ಪುಟ:ಕ್ರಾಂತಿ ಕಲ್ಯಾಣ.pdf/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ -ಎಂದು ಬಸವಣ್ಣನವರು ನುಡಿದಿದ್ದ ಭವಿಷ್ಯ ನಿಜವಾಯಿತು. ಮಾಚಿದೇವರ ಈ ವೀರತ್ವ ಸಾಹಸಗಳ ಫಲವಾಗಿ “ಶರಣ” ಶೈವಧರ್ಮ, ಮುಂದೆ, “ವೀರ” ಶೈವಧರ್ಮವೆಂದು ಹೆಸರಾಯಿತು. ಮಾಚಿದೇವರು ಶರಣರಿಗೆ, “ಆದರ್ಶ* ವೀರರಾದರು. ಬಿಜ್ಜಳನ ಮರಣದ ಸುದ್ದಿ ಕೇಳಿ ಕುಮಾರ ಸೋಮೇಶ್ವರನು, ತನ್ನ ಅಧೀನದಲ್ಲಿದ್ದ ದೊಡ್ಡ ಸೈನ್ಯದೊಡನೆ ಮಂಗಳವೇಡೆಯಿಂದ ಹೊರಟು, ಒಂದು ವಾರದ ಅನಂತರ ಕಲ್ಯಾಣಕ್ಕೆ ಬಂದನು. ತಂದೆಯ ಕೊಲೆಗೆ ಕಾರಣರಾದವರನ್ನು ಶಿಕ್ಷಿಸುವುದು, ತಂದೆಯ ಇಚ್ಛೆಯಂತೆ ಚಾಲುಕ್ಯ ರಾಜ್ಯದ ಸರ್ವಾಧಿಕಾರಿ ಆಡಳಿತವನ್ನು ವಹಿಸಿಕೊಳ್ಳುವುದು ಅವನ ಉದ್ದೇಶವಾಗಿತ್ತು. ಈ ವಿಚಾರದಲ್ಲಿ ಮಾಧವ ನಾಯಕನಿಂದ ತನಗೆ ಸಹಾಯವಾಗಬಹುದಾಗಿ ಅವನು ನಿರೀಕ್ಷಿಸಿದ್ದನು. ಆದರೆ ಕಲ್ಯಾಣದ ವಾಸ್ತವ ಪರಿಸ್ಥಿತಿ, ಕಳೆದ ಕೆಲವು ದಿನಗಳಲ್ಲಿ ಬದಲಾವಣೆಯಾಗಿತ್ತು. ಪಟ್ಟಣಸ್ವಾಮಿ ಮಹಂತಶೆಟ್ಟಿಯ ನೇತೃತ್ವದಲ್ಲಿ ನಾಗರಿಕರು ಸೋಮೇಶ್ವರನನ್ನು ಸ್ವಾಗತಿಸಿದರು. ಆದರೆ ಅವರ ಬಾಡಿದ ಮುಖಗಳು, ಭಯಗ್ರಸ್ತವರ್ತನೆ ಸೋಮೇಶ್ವರನನ್ನು ತಲ್ಲಣಗೊಳಿಸಿದವು. ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲನ ಅವಸಾನ, ಆಮೇಲೆ ನಡೆದ ಹೋರಾಟದಲ್ಲಿ ಕರ್ಣದೇವನ ಮರಣ, ಈ ವಿಚಾರಗಳು ನಡುದಾರಿಯಲ್ಲಿ ಅವನಿಗೆ ವರದಿಯಾಗಿದ್ದವು. ನಾಗರಿಕರ ವಿಷಣ್ಣತೆ, ಅವುಗಳಿಗಿಂತ ಹೆಚ್ಚಿನ ಮತ್ತಾವುದೋ ದುರ್ಘಟನೆಯ ಸೂಚನೆಯೆಂದು ಸೋಮೇಶ್ವರನು ತಿಳಿದನು. “ಕಳೆದ ಒಂದು ವಾರದಿಂದ ನಾವು ಜೀವದಾಸ ತೊರೆದು ಆತುರದಿಂದ ನಿಮ್ಮ ಬರವನ್ನು ನಿರೀಕ್ಷಿಸುತ್ತಿದ್ದೆವು, ಮಹಾಪ್ರಭು. ಮಾಧವ ನಾಯಕನ ಸೈನಿಕರು ನಗರದ ಅರ್ಧಭಾಗವನ್ನು ನಾಶಮಾಡಿದರು. ನಾಗರಿಕರ ಸಿರಿ ಸಂಪತ್ತುಗಳು ಸೂರೆಯಾದವು, ಪ್ರಭುಗಳು ಕೂಡಲೇ ನಗರದ ಸರ್ವಾಧಿಕಾರವನ್ನು ವಹಿಸಿಕೊಂಡು ನಾಗರಿಕರನ್ನು ವಿಪತ್ತಿನಿಂದ ರಕ್ಷಿಸಿಬೇಕಾಗಿ ಬೇಡುತ್ತೇವೆ.” -ಎಂದು ನಾಗರಿಕರು ಕೈಜೋಡಿಸಿ ಬಿನ್ನವಿಸಿಕೊಂಡರು. ನಗರಾಧಿಕಾರಿಯ ಕಡೆ ತಿರುಗಿ ಸೋಮೇಶ್ವರನು, “ಈ ಬಿನ್ನಪದ ಅರ್ಥವೇನು? ನಗರ ನಾಶವಾದದ್ದು ಹೇಗೆ ? ನಗರ ರಕ್ಷಕರೇನಾದರು ?” ಎಂದು ಕೇಳಿದನು. ನಗರಾಧಿಕಾರಿಯ ಮುಖ ವಿವರ್ಣವಾಯಿತು. ವಾಸ್ತವವಾಗಿ ನಡೆದುದನ್ನು ತಿಳಿಸುವ ಧೈರ್ಯವಿಲ್ಲದೆ ಸುಮ್ಮನೆ ನಿಂತನು. ಕೊನೆಗೆ ಸೋಮೇಶ್ವರನ ಭರವಸೆ