ಪುಟ:ಕ್ರಾಂತಿ ಕಲ್ಯಾಣ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಕ್ರಾಂತಿ ಕಲ್ಯಾಣ

ಹದಿನೆಂಟು ಮಂದಿ ಹೆಗ್ಗಡತಿಯರಿದ್ದರೆ ಅವರ ಹೆಸರುಗಳೇನು? ಅವರವರ ಕೆಲಸವೇನು? ಅಗ್ಗಳರೇ ಇದನ್ನು ವಿವರಿಸಲಿ" ಗಂಡು ಹೆಣ್ಣು ಕೊರಳುಗಳಿಂದ ಈ ಎಲ್ಲ ಉದ್ಧಾರಗಳೂ ಏಕಕಾಲದಲ್ಲಿ ಕೇಳಿದವು. ಗೊಂದಲ ಅಡಗಿದ ಮೇಲೆ, ಅಗ್ಗಳನು ಗಂಭೀರವಾಗಿ ನುಡಿದನು:

"ಕಿವಿಗೊಟ್ಟು ಕೇಳಿರಿ, ಅವಿವೇಕಿ ಹೆಣ್ಣುಗಳೇ, ವಿವೇಕವಿಲ್ಲದ ಗಂಡುಗಳೆ, ಗಣಿಕಾವಾಸದ ಕಟ್ಟಲೆಯಂತೆ ಸರ್ವಾಂಗ ಸಂಪೂರ್ಣವಾದ ರಾಜಾಂತಃಪುರದಲ್ಲಿ ಗಾಯಕಿ, ನರ್ತಕಿ, ಸಖಿ, ಸವತಿ, ಸೂಳೆ, ಸಂಬಂಧಿ, ಸುಳುಹುಗಾರ್ತಿ, ಸಂವಾದಿನಿ, ಸುಗಂಧಿ, ಶಾರದೆ, ನೀರದೆ, ಸಜ್ಜೆವಳ್ತಿ, ಕಲಾವತಿ, ಕಾದಂಬಿನಿ, ಕಲ್ಯಾಣಿ, ಕಮಲಾಲಯೆ, ಕಲಾಪಿನಿ, ಕೋಲಾಹಲೆ ಎಂಬ ಹದಿನೆಂಟು ಮಂದಿ ಹೆಗ್ಗಡತಿಯರು ಇರತಕ್ಕದ್ದು. ಇವರಲ್ಲಿ ಒಬ್ಬಳು ಕಡಿಮೆಯಾದರೂ ಗಣಿಕಾವಾಸ ಪೂರ್ಣವಾಗುವುದಿಲ್ಲ. ಕೋಹಳ ಕೊಕ್ಕೋಳ ಕಾಮಂಧಕರು ಈ ಹೆಗ್ಗಡತಿಯರ ಕೆಲಸಗಳನ್ನು ಈ ರೀತಿ ವರ್ಣಿಸಿದ್ದಾರೆ:

"ಹಾಡುವವಳು ಗಾಯಕಿ, ಕುಣಿಯುವವಳು ನರ್ತಕಿ, ವಿಶೇಷವೆಂದರೆ ಗಣಿಕಾವಾಸದ ಗಾಯಕಿ ನರ್ತಕಿಯರು ಅಶ್ಲೀಲ ನಾಡ ಹಾಡುಗಳನ್ನು ಚೆನ್ನಾಗಿ ಕಲಿತಿರಬೇಕು. ಹಾಡಿಗೆ ಸರಿಯಾಗಿ ಅಶ್ಲೀಲ ಹಾವಭಾವಗಳನ್ನು ಪ್ರದರ್ಶಿಸಿ ಕುಣಿಯಲು ಅಭ್ಯಾಸ ಮಾಡಿರಬೇಕು. ಇನ್ನುಳಿದವರಲ್ಲಿ ಸಖಿ ಸವತಿ ಸೂಳೆಯರು ಒಂದು ವರ್ಗಕ್ಕೆ ಸೇರಿದವರು. ಯಾವಾಗಲೂ ರಾಜನೊಡನಿದ್ದು ಸಮಯ ಬಂದಾಗ ಪುರುಷವೇಷ ಧರಿಸಿ ವಿನೋದ ವಿಹಾರ ವೈಹಾಳಿಗಳಿಗೆ ಸಂಗಡ ಹೋಗುವವಳು ಸಖಿ. ಮತ್ಸರವೇ ಭೂಷಣವಾಗಿ ಗಣಿಕಾವಾಸದ ಇತರ ಹೆಣ್ಣುಗಳೊಡನೆ ಸಕಾರಣವಾಗಿತೋ ನಿಷ್ಕಾರಣವಾಗಿಯೋ ಆಗಿಂದಾಗ ಜಗಳವಾಡುವವಳು ಸವತಿ. ಇಂತಹ ಕಲಹಕಾರಿಣಿಯನ್ನು ರಾಜನು ಸವತಿಗಂಧವಾರಣೆ ಎಂದು ಬಿರುದು ಕೊಟ್ಟು ಗೌರವಿಸುವುದೂ ಉಂಟು. ಗಣಿಕೆಯಾದರೂ ಸತಿಯಂತೆ ನಡೆಯುವವಳು ಸೂಳೆ. ಅಂತಃಪುರದಲ್ಲಿ ನಡೆಯುವ ಸಭೆಗಳಲ್ಲಿ ಇವಳು ರಾಜನೊಡನೆ ಅರ್ಧಾಸನದಲ್ಲಿ ಕುಳಿತು ರಾಣಿಯಂತೆ ಮರೆಯುವಳು. ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯ ಶಾಸನಗಳಲ್ಲಿ ಇಂತಹ ಕೆಲವು ಮಂದಿ ಸೂಳೆಯರ ಉಲ್ಲೇಖ ದೊರಕುತ್ತದೆ.

"ಸಂಬಂಧಿ ಸುಳುಹುಗಾರ್ತಿ ಸಂವಾದಿನಿಯರು ಇನ್ನೊಂದು ವರ್ಗ. ಸಂಬಂಧ ಕೂಡಿಸುವವಳು ಸಂಬಂಧಿ. ರಾಜ್ಯದ ಯಾವ ಸಾಮಂತ ಶ್ರೀಮಂತರ ಮನೆಗಳಲ್ಲಿ ಸುಂದರಿಯರಾದ ಸ್ತ್ರೀಯರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ರಾಜನಿಗೆ ಅವರ ಸ್ನೇಹ ಮಾಡಿಸುವುದು ಸಂಬಂಧಿಯ ಕೆಲಸ. ಸುಳುಹುಗಾರ್ತಿ