ಪುಟ:ಕ್ರಾಂತಿ ಕಲ್ಯಾಣ.pdf/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

eee ಕ್ರಾಂತಿ ಕಲ್ಯಾಣ ಓಡುತ್ತ ಬಂದ ಹಲವಾರು ಮಂದಿ ಸೈನಿಕರು ಏಕಕಾಲದಲ್ಲಿ ಮಾಚಿದೇವರ ಮೇಲೆ ಬಿದ್ದು ಗಾಯಗೊಳಿಸಿದರು. ಕೂಡಲೆ ಗಣಾಚಾರಿ ಯೋಧರೂ ನಾಯಕನೂ ಮಾಚಿದೇವರ ಸಹಾಯಕ್ಕೆ ಹೋದರು. ಆಮೇಲಿನ ತುಮುಲಯುದ್ಧದಲ್ಲಿ ಚೆನ್ನಬಸವಣ್ಣನವರಿಗೂ ಗಾಯಗಳಾದವು. ಸೈನಿಕರು ದಳಬದ್ದರಾಗಿ ತಮ್ಮ ಮೇಲೆರಗಲು ಬರುತ್ತಿರುವುದನ್ನು ಕಂಡಾಗ ಗಣಾಚಾರಿ ನಾಯಕನು ತನ್ನ ಕಡೆಯವರಿಗೆ ಹಿಮ್ಮೆಟ್ಟಲು ಆಜ್ಞೆ ಮಾಡಿದನು. ಶಿಬಿರದ ಬೇರೆ ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ಒದಗಿತ್ತು. ಹಠಾತ್ತನೆ ನಡೆದ ಆಕ್ರಮಣದಿಂದ ತಲ್ಲಣಗೊಂಡಿದ್ದ ಸೈನಿಕರು ಚೇತರಿಸಿಕೊಂಡು ದಳಬದ್ದರಾಗಿ ಗಣಾಚಾರಿ ಯೋಧರ ಮೇಲೆ ಬಿದ್ದರು. ಸಂಖ್ಯಾಬಲದ ಒತ್ತಡದಿಂದ ಗಣಾಚಾರಿ ಯೋಧರು ಹಿಮ್ಮೆಟ್ಟಬೇಕಾಯಿತು. ಗಾಯಗೊಂಡವರನ್ನು ಎತ್ತಿಕೊಂಡು ಅವರು ಪುನಃ ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ ಸೂರ್ಯೋದಯವಾಯಿತು. ಕಣಿವೆಯ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಕಾದಾಡುತ್ತ ಮಡಿಯಲು ಅವರು ನಿರ್ಧರಿಸಿ ಕೊಂಡರು. ವಿಜಯದ ಭರವಸೆಯಿಂದ ಪ್ರಾರಂಭವಾದ ಆಕ್ರಮಣ ಕಗ್ಗೋಲೆಯ ಪರಾಜಯದಲ್ಲಿ ಮುಗಿಯಲು ಹೆಚ್ಚು ಹೊತ್ತು ಉಳಿದಿರಲಿಲ್ಲ. ಪದಾತಿಗಳು, ರಾಹುತರು ತಂಡ ತಂಡವಾಗಿ ಅವರ ಮೇಲೆ ಬೀಳಲು ಬರುತ್ತಿದ್ದರು. ಅಷ್ಟರಲ್ಲಿ ಸೈನ್ಯಶಿಬಿರದ ಹೊರಗಡೆ ಅಂಚಿನಲ್ಲಿ, “ಹರ ಹರ ಮಹಾದೇವ ಎಂಬ ಜಯಘೋಷ ಕೇಳಿಸಿತು. ಕೂಡಲ ಸಂಗಮದಿಂದ, ಅಗ್ಗಳನ ನೇತೃತ್ವದಲ್ಲಿ ಶರಣರ ರಕ್ಷಣೆಗಾಗಿ ಹೊರಟಿದ್ದ ಉತ್ತರಾಪಥದ ಜಂಗಮರ ತಂಡ ತಂಗಡಿಯನ್ನು ಸೇರಿ ಮಾಧವ ನಾಯಕನ ಸೈನ್ಯದ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದ್ದರು. ಆ ಜಂಗಮರ ವಿಚಿತ್ರ ವೇಷಭೂಷಣಗಳು, ವಿಕೃತ ಕಂಠದಿಂದ ಅವರು ಕೂಗುತ್ತಿದ್ದ ಜಯಘೋಷಗಳ ಅಬ್ಬರ, ಅವರು ಹಿಡಿದಿದ್ದ ಖಡ್ಗ ಪರಶು ತೊಮರ ಗದೆ ಭಲ್ಲೆ ಮೊದಲಾದ ಆಯುಧಗಳು, ಇವುಗಳಿಂದ ಸೈನಿಕರು ಬೆಬ್ಬೆರಗಾದರು. ತಂಡದ ನಾಯಕನು ಎರಡೂ ಕೈಗಳಲ್ಲಿ ಪರಶು ಗದೆಗಳನ್ನು ತಿರುಗಿಸುತ್ತ ಮುನ್ನುಗ್ಗುತ್ತಿರುವುದನ್ನು ಕಂಡು ಅವರು, ಶರಣರ ರಕ್ಷಣೆಗಾಗಿ ಶಿವಗಣಗಳ ಮೃತ್ಯು ತಂಡ ಕೈಲಾಸದಿಂದ ಭೂಮಿಗಿಳಿದಿದೆಯೆಂದು ಭಾವಿಸಿದರು. ಸೈನಿಕರಲ್ಲಿ ಕೆಲವರು ಭಯದಿಂದ ಚೀರಿ ರಕ್ತಕಾರುತ್ತ ಸತ್ತರು. ಧೈರ್ಯದಿಂದ ಎದುರಾದವರು ಜಂಗಮರ ಆಯುಧಗಳಿಗೆ ಬಲಿಯಾದರು. ಇನ್ನುಳಿದವರು ಶಸ್ತ್ರಗಳನ್ನು ಬಿಸುಟು ಕಲ್ಯಾಣದತ್ತ ಓಡಿದರು. ಕೆಲವೇ ಕ್ಷಣಗಳಲ್ಲಿ ಮಾಧವ ನಾಯಕನ ಮಹಾಸೈನ್ಯ ದೆಸೆಗೆಟ್ಟ ಸಂತ್ರಸ್ತರ ಗೊಂದಲಪುರವಾಯಿತು.