ಪುಟ:ಕ್ರಾಂತಿ ಕಲ್ಯಾಣ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಕ್ರಾಂತಿ ಕಲ್ಯಾಣ

ಆಗಿನ ಪಾಶುಪತ ಶೈವ ಮಠಗಳಲ್ಲಿ ಪ್ರಚಾರದಲ್ಲಿದ್ದ ಪಾರಿಭಾಷಿಕ ಸಂಪ್ರದಾಯದಂತೆ ಕರ್ಣದೇವನು ತಾನು ಮತ್ತು ಹೆಗ್ಗಡೆ ಜಗದೇಕಮಲ್ಲನೊಡನೆ ನಡೆಸುತ್ತಿದ್ದ ಆ ತ್ರಿಪಕ್ಷ ಸಭೆಗೆ "ಮೂವರು ಕೋಣೆಯ ಸಮಿತಿ" ಎಂದು ಹೆಸರಿಟ್ಟಿದ್ದನು. ಈ ಸಮಿತಿಯ ನಾಲ್ಕನೆಯ ಸದಸ್ಯನಾಗಿ ಅಗ್ಗಳದೇವನು ಸೇರಿಕೊಳ್ಳುವ ಸಮಾರಂಭ ಆ ಸಂಜೆ ನಡೆಯಬೇಕಾಗಿತ್ತು. ಗಣಿಕಾವಾಸದ ಪ್ರತಿನಿಧಿಗಳಾಗಿ ಸಖಿ, ಸವತಿ, ಸೂಳೆ ಎಂದು ಕರೆಯಲ್ಪಡುತ್ತಿದ್ದ ಮೂವರು ಹೆಗ್ಗಡತಿಯರು ವಿಶೇಷಾಹ್ವಾನ ಪಡೆದು ಬಂದಿದ್ದರು. ಸದಸ್ಯರು ದಿಂಬುಗಳಿಗೊರಗಿ ಚಕ್ರಾಕಾರವಾಗಿ ಕುಳಿತುಕೊಂಡರು. ಮಧುಪಾತ್ರ ಮತ್ತು ಬಟ್ಟಲುಗಳು ಎದುರಿಗೆ ಸಿದ್ದವಾಗಿದ್ದವು, ಮಧುಪಾನದ ಎರಡನೆಯ ಆವರ್ತ ಮುಗಿದು ಸಭೆ ಕಾವೇರಿದ ಮೇಲೆ ಅಧ್ಯಕ್ಷತೆ ವಹಿಸಿದ್ದ ಕರ್ಣದೇವನು, "ಇದುವರೆಗೆ ನಮ್ಮ ಸಭೆ 'ಮೂವರು ಕೋಣೆಯ ಸಮಿತಿ' ಎಂಬ ಹೆಸರಿಗೆ ಸರಿಯಾಗಿ ಮೂವರು ಸದಸ್ಯರನ್ನೊಳಗೊಂಡು ಜನರ ಅಪಹಾಸ್ಯಕ್ಕೆ ಗುರಿಯಾಗಿತ್ತು. ಕೆಲವರು ನಮ್ಮನ್ನು ಮಂಚಕ್ಕೆ ಮೂರೇಕಾಲು ಎಂದು ಮೂದಲಿಸಿದ್ದನ್ನು ಕೇಳಿದ್ದೇನೆ. ಅಗ್ಗಳ ದೇವರಂತಹ ಪಂಡಿತ ಕವಿ ಈಗ ನಮ್ಮ ಸಭೆಯ ನಾಲ್ಕನೆಯ ಸನ್ಮಾನ್ಯ ಸದಸ್ಯರಾಗಿ ಈ ಲೋಪವನ್ನು ಪರಿಹರಿಸಲು ನಿರ್ಧರಿಸಿರುವುದು ನಮಗೆ ಸಂತೋಷದ ವಿಷಯ. ಅವರನ್ನು ಆದರದಿಂದ ನಾವು ಸಭೆಗೆ ಸ್ವಾಗತಿಸುತ್ತೇವೆ. ಈ ಶುಭಾವಸರದಲ್ಲಿ ಅವರು ತಮ್ಮ ರಾಜಾಂತಃಪುರಗಳ ಅನುಭವಗಳನ್ನು ಕುರಿತು ನಾಲ್ಕು ಮಾತುಗಳಾಡಬೇಕಾಗಿ ಬಿಡುತ್ತೇನೆ" ಎಂದು ವಿನಯವಾಡಿದನು. ಸದಸ್ಯರು ಕೈತಟ್ಟಿ ಅನುಮೋದಿಸಿದರು.

ರಾಜಗೃಹದಲ್ಲಿ ಇದು ನನ್ನ ಎರಡನೆಯ ಪರೀಕ್ಷೆ, ಪ್ರತಿಭೆಯ ಗಂಧವೂ ಇಲ್ಲದ ಒಂದು ಸಾಮಾನ್ಯ ಪದ್ಯವನ್ನು ಶ್ರಾವ್ಯವಾಗಿ ಪಠಿಸಿ ನಿಮ್ಮ ಮೆಚ್ಚುಗೆ ಪಡೆದೆ. ಆದರೆ ಈ ದಿನ ನೀವು ಕೇಳುವ ವಿಚಾರ ಅಷ್ಟೊಂದು ಸುಲಭವಲ್ಲ." ಎಂದು ಪ್ರಾರಂಭಿಸಿ ಅಗ್ಗಳನು ತಟ್ಟನೆ ಬದಲಿಸಿದ ಕಂಠದಲ್ಲಿ, ಉಪಾಧ್ಯಾಯನು ಶಿಷ್ಯರನ್ನು ಪ್ರಶ್ನಿಸುವಂತೆ, "ರಾಜಾಂತಃಪುರಗಳ ವಿಚಾರ ನಿಮಗೇನು ತಿಳಿದಿದೆ?" ಎಂದು ಕೇಳಿದನು.

"ರಾಜಗೃಹದ ಗಣಿಕಾವಾಸ ಚಾಲುಕ್ಯರಾಜ್ಯದಲ್ಲಿ ಅತಿ ದೊಡ್ಡದು ಎಂದು ಹೆಸರಾಗಿದೆ. ಆರು ವರ್ಷಗಳ ಕಾಲ ನಾನು ಇಲ್ಲಿ ಹೆಗ್ಗಡೆಯಾಗಿ ಕೆಲಸ ಮಾಡಿದ್ದೇನೆ. ನನ್ನ ಅನುಭವಗಳನ್ನು ಬರೆದಿಡಬೇಕಾದರೆ ನಿಮ್ಮಂತಹ ನಾಲ್ಕು ಮಂದಿ ಪಂಡಿತ ಕವಿಗಳೂ ಬೇಕಾಗುವರು," ಎಂದು ಮನೆ ಹೆಗ್ಗಡೆ ಜಂಬದಿಂದ ಹೇಳಿದನು.