ಪುಟ:ಕ್ರಾಂತಿ ಕಲ್ಯಾಣ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೩೫

ಸಂವಾದಿನಿಯರು ಈ ಕಾರ್ಯದಲ್ಲಿ ಸಂಬಂಧಿಗೆ ಸಹಾಯಮಾಡುವರು. ಈ ರೀತಿ ರಾಜಾನುಗ್ರಹಕ್ಕೆ ಪಾತ್ರರಾದ ಕುಲೀನ ಸುಂದರಿಯರು ಕೆಲವು ಸಂದರ್ಭಗಳಲ್ಲಿ ಗಣಿಕಾವಾಸಕ್ಕೆ ಸೇರುವುದೂ ಉಂಟು.

"ಸುಗಂಧಿ, ಶಾರದೆ ನೀರದೆಯರು ಇನ್ನೊಂದು ಗುಂಪು, ಅರಸನಿಗೆ ಬೇಕಾದ ಸುಗಂಧದ್ರವ್ಯಗಳನ್ನು ಪೇಟೆಯಿಂದ ತರಿಸಿ ಜೋಪಾನಮಾಡಿ ಕೇಳಿದಾಗ ತಂದು ಕೊಡುವವಳು ಸುಗಂಧಿ. ಅರಸನ ಅಭಿರುಚಿಯನ್ನರಿತು ಅವನು ಅಪೇಕ್ಷಿಸುವ ಅಶ್ಲೀಲ ಸಾಹಿತ್ಯದ ಹೊತ್ತಿಗೆಗಳನ್ನು ಅರಮನೆಯ ಸರಸ್ವತೀ ಭಂಡಾರದಿಂದ ಹುಡುಕಿ ತಂದು ಓದಿ ಹೇಳುವವಳು ಶಾರದೆ. ಸ್ನಾನಕ್ಕೆ ಬೇಕಾಗುವ ತೈಲ ಚೂರ್ಣ ಲೇಪನಗಳನ್ನು ಒದಗಿಸುವವಳು ನೀರದೆ. ಸ್ನಾನಗೃಹದ ಊಳಗಿತ್ತಿಯರು, ಕ್ಷೌರಿಕ ಸಂವಾಹಕ ಜಲಗಾರರು ನೀರದೆಯ ಅಧೀನದಲ್ಲಿ ಕೆಲಸ ಮಾಡುವರು.

"ಸಜ್ಜೆವಳ್ತಿ ಕಲಾವತಿ ಕಾದಂಬಿನಿಯರು ಬೇರೊಂದು ವರ್ಗ. ರಾಜನ ಶಯನಾಗಾರಕ್ಕೆ ಬೇಕಾದ ಹಾಸಿಗೆ ದಿಂಬು ಹೊದ್ದಿಕೆಗಳನ್ನು ದಿನದಿನವೂ ಹೊಸದಾಗಿ ಅಣಿ ಮಾಡುವವಳು ಸಜ್ಜೆವಳ್ತಿ. ಕಲಶ ಕನ್ನಡಿ ಚಿತ್ರಗಳಿಂದ ಶಯನಗೃಹವನ್ನು ಅಲಂಕರಿಸುವವಳು ಕಲಾವತಿ. ಹಗಲಲ್ಲಿ, ಇರುಳಲ್ಲಿ ರಾಜನಿಗೆ ಬೇಕಾದ ಮಧು ಪಾನೀಯಗಳನ್ನು ಹದವಾಗಿ ತಯಾರಿಸಿ, ಮಧುಪಾತ್ರೆ ಬಟ್ಟಲುಗಳನ್ನು ಓರಣವಾಗಿಡುವವಳು ಕಾದಂಬಿನೀ. ನಾಲ್ಕಾರು ಮಂದಿ ಸುಂದರ ಬಾಲಕ ಬಾಲಕಿಯರು ಇವಳ ಅಧೀನದಲ್ಲಿ ರಾಜನಿಗೆ, ರಾಜಾತಿಥಿಗಳಿಗೆ ಪಾನೀಯಗಳನ್ನು ಹಂಚಲು ನಿಯುಕ್ತರಾಗುತ್ತಾರೆ. ಇದಕ್ಕಾಗಿ ಗಣಿಕಾವಾಸದಲ್ಲಿ ಹುಟ್ಟಿ ಬೆಳೆದ ಮಕ್ಕಳನ್ನು ಆರಿಸಿಕೊಳ್ಳುವುದು ಪದ್ಧತಿ," ಮುಂದೆ ಪಟ್ಟಕ್ಕೆ ಬರುವ ಮರಿರಾಜನ ರಾಣಿವಾಸ ಗಣಿಕಾವಾಸಗಳಿಗೆ ಈ ಬಾಲಕ ಬಾಲಕಿಯರು ಮೀಸಲಾಗುತ್ತಾರೆ.

"ಕಲ್ಯಾಣಿ ಕಮಲಾಲಯೆ ಕಲಾಪಿನಿಯರು ಇನ್ನೊಂದು ಗುಂಪು. ರಾಜನ ಉಡಿಗೆ ವಸ್ತಗಳನ್ನು ದಿನದಿನಕ್ಕೆ ಸ್ವಚ್ಚಗೊಳಿಸಿ ಹಸನಾಗಿಡುವುದು ಕಲ್ಯಾಣಿಯ ಕೆಲಸ. ಸಿಂಪಿಗ ಮಡಿವಾಳ ಮುಚ್ಚಿಗೆ ಮಾಲೆಗಾರ್ತಿಯರು ಇವಳ ಅಧೀನದಲ್ಲಿ ಕೆಲಸ ಮಾಡಬೇಕು. ರಾಜನು ಧರಿಸುವ ಚಿನ್ನರನ್ನದ ಆಭರಣಗಳನ್ನು ಜತನ ಮಾಡಿ ಬೇಕಾದಾಗ ತಂದುಕೊಡುವವಳು ಕಮಲಾಲಯೆ. ಗಣಿಕಾವಾಸಕ್ಕೆ ಅಗತ್ಯವಾದ ಉಡಿಗೆ ತೊಡಿಗೆ ಗಂಧ ಪುಷ್ಟ ಆಭರಣಗಳನ್ನು ಹಂಚುವವಳು ಕಲಾಪಿನಿ. ಅರಮನೆಯ ವಸ್ತ್ರಾಗಾರ ರತ್ನಬಂಡಾರಗಳ ಹೆಗ್ಗಡೆ ಕರಣಿಕರು ಈ ಮೂವರು ಹೆಗ್ಗಡತಿಯರಿಗೆ ಸಹಾಯ ಮಾಡುತ್ತಾರೆ.

"ಗಣಿಕಾವಾಸದ ಎಲ್ಲ ಹೆಣ್ಣುಗಳ ಮೇಲ್ವಿಚಾರಣೆ ನಡೆಸುವ ಹಿರಿಯ