ಪುಟ:ಕ್ರಾಂತಿ ಕಲ್ಯಾಣ.pdf/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೩ ೫ ನೋಡಲಾರದೆ ಅಗ್ಗಳನು ಕಣ್ಣುಗಳನ್ನು ಮುಚ್ಚಿದನು. ಹಠಾತ್ತನೆ ಸಾವಿರ ಸಿಡಿಲುಗಳು ಹೊಡೆದಂತೆ ದೊಡ್ಡ ಶಬ್ಬವಾಗಿ ಭೂಮಿ ನಡುಗಿತು. ಅಗ್ಗಳನ ಸಮೀಪದಲ್ಲಿ ಕುಳಿತಿದ್ದ ಬ್ರಹ್ಮಶಿವ ಚೀರುತ್ತ ಎದ್ದು ನಿಂತನು. ಬಿರುಗಾಳಿಗೆ ಸಿಕ್ಕ ಬಾಳೆಯ ಮರದಂತೆ ತೂಗಾಡುತ್ತಿತ್ತು ಅವನ ದೇಹ. ಅಗ್ಗಳನು ಎದ್ದು ಅವನನ್ನು ಹಿಡಿದು ನಿಲ್ಲಿಸಿ, “ಏನಾಯಿತು, ಬ್ರಹ್ಮಶಿವ ? ಏಕೆ ಬೆದರಿದೆ?” ಎಂದು ಕೇಳಿದನು. “ಭೂಕಂಪ .... ಭೂಮಿ ನಡುಗಿತು !.....ಎಂಥ ಮಹಾಶಬ್ದ !” -ಬ್ರಹ್ಮಶಿವ ತೊದಲುತ್ತ ಹೇಳಿದನು. “ನನಗೆ ಆ ಶಬ್ದ ಕೇಳಿಸಲಿಲ್ಲ. ನಾನು ಕಂಪಿಸಲಿಲ್ಲ. ಸ್ಥಿರವಾಗಿ ಕುಳಿತು ಭುವಿಗಿಳಿದ ಮಹಾಘನವೊಂದು ಮತ್ತೆ ಗಗನದ ಉನ್ನತ ಸ್ಥಾನ ಸೇರಿದುದನ್ನು ಕಂಡೆ ನಾನು. ಇದು ನನ್ನ ಜೀವನದ ಶ್ರೇಷ್ಠತಮ ಮುಹೂರ್ತ. ಇದುವರೆಗೆ ನಾನು ಜೀವಿಸಿದ್ದದ್ದು, ಇಂದು ಈ ಪವಿತ್ರ ಕ್ಷೇತ್ರಕ್ಕೆ ಬಂದದ್ದು, ಈ ಅನುಭಾವಕ್ಕಾಗಿಯೇ ಎಂದು ತಿಳಿದಿದ್ದೇನೆ,” -ಎಂದು ನುಡಿದು ಅಗ್ಗಳನು ಸುತ್ತ ನೋಡಿದನು. ವ್ಯಾವಹಾರಿಕ ಜಗತ್ತಿನ ಅರಿವಾಯಿತು ಅವನಿಗೆ ಆಗ. ಹಿಂದಿನಂತೆ ಶೀಲಾಮಂಟಪ ಕತ್ತಲಲ್ಲಿ ಮರೆಯಾಗಿತ್ತು. ನದಿಯ ದಡದಲ್ಲಿ ಪೂಜಾನುಷ್ಠಾನಗಳಿಗೆ ಕುಳಿತಿದ್ದ ಉತ್ತರಾಪಥದ ಜಂಗಮರು ಬೆದರಿ ಎದ್ದು ನಿಂತು ದಿಗ್ಗಾಂತರಂತೆ ಗಗನದತ್ತ ನೋಡುತ್ತಿದ್ದರು. ಅಗ್ಗಳನು ಅವರ ಹತ್ತಿರ ಹೋಗಿ, “ಬೆದರುವ ಕಾರಣವಿಲ್ಲ, ಅಯ್ಯನವರೆ, ಅತ್ತನೋಡಿರಿ, ಗುರುಕುಲದ ಜನ ದೀಪಗಳನ್ನು ಹಿಡಿದುಬರುತ್ತಿದ್ದಾರೆ,” ಎಂದನು. ಗುರುಕುಲದ ಅಧ್ಯಾಪಕ ವಿದ್ಯಾರ್ಥಿಗಳು ಸಮೀಪದ ಹಳ್ಳಿಯ ನಿವಾಸಿಗಳು ಭಯಗ್ರಸ್ತರಾಗಿ ಮಂಟಪದ ಬಳಿ ಹೋಗುತ್ತಿದ್ದರು. ಇಷ್ಟು ಹೊತ್ತಾದರೂ ಬಸವಣ್ಣನವರೇಕೆ ಅತಿಥಿಶಾಲೆಗೆ ಹಿಂದಿರುಗಲಿಲ್ಲ? ಅವರ ಸಂಗಡಿದ್ದ ವಟುವೆಲ್ಲಿ? ಎಂಬುದನ್ನು ತಿಳಿಯಲು ತವಕಿಸುತ್ತಿದ್ದರು ಅವರು. ಆ ಶಿಲಾಮಂಟಪದ ನಡುವೆ, ಹಿಂದಿನ ಗೋಡೆಗೆ ಒರಗಿಸಿದ ಶಿಲಾನಿರ್ಮಿತ ವಿಗ್ರಹದಂತೆ, ಪದ್ಮಾಸನದಲ್ಲಿ ಪೂಜಾಭಾವದಿಂದ ನಿಶ್ಚಲವಾಗಿ ಮೂರ್ತಗೊಂಡಿದ್ದ ಬಸವಣ್ಣನವರನ್ನು ಕಂಡರು ಅವರು. ಮುಂದೆ ಚಾಚಿದ ಬಸವಣ್ಣನವರ ಕರಸ್ಥಳದಲ್ಲಿ, ಬಿಲ್ವಪತ್ರೆಗಳಿಂದ ಅರೆ ಮುಚ್ಚಿದ ಇಷ್ಟಲಿಂಗ ಉರಿಯಿಂಗಿದ ಕೆಂಡದಂತೆ ಬೆಳಗಿತ್ತು. ಅರೆ ಮುಚ್ಚಿದ್ದ ಅವರ ಕಣ್ಣುಗಳ ದೃಷ್ಟಿ, ನಾಸಿಕಾಗ್ರದಲ್ಲಿ ನೆಲೆಸಿ, ಮುಂದೆ ಹರಿಯದೆ ಅಲ್ಲಿಯೇ ಲೀನವಾದಂತೆ ಕಂಡಿತು. ಹಣೆ ಕೊರಳುಗಳ ವಿಭೂತಿ ರುದ್ರಾಕ್ಷಿಗಳು,