷಿತವಾದ ಮಾರ್ಗ.* ಬ್ರಹ್ಮಶಿವ ಉತ್ತರ ಕೊಡಲಿಲ್ಲ. “ಈಗ ಆ ಜಂಗಮಯ್ಯಗಳಲ್ಲಿದ್ದಾರೆ ? -ಅಗ್ಗಳನು ಮತ್ತೆ ಪ್ರಶ್ನಿಸಿದನು. "ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದಾರೆ. ಅವರಿಗೆ ತೊಂದರೆಯಾಗದಿರಲೆಂದು ನಾನು ನಿನ್ನನ್ನು ಹುಡುಕುತ್ತ ಬಂದೆ,” ಎಂದು ಬ್ರಹ್ಮಶಿವ ಸಮೀಪದ ಇನ್ನೊಂದು ಕಲ್ಲಿನ ಮೇಲೆ ಕುಳಿತನು. ಅಗ್ಗಳನ ದೃಷ್ಟಿ ಬಸವಣ್ಣನವರಿದ್ದ ಶಿಲಾಮಂಟಪದ ಕಡೆ ತಿರುಗಿತು. ಆ ನಿಬಿಡಾಂಧಕಾರದಲ್ಲಿ ನದಿಯ ಜಾಡು ಹಿಡಿದು ಶಿಲಾಮಂಟಪ ಇರುವ ಸ್ಥಳವನ್ನು