ಪುಟ:ಕ್ರಾಂತಿ ಕಲ್ಯಾಣ.pdf/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩೬ ಕ್ರಾಂತಿ ಕಲ್ಯಾಣ ದೀಪಗಳ ಮಂದಕಾಂತಿಯಲ್ಲಿ, ಮೇಘ ಮುಚ್ಚಿದ ಚಂದ್ರಲೇಖೆಗಳಂತೆ ಅಸ್ಪುಟವಾಗಿ ತೋರುತ್ತಿದ್ದವು. ಆಶ್ಚರ್ಯಚಕಿತರಂತೆ ಅವಾಕ್ಕಾಗಿ, ಸ್ತಂಭಿತರಾಗಿ, ಆ ಗಂಭೀರ ಶಾಂತ ಮಯದೃಶ್ಯವನ್ನು ನೋಡುತ್ತ ನಿಂತರು, ಅವರು. ಎಲ್ಲ ಕಡೆ ನಿಶ್ಯಬ್ದ. ಆ ಶಬ್ದ ಶೂನ್ಯ, ಭಾವಶೂನ್ಯ ಪ್ರಾಣಶೂನ್ಯ ಶಾಂತಿ ಮಹಾಸಾಗರದ ಅಲೆಯಂತೆ, ಕಲಕಲ ನಿನಾದದಿಂದ ಹರಿಯುತ್ತಿತ್ತು ಮಲಪ್ರಭೆ! ನಿಸರ್ಗದ ಆ ಗಂಭೀರ ಸ್ತಬ್ದತೆಯನ್ನು ಭೇದಿಸುವ ಗಂಭೀರ ಕಂಠದಿಂದ ನುಡಿದ ಪಂಚಾಕ್ಷರಿಯ ಅಮೃತ ಬಿಂದುಗಳು ಗಾಳಿಯಲ್ಲಿ ತೇಲುತ್ತ ಬಂದವು ಅಲ್ಲಿಗೆ ತುಸುಹೊತ್ತಿನ ಮೇಲೆ ಪಡಿಹಾರಿ ಅಪ್ಪಣ್ಣ ಕಾಣಿಸಿಕೊಂಡಾಗ ಎಲ್ಲರೂ ಏಕಕಾಲದಲ್ಲಿ, “ಹರ ಹರ ಮಹಾದೇವ” ಎಂದು ಉಗ್ಗಡಿಸಿದರು. “ಭಕ್ತಿ ಭಂಡಾರಿ ಬಸವಣ್ಣನವರು ಲಿಂಗೈಕ್ಯರಾದರು. ಜೀವನ್ಮುಕ್ತರಾಗಿ ಬದುಕಿದ ಅವರ ಅಮರ ಆತ್ಮ ಕೂಡಲ ಸಂಗಮದೇವನ ಚರಣಕಮಲಗಳಲ್ಲಿ ಬೆರೆತು ಬಯಲಿಗೆ ಬಯಲಾಯಿತು. ನೀವು ಕೇಳಿದ ಮಹಾಶಬ್ದ ಆ ಪ್ರಳಯದ ನಿರ್ಘೋಷ ! ನೀವು ಕಂಡ ಮಹಾತೇಜ ಆ ಮಹಾಮಿಲನದ ದಿವ್ಯಪ್ರಭೆ ! ಬಸವರಾಜದೇವ, ಉಘ, ಉg !” -ಎಂದು ಪಡಿಹಾರಿ ಅಪ್ಪಣ್ಣ ಘೋಷಿಸಿದನು. ನದೀತೀರದ ಎಲ್ಲ ಕಡೆ, ಸಾವಿರ ಕಂಠಗಳಲ್ಲಿ ಪ್ರತಿಧ್ವನಿಸಿತು ಆ ಘೋಷಣೆ. ಆಮೇಲೆ ಅವರು ಮಂಟಪದ ಹತ್ತಿರ ಮೂರ್ಛಿತನಾಗಿ ಬಿದ್ದಿದ್ದ ವಟುವನ್ನು ಕಂಡರು. ಹಣೆ ಮುಖಗಳಿಗೆ ನೀರೆರೆಚಿ ಶೈತ್ಯೋಪಚಾರ ಮಾಡಿದ ಮೇಲೆ ವಟು ಎಚ್ಚೆತ್ತು ಹೇಳಿದನು : ಮಂಟಪದೊಳಗೆ ದೊಡ್ಡ ಬೆಳಕು ಕಾಣಿಸ್ತು, ಅಣ್ಣಾವ್ರ. ಆಮೇಲೆ ಆ ಬೆಳಕು ಆಕಾಶದ ಕಡೆ ನೆಗೆದು ದೊಡ್ಡ ಶಬ್ದ ಆತು. ನಾ ಬಿದ್ದು ಬಿಟ್ಟಿನ್ನಿ!” ಉಳಿದವರ ವಿವರಣೆಗಳು ಅಷ್ಟೇ ಅಸ್ಪಷ್ಟವಾಗಿದ್ದವು. ಉತ್ತರಾಪಥದ ಜಂಗಮ ತಂಡದ ನಾಯಕನು ಹೇಳಿದನು : “ನಾನು ಪೂಜೆ ಮುಗಿಸಿ ಕಣ್ಣೆರೆದಾಗ ಮಂಟಪದಲ್ಲಿ ನೀಲಿಯ ಬೆಳಕು ಹರಡಿತ್ತು. ಆ ಬೆಳಕಿನ ನಡುವೆ ಬಸವಣ್ಣನವರು ಧ್ಯಾನಮಗ್ನ ಶಂಕರನಂತೆ ನಿಶ್ಚಲರಾಗಿ ಕುಳಿತಿದ್ದರು. ಕ್ರಮ ಕ್ರಮವಾಗಿ ಬೆಳಕು ಹೆಚ್ಚಿತು. ನಾನು ನೋಡಲಾರದೆ ಕಣ್ಣುಗಳನ್ನು ಮುಚ್ಚಿದೆ. ಆಮೇಲೆ ದೊಡ್ಡ ಶಬ್ದವಾಗಿ ಭೂಮಿ ನಡುಗಿತು. ನಾನು ಪುನಃ ಕರೆದಾಗ ಎಲ್ಲ ಕಡೆ ಕತ್ತಲೆ ಕವಿದಿತ್ತು. ಮಂಟಪ ಕಾಣುತ್ತಿರಲಿಲ್ಲ.” - ಅಧ್ಯಾಪಕ ವರ್ಗದಲ್ಲಿ ಅನುಭಾವಿಯಂತೆ ಕಾಣುತ್ತಿದ್ದ ವೃದ್ದ ಜಂಗಮನು ಹೇಳಿದನು : “ಬಸವಣ್ಣನವರ ಭಿಕ್ಷಾಪಾತ್ರೆ ತುಂಬಿತು. ಜೀವನ್ಮುಕ್ತರಾಗಿ ಬದುಕಿದ