ಪುಟ:ಕ್ರಾಂತಿ ಕಲ್ಯಾಣ.pdf/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ೨ ಕ್ರಾಂತಿ ಕಲ್ಯಾಣ ವಿಜಯ ದೊರಕಿದರೂ ದೊರಕಬಹುದು,” ಎಂದು ನಾಯಕನು ಮಾಚಿದೇವರ ಸಲಹೆಗೆ ಒಪ್ಪಿಗೆ ಕೊಟ್ಟನು. ಮಾಚಿದೇವರು ಮುಂದುವರೆಸಿ ಹೇಳಿದರು : “ನಾನು ಮತ್ತು ಚೆನ್ನಬಸವಣ್ಣನವರು ನಾಳಿನ ಯುದ್ದದಲ್ಲಿ ಶಸ್ತ್ರ ಹಿಡಿದು ನಿಮ್ಮ ಪಾರ್ಶ್ವದಲ್ಲಿ ನಿಂತು ಹೋರಾಡುತ್ತೇವೆ. ಅದಕ್ಕಾಗಿ ನಮಗೆ ಬೇಕಾದ ಕವಚ, ಶಿರಸ್ತ್ರಾಣ, ಕತ್ತಿ, ಗುರಾಣಿ, ಮೊದಲಾದವುಗಳನ್ನು ತಂದು ಕೊಡಬೇಕಾಗುವುದು.” ಮಾಚಿದೇವರ ರಥೋತ್ಸಾಹವನ್ನು ಕಂಡು ನಾಯಕನು ಆಶ್ಚರ್ಯದಿಂದ, “ನೀವು ಹಿಂದೆ ಚಾಲುಕ್ಯ ಸೈನ್ಯದಲ್ಲಿ ಅಧಿಕಾರಿಯಾಗಿದ್ದವರು, ಅಣ್ಣನವರೆ. ಅಭ್ಯಾಸ ಮಾಡಿದ ಅಸ್ತ್ರವಿದ್ಯೆ ನಿಮಗೆ ಮರೆತಿರಲಾರದು. ಆದರೆ ಚಿಕ್ಕ ಡಣ್ಣಾಯಕರು, ಹಿಂದೆ ಯಾವಾಗಲೂ ಶಸ್ತ್ರ ಹಿಡಿದವರಲ್ಲ. ಈಗ ಅವರು ಕತ್ತಿ ಹಿಡಿದು ಹೋರಾಡುವುದೆಂದರೆ.....” ಎಂದು ಸಂದೇಹದಲ್ಲಿ ಮುಗಿಸಿದನು. “ನಾನು ಶಸ್ತ್ರ ಹಿಡಿಯುವುದು ಒಂದು ಗೊತ್ತಾದ ಉದ್ದೇಶದಿಂದ, ನಾಯಕರೆ,” ಚೆನ್ನಬಸವಣ್ಣನವರು ಹೇಳಿದರು. "ವಿಪತ್ತು ಎದುರಿಗೆ ನಿಂತಾಗ ಸರ್ವಸಂಗ ಪರಿತ್ಯಾಗಿಯಾದ ಜಂಗಮನೂ ಆತ್ಮರಕ್ಷಣೆಗಾಗಿ ಶಸ್ತ್ರ ಹಿಡಿಯಬೇಕು. ಇದು ಆಪದ್ಧರ್ಮ. ನಾನು ಹೋರಾಡಲು ಶಕ್ತನೆಂದಾಗಲಿ, ನನ್ನಿಂದ ನಿಮಗೆ ಸಹಾಯವಾಗುವುದೆಂದಾಗಲಿ ನಾನು ಭಾವಿಸಿಲ್ಲ. ಆದರೆ ನಾನು ನನ್ನ ಕರ್ತವ್ಯ ಕರ್ಮವನ್ನು ನೆರವೇರಿಸಬೇಕಲ್ಲವೆ?” ಈ ವಿವರಣೆ ಗಣಾಚಾರಿ ನಾಯಕನಿಗೆ ಅರ್ಥವಾಯಿತೋ ಇಲ್ಲವೋ, ಬೇಕಾದ ತೊಡಿಗೆ ಆಯುಧಗಳನ್ನು ಕೂಡಲೆ ತಂದುಕೊಡಲು ಅವನು ಒಪ್ಪಿಕೊಂಡನು. ಮರುದಿನ ಸೂರ್ಯೋದಯಕ್ಕೆ ಎರಡು ಗಳಿಗೆ ಇರುವಾಗ ಗಣಾಚಾರಿ ಯೋಧರು ಕಣಿವೆಯ ಆ ಪಾರ್ಶ್ವದಲ್ಲಿದ್ದ ಮಾಧವ ನಾಯಕನ ಶಿಬಿರದ ಮೇಲೆ ದಾಳಿ ಮಾಡಿದರು. ನಿಂತಲ್ಲಿಯೇ ನಿದ್ರಿಸುತ್ತಿದ್ದ ಪದಾತಿಗಳೂ ಇನ್ನೂ ಎದ್ದಿರಲಿಲ್ಲ. ಕುದುರೆಗಳಿಗೆ ಜೀನು ಕಡಿವಾಣ ಚರ್ಮಪೀಠಗಳನ್ನು ತೊಡಿಸುವುದರಲ್ಲಿ ರಾಹುತರು ನಿರತರಾಗಿದ್ದರು. ರಥಿಕರು ಸಾರಥಿಗಳನ್ನು ಹುಡುಕುತ್ತಿದ್ದರು. ಸೂರ್ಯೊದಯಾ ನಂತರ ಕಣಿವೆಯನ್ನು ದಾಟಿ ಶರಣರ ಮೇಲೆ ಆಕ್ರಮಣ ನಡೆಸಬೇಕೆಂದು ಮಾಧವ ನಾಯಕನು ಸೈನ್ಯಾಧಿಕಾರಿಗಳಿಗೆ ಆಜ್ಞೆ ಮಾಡಿದ್ದನು. ಹಠಾತ್ತಾಗಿ, ಯಾವ ಮುನ್ಸೂಚನೆಯೂ ಇಲ್ಲದೆ, ಕಣಿವೆಯ ಕಡೆಯಿದ್ದ ಶಿಬಿರದ ಅಂಚಿನಲ್ಲಿ ಪ್ರಾರಂಭವಾದ ದಾಳಿ ಅರ್ಧಗಳಿಗೆಯೊಳಗಾಗಿ ಎಲ್ಲ ಕಡೆ