ಪುಟ:ಕ್ರಾಂತಿ ಕಲ್ಯಾಣ.pdf/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ ಗುರುತಿಸಬೇಕಾಗಿತ್ತು. ಹೆಪ್ಪುಗಟ್ಟಿದ ಕತ್ತಲೆಯ ಹೊರತಾಗಿ ಅಲ್ಲಿ ಮತ್ತೇನೂ ಕಾಣುತ್ತಿರಲಿಲ್ಲ. “ಏನು ಯೋಚಿಸುತ್ತಿರುವೆ, ಅಗ್ಗಳ?” -ತುಸು ಹೊತ್ತಿನ ಮೇಲೆ ಬ್ರಹ್ಮಶಿವ ಕೇಳಿದನು. “ಪೂಜೆಗೆ ಕುಳಿತ ಬಸವಣ್ಣನವರು ಮಂಟಪವನ್ನು ಬಿಟ್ಟರೆ, ಅಥವಾ ಇನ್ನೂ ಅಲ್ಲಿಯೇ ಇರುವರೇ ಎಂದು. ಕತ್ತಲಲ್ಲಿ ಏನೂ ಕಾಣುತ್ತಿಲ್ಲ,” ಅಗ್ಗಳನೆಂದನು. “ಶರಣರಿಗೆ ಅರಿವಿನ ಕಣ್ಣು ತೆರೆಯುವುದಂತೆ, ಅಗ್ಗಳ, ಕತ್ತಲಲ್ಲಿ ನೀಡುವ ಶಕ್ತಿ ಇದೆಯೋ ಏನೋ ಅವರಿಗೆ!” ಎಂದು ಬ್ರಹ್ಮಶಿವ ನಕ್ಕನು. - “ನಿನ್ನ ಕುಚೇಷ್ಟೆ ನಿಲ್ಲಿಸು, ಬ್ರಹ್ಮಶಿ...ಮಂಟಪದ ಹತ್ತಿರ ಬೆಳಕು ಕಾಣುತ್ತಿಲ್ಲವೆ ಈಗ?” “ಅದು ದೀಪವಲ್ಲ, ನಕ್ಷತ್ರ” ನೋಡುತ್ತಿದ್ದಂತೆ ನಕ್ಷತ್ರದ ಆಕಾರ ದೊಡ್ಡದಾಯಿತು. ಬೆಳಕು ಹೆಚ್ಚಿ ಮಂಟಪ ಮಸಕಾಗಿ ಕಂಡಿತು. “ಮಂಟಪದಲ್ಲಿ ದೀಪ ಹಚ್ಚಿಟ್ಟಿದ್ದಾರೆ,” ಎಂದನು ಬ್ರಹ್ಮಶಿವ. ಮಂಟಪದಲ್ಲೆಲ್ಲ ಹರಡಿತು ಆ ಬೆಳಕು. ಕತ್ತಲ ತೆರೆಯ ಮೇಲೆ, ಮಿರುಗುವ ಬೆಳ್ಳಿಯ ಬಣ್ಣದಿಂದ ಬರೆದ ಬೃಹದಾಕಾರದ ಚಿತ್ತಾರದಂತೆ ಬೆಳಗಿತು ಆ ಶಿಲಾ ಮಂಟಪ. ಅದರ ನಡುವೆ ಬಸವಣ್ಣನವರು ಪದ್ಮಾಸನದಲ್ಲಿ ಕುಳಿತು ಪೂಜಾಭಾವದಿಂದ ಎಡಗೈಯನ್ನು ಮುಂದೆ ಚಾಚಿದ್ದರು. ಅರೆ ತೆರೆದ ಅವರ ಕಣ್ಣುಗಳ ದೃಷ್ಟಿಜ್ವಾಲೆ ಮುಂಗೈಯಲ್ಲಿ ಮಿರುಗುತ್ತಿದ್ದ ಜ್ಯೋತಿರ್ಮಯ ಲಿಂಗಮೂರ್ತಿಯ ಮೇಲೆ ನೆಟ್ಟಿತ್ತು. ಅಗ್ಗಳನ ಉದ್ರಿಕ್ತ ಅಂತಃಚಕ್ಷುಗಳು ಈ ಅದ್ಭುತ ಅಭೌಮ ದೃಶ್ಯವನ್ನು ನೋಡುತ್ತಿದ್ದಂತೆ ಮಂಟಪದಲ್ಲಿ ಹರಡಿದ್ದ ಬೆಳಕು, ಬಸವಣ್ಣನವರ ದೃಷ್ಟಿಜ್ವಾಲೆಯೊಡನೆ ಬೆರೆತು, ಕರಸ್ಥಲದಲ್ಲಿ ಕೇಂದ್ರೀಕೃತವಾಗಿ, ಬೃಹದಾಕಾರದ ವಜ್ರದಂತೆ ಬೆಳಗಿತು. ತಿಳಿನೀಲಿ ಬಣ್ಣದ ಅದರ ಕಿರಣ ಮಾಲಿಕೆ, ಬಸವಣ್ಣನವರ ದೇಹದ ಮೇಲೆ ಬಿದ್ದು, ಒಂದುಗೂಡಿ, ಬೆಳಕಿನ ಎಳೆಯಂತೆ ಕಂಡಿತು. ಭಾವಾವೇಶದಿಂದ ಉದ್ದೀಪಿತನಾಗಿ ಸೂಕ್ಷ್ಮಾತಿಸೂಕ್ಷವನ್ನು ಕಾಣಲು ತವಕಿಸುತ್ತಿದ್ದ ಅಗ್ಗಳನು, ಆ ಬೆಳಕಿನ ಎಳೆ ಮೂರಾಗಿ ಕವಲೊಡೆದು, ಅದರಲ್ಲಿ ಮಧ್ಯದ ಎಳೆ, ಮಣಿಗಳಂತೆ ಮಿರುಗುವ ತಾವರೆ ಆಕಾರದ ಆರು ಗಂಟುಗಳಿಂದ ಬೆಳಗುತ್ತಿರುವುದನ್ನು ಕಂಡನು. ಮಧ್ಯದ ಎಳೆಯ ಮುಡಿಯಲ್ಲಿ ಸಹಸ್ರ ಸೂರ್ಯಕಾಂತಿಯಿಂದ ಸಹಸ್ರಾರ ಬೆಳಗುತ್ತಿತ್ತು.