ಪುಟ:ಕ್ರಾಂತಿ ಕಲ್ಯಾಣ.pdf/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೩೭ ಅವರು, ಇಂದು ಕೂಡಲ ಸಂಗಮದೇವನ ನಿಜಪದದಲ್ಲಿ ಬೆರೆದರು. ಆ ದಿವ್ಯಾನು ಭಾವದ ತೆರೆಯನ್ನು ಭೇದಿಸಲು ನಾವು ಶಕ್ತರಲ್ಲ.” ಪಡಿಹಾರಿ ಅಪ್ಪಣ್ಣ ನುಡಿದನು : “ನಾನು ಏನನ್ನು ಕಂಡೆ, ಏನನ್ನು ಕಾಣಲಿಲ್ಲ ಎಂಬುದು ನುಡಿಗೆ ಸಿಕ್ಕುವ ವಿಷಯವಲ್ಲ. ಕೂಡಲ ಸಂಗಮದೇವನು ಅಣ್ಣನವರನ್ನು ತನ್ನ ಹೃದಯದಲ್ಲಿ ಇಂಬಿಟ್ಟುಕೊಂಡನು.” ಆ ರಾತ್ರಿಯೇ ಸಮೀಪದ ಗ್ರಾಮ ನಗರ ಅಗ್ರಹಾರ ಮಠಮಂದಿರಗಳಿಗೆ ಬಸವಣ್ಣನವರ ಲಿಂಗೈಕ್ಯದ ಸುದ್ದಿ ಪ್ರಸಾರಿತವಾಯಿತು. ಮರುದಿನ ಬೆಳಕು ಮೂಡುತ್ತಿದ್ದಂತೆ ಅಂತ್ಯದರ್ಶನಕ್ಕಾಗಿ ಜನರು ತಂಡ ತಂಡವಾಗಿ ಬರಲು ಪ್ರಾರಂಭಿಸಿದರು. ನದಿಯ ದಂಡೆ ಜನರಿಂದ ತುಂಬಿತು. ಕಲ್ಯಾಣಕ್ಕೆ ಹೊರಟು ದಾರಿಯಲ್ಲಿ ಶಿಬಿರ ಹಾಕಿಕೊಂಡಿದ್ದ ಪಟ್ಟದಕಲ್ ಸೀಮೆಯ ಮಂಡಲಾಧಿಕಾರಿಗೆ ಸುದ್ದಿ ತಿಳಿಯುತ್ತಲೆ, ಆನೆ ಕುದುರೆ ಅಂದಣಗಳನ್ನು ತೆಗೆದುಕೊಂಡು ಸಂಗಮಕ್ಕೆ ಬಂದು, ಗುರುಕುಲದ ಕುಲಪತಿ ಪ್ರಾಧ್ಯಾಪಕರನ್ನು ಭೇಟಿಮಾಡಿ, “ಬಸವಣ್ಣನವರು ಚಾಲುಕ್ಯ ರಾಜ್ಯದ ನಿವೃತ್ತ ಮಹಾಮಂತ್ರಿ ದಂಡ ನಾಯಕರು. ಅವರ ಅಂತ್ಯಯಾತ್ರೆ ರಾಜಮರ್ಯಾದೆಯಿಂದ ನಡೆಯಬೇಕು. ಕುಲಪತಿಗಳು ಅನುಮತಿ ಕೊಟ್ಟರೆ ನಾನು ಎಲ್ಲವನ್ನೂ ಏರ್ಪಡಿಸುತ್ತೇನೆ” ಎಂದು ಬಿನ್ನವಿಸಿಕೊಂಡನು. ಕಲ್ಯಾಣದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಮಂಡಲಾಧಿಕಾರಿಯ ಸಲಹೆಯನ್ನು ನಿರಾಕರಿಸುವುದು ಉಚಿತವಲ್ಲವೆಂದು ತಿಳಿದು ಕುಲಪತಿಗಳು ಒಪ್ಪಿದರು. ಅದರಂತೆ ಕಾರ್ಯ ನಿರ್ವಹಿಸಲು ಸಾರಂಗಮಠದ ಕಲ್ಯಾಣ ಶಕ್ತಿಪಂಡಿತರ ಅಧ್ಯಕ್ಷತೆಯಲ್ಲಿ ಶಿಷ್ಟರ ತಾತ್ಕಾಲಿಕ ಸಮಿತಿಯೊಂದು ರಚಿತವಾಯಿತು. ಮಧ್ಯಾಹ್ನದ ಸುಮಾರಿಗೆ ಬಸವಣ್ಣನವರ ಪಾರ್ಥಿವ ದೇಹವನ್ನು ದಂಡನಾಯಕನಿಗೆ ಉಚಿತವಾದ ವಸ್ತ್ರಾಭರಣಗಳಿಂದ ಅಲಂಕರಿಸಿ ಅಂದಣದಲ್ಲಿಟ್ಟು ರಾಜಮರ್ಯಾದೆಯೊಡನೆ ಗುರುಕುಲದ ಸುತ್ತ ಮೆರವಣಿಗೆ ಮಾಡಿದರು. ಗುರುಮಠ ಅಗ್ರಹಾರಗಳ ಜಂಗಮ ಸನ್ಯಾಸಿಗಳು, ಮಂಡಲಾಧಿಕಾರಿ ರಾಜ ಪ್ರತಿನಿಧಿಗಳು, ಮಠಮಂದಿರಗಳ ಸ್ಥಾನಿಕ ಅರ್ಚಕ ಪರಿವಾರದವರು, ಗ್ರಾಮ ನಗರಗಳ ಪ್ರಮುಖ ನಾಗರಿಕರು, ಮೆರವಣಿಗೆಯ ಮುಂಭಾಗದಲ್ಲಿ, ಬಳಿಕ ಅಲಂಕೃತವಾದ ಅಂದಣ, ಅದರ ಹಿಂದೆ ಉತ್ತರಾಪಥದ ಜಂಗಮರು ಮತ್ತು ಅವರೊಡನೆ ಬ್ರಹ್ಮಶಿವ ಅಗ್ಗಳರು, ಕೊನೆಯದಾಗಿ ಗುರುಕುಲದ ಅಧ್ಯಾಪಕ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಂತ್ಯ ದರ್ಶನಕ್ಕಾಗಿ ಬಂದಿದ್ದ ಸ್ತ್ರೀ ಪುರುಷ ಆಬಾಲವೃದ್ಧರ