ಪುಟ:ಕ್ರಾಂತಿ ಕಲ್ಯಾಣ.pdf/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೫೭ ನಡೆಸುವುದು ಸಾಧ್ಯವಲ್ಲ. ಈ ಕಾರಣಗಳಿಂದ ನಾವು ಕೂಡಲೆ ತಂಗಡಿಯನ್ನು ಬಿಟ್ಟು ಹೋಗುವುದು ಸರಿಯಲ್ಲ.” “ನದಿ ದಾಟಲು ತಡಸದ ಹಾಯ್ದಡ ಹೆಚ್ಚು ಅನುಕೂಲವೆಂದು ಅಂಬಿಗರ ನಾಯಕನು ಹೇಳುತ್ತಾನೆ. ನಮಗಾಗಿ ನಾಲ್ಕು ತೆಪ್ಪಗಳು, ನೂರು ದೋಣಿಗಳು ಅಲ್ಲಿ ಸಿದ್ಧವಾಗಿವೆ....ನಾವು ಕೂಡಲೆ ಶಿಬಿರವನ್ನು ಬಿಡದೆ ಹೋದರೆ ಸಕಾಲದಲ್ಲಿ ತಡಸ ಸೇರಲಾಗುವುದಿಲ್ಲ,” ಎಂದರು ಮಾಚಿದೇವರು. “ತಂಗಡಿ ನಮ್ಮ ವಶದಲ್ಲಿರಬೇಕು. ಶರಣರು ತಡಸದ ಹಾಯ್ದಡದಿಂದ ನದಿಯನ್ನು ದಾಟಬೇಕು. ಈ ಎರಡಕ್ಕೂ ಅನುಕೂಲವಾದ ಉಪಾಯವೊಂದನ್ನು ಯೋಚಿಸಬೇಕು, ಅಣ್ಣನವರೆ. ಇಲ್ಲಿಂದ ತಡಸಕ್ಕೆ ಹೋಗಲು ಅಂಬಿಗರು ಮತ್ತು ಗ್ರಾಮವಾಸಿಗಳು ಮಾತ್ರವೇ ಉಪಯೋಗಿಸುವ ಕಾಲುದಾರಿಯಿದೆ. ಅತ್ಯಗತ್ಯವಾದ ಸಾಮಾನು ಸರಂಜಾಮುಗಳನ್ನು ಎತ್ತುಗಳ ಮೇಲೆ ಹೇರಿಕೊಂಡು ಶರಣರು ರಹಸ್ಯವಾಗಿ ತಡಸದ ಹಾಯ್ದಡಕ್ಕೆ ಹೋಗಲಿ. ಉಳಿದ ಸಾಮಾನು ಸರಂಜಾಮುಗಳು, ಚಕ್ಕಡಿ ಗೂಡಾರಗಳು, ಈಗಿನಂತೆ ಇಲ್ಲಿಯೇ ಇರಲಿ. ಅದರಿಂದ ಶತೃಗಳು ನಾವು ಇಲ್ಲಿಯೇ ಇರುವೆವೆಂದು ತಿಳಿದು, ಕಣಿವೆಯನ್ನು ದಾಟಿ ಶಿಬಿರದ ಮೇಲೆ ಬೀಳಲು ಪ್ರಯತ್ನಿಸುವರು. ಆಯಕಟ್ಟಿನ ಸ್ಥಳಗಳಲ್ಲಿರುವ ಗಣಾಚಾರಿ ಯೋಧರು ಅವರನ್ನು ಎದುರಿಸಲು ಶಕ್ತರಾಗುವರು.” ಆಗ ಮಾಚಿದೇವರಿಗೆ ನಾಯಕನು ಯೋಚಿಸಿದ ಕೂಟಯುದ್ದದ ಅರಿವಾಯಿತು. ತಂಗಡಿಯ ಸಮೀಪದ ಸಣ್ಣ ಕಣಿವೆಯಲ್ಲಿ ಶತೃ ಸೈನ್ಯವನ್ನು ಸಿಕ್ಕಿಸಿ, ಗುಡ್ಡಗಳ ಮೇಲಿಂದ ಆಕ್ರಮಣ ಮಾಡುವುದು ನಾಯಕನ ಉದ್ದೇಶವೆಂದು ತಿಳಿದರು. “ಉಪಾಯ ಚೆನ್ನಾಗಿದೆ,” ಎಂದು ನಾಯಕನನ್ನು ಪ್ರಶಂಸಿಸಿದರು. ನಾಯಕನು ಉತ್ಸಾಹದಿಂದ ಪುನಃ ಹೇಳಿದನು : “ಶತೃಗಳಿಗೆ ತಮ್ಮ ತಪ್ಪಿನ ಅರಿವಾಗುವಷ್ಟರಲ್ಲಿ ಶರಣರು ನದಿಯನ್ನು ದಾಟಿರಬೇಕು, ಅಣ್ಣನವರೆ. ಆಮೇಲೆ ನಡೆಯುವ ಯುದ್ದದಲ್ಲಿ ನಮಗೆ ಜಯವಾದರೆ ಗೂಡಾರ ಚಕ್ಕಡಿಗಳನ್ನು ಆ ದಡಕ್ಕೆ ತೆಗೆದುಕೊಂಡು ಹೋಗಬಹುದು. ಇಲ್ಲವೆ ನಮ್ಮೊಡನೆ ಅವು ನಾಶವಾಗುವುವು.” ಶರಣರ ರಕ್ಷಣೆಗಾಗಿ ಗಣಾಚಾರಿ ಯೋಧರು ಪ್ರಾಣಾರ್ಪಣೆಗೆ ಸಿದ್ದರಾಗಿರುವರೆಂದು ತಿಳಿದು ಮಾಚಿದೇವರು ಚಮತ್ಕತರಾದರು. “ನೀವು ಬಲಿದಾನಕ್ಕೆ ಸಿದ್ದರಾಗಿರುವಿರೆಂದು ತಿಳಿದು ನನ್ನ ಆತ್ಮವಿಶ್ವಾಸ ಮತ್ತೆ ಮೂಡುತ್ತಿದೆ, ನಾಯಕ, ಕಲಿ ದೇವರ ದೇವನು ನಿಮ್ಮನ್ನು ರಕ್ಷಿಸುವನು,” ಎಂದರು ಅವರು. ಒಂದೆರಡು ಗಳಿಗೆಗಳಲ್ಲಿ ಅದರಂತೆ ಕಾರ್ಯಾಚರಣೆ ಪ್ರಾರಂಭವಾಯಿತು.