ಪುಟ:ಕ್ರಾಂತಿ ಕಲ್ಯಾಣ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೩೩

"ಕಳೆದ ಆರು ವರ್ಷಗಳಿಂದ ನಾನು ಬೇರೆಲ್ಲ ವ್ಯವಹಾರಗಳನ್ನು ಬದಿಗೊತ್ತಿ, ಗಣಿಕೆಯರ ಜೀವನ ವಿಕಾಸ ವಿಧಾನಗಳನ್ನು ಅಧ್ಯಯನ ಮಾಡಿದ್ದೇನೆ. ಈ ಅವಿವೇಕಿ ಶತಮೂರ್ಖ ಕರ್ಣದೇವನಲ್ಲದೆ ಬೇರೆ ಯಾರಾದರೂ ನಮ್ಮ ಸಭೆಯ ಅಧ್ಯಕ್ಷರಾಗಿದ್ದರೆ, ಗಣಿಕಾವಾಸ ಕಟಕಾಚಾರ್ಯ ಎಂಬ ಬಿರುದಿನಿಂದ ನನ್ನನ್ನು ಗೌರವಿಸಿ ಎಷ್ಟೋ ದಿನಗಳಾಗುತ್ತಿದ್ದವು" ಎಂದು ಜಗದೇಕಮಲ್ಲನು ಕಟುವಾಗಿ ಟೀಕಿಸಿದನು.

"ವಂದಿಮಾಗಧರು ಸಭೆಯಲ್ಲಿ ಉಗ್ಗಡಿಸುವ ಆ ಬಿರುದಾವಳಿ ನಿನಗೆ ಸಾಲದೆ, ಭಂಡರಾಜ? ಕಂಡಕಂಡವರ ಬಿರುದುಗಳನ್ನು ಕದಿಯುವುದು ಚಾಲುಕ್ಯ ಅರಸರ ಕುಲವೃತ್ತಿಯೆಂದು ಕಾಣುತ್ತದೆ" ಎಂದು ಕರ್ಣದೇವನು ದರ್ಪದಿಂದ ಉತ್ತರಿಸಿದನು.

"ಕದ್ದು ಜೀವಿಸುವುದು ಕಲಚೂರ್ಯ ಸಂಪ್ರದಾಯ. ತ್ರಿಭುವನಮಲ್ಲ, ಭುವನೈಕವೀರ ಎಂಬ ಬಿರುದುಗಳನ್ನು ನೀವು ಚಾಲುಕ್ಯರಿಂದ ಕದಿಯಲಿಲ್ಲವೆ?"

"ಚಾಲುಕ್ಯರಿಗೆ ಸೇರಿದ ಎಲ್ಲ ವಸ್ತುಗಳಿಗೂ ಕಲಚೂರ್ಯರೇ ಉತ್ತರಾಧಿಕಾರಿಗಳು, ಭಂಡರಾಜ. ಅದಕ್ಕೆ ನಿನ್ನ ಗಣಿಕಾವಾಸ ನಿದರ್ಶನ," ಎಂದು ಕರ್ಣದೇವನು ತನ್ನ ಎರಡು ಕಡೆಗಳಲ್ಲಿ ಕುಳಿತಿದ್ದ ಸೂಳೆ ಸವತಿಯರ ಮುಖನೋಡಿದನು, ಜಗದೇಕಮಲ್ಲನ ಪಾರ್ಶ್ವದಲ್ಲಿ ಕುಳಿತಿದ್ದ ಸಖಿ ಮೆಲ್ಲನೆ ಕರ್ಣದೇವನ ಪಾರ್ಶ್ವಕ್ಕೆ ಸರಿದಳು.

"ಹಗಲು ದರೋಡೆ! ಕಲಚೂರ ಕರ್ಣದೇವನು ನನ್ನ ಸಖಿಯನ್ನು ಅಟ್ಟ ಹಗಲು ಅಪಹರಿಸಿದ್ದಾನೆ!" ಎಂದು ಜಗದೇಕಮಲ್ಲನು ಹುಚ್ಚನಂತೆ ಬೊಬ್ಬಿಟ್ಟನು.

ಪ್ರಸಂಗ ಕೈಮೀರುವಷ್ಟರಲ್ಲಿ ಮನೆ ಹೆಗ್ಗಡೆ ಇಬ್ಬರು ಸ್ಪರ್ಧಿಗಳ ಪಾನಪಾತ್ರೆಗಳನ್ನು ತುಂಬಿಸಿ, ಸಖಿಯ ಕೈಹಿಡಿದೆಳೆದು ಜಗದೇಕಮಲ್ಲನಿಗೊಪ್ಪಿಸಿದನು.

ರಾಜಬಂದಿ ರಕ್ಷಕರ ಈ ಕೂಗಾಟವನ್ನು ನಗುತ್ತ ನೋಡುತ್ತಿದ್ದ ಅಗ್ಗಳನು, "ಸಖಿ ಸವತಿ ಸೂಳೆಯರೇ ಗಣಿಕಾವಾಸದ ಸರ್ವಸ್ವವಲ್ಲ. ರಾಜಾಂತಃಪುರಗಳ ನಿಬಂಧನೆಯಂತೆ ಗಣಿಕಾವಾಸದಲ್ಲಿ ೧೮ ಮಂದಿ ಹೆಗ್ಗಡತಿಯರಿರಬೇಕು. ಅವರ ಹೆಸರುಗಳನ್ನಾದರೂ ಕೇಳಿರುವಿರಾ ನೀವು?" ಎಂದನು.

"ಅವುಗಳಲ್ಲಿ ಕೆಲವರ ಹೆಸರುಗಳನ್ನು ಎಲ್ಲಿಯೋ ಕೇಳಿದ ನೆನಪು"

"ಆ ಎಲ್ಲ ಹೆಸರುಗಳನ್ನು ಬರೆದಿಟ್ಟುಕೊಳ್ಳಲು ನಾವೇನು ಕರಣಿಕರೆ?"

"ನಮ್ಮ ಗಣಿಕಾವಾಸದಲ್ಲಿ ಹದಿನೆಂಟು ಜನ ಹೆಗ್ಗಡತಿಯರು ಇರುವರೆ?"

"ಅಗ್ಗಳರು ಇದೆಲ್ಲವನ್ನೂ ಕಲ್ಪಿಸಿಕೊಂಡು ಹೇಳುತ್ತಿದ್ದಾರೆ. ವಾಸ್ತವವಾಗಿ