ಪುಟ:ಕ್ರಾಂತಿ ಕಲ್ಯಾಣ.pdf/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬೮ ಕ್ರಾಂತಿ ಕಲ್ಯಾಣ ಮನೆಗಳೂ ಅಗ್ನಿಯ ಪಾಲಾದವು. ವಿರೋಧಿಸಿದವರನ್ನು ಸೈನಿಕರು ಕೊಂದರು. ಜಪ ತಪ ಅನುಷ್ಠಾನಗಳಲ್ಲಿ ನಿರತರಾಗಿದ್ದ ಜಂಗಮರನ್ನು ಬೀದಿಗೆಳೆದು ತಂದು ವಧಿಸಿದರು. ಸೈನಿಕರ ಹಿಂಸೆ ಅಪಮಾನಗಳಿಂದ ತಪ್ಪಿಸಿಕೊಳ್ಳಲು ಬಹುಮಂದಿ ಶರಣ ಶರಣೆಯರು ಬೆಂಕಿಯಲ್ಲಿ ಬಿದ್ದು ಸತ್ತರು, ಕೆರೆ ಬಾವಿಗಳಿಗೆ ಬಿದ್ದು ಮಡಿದರು. ನಗರದಲ್ಲಿ ಎರಡು ದಿನ ನಡೆಯಿತು ಈ ನರಮೇಧ !” “ಅದಕ್ಕೆ ಮೊದಲೆ ಬಹು ಮಂದಿ ಶರಣರು ನಗರವನ್ನು ಬಿಟ್ಟು ವಲಸೆ ಹೋಗಿದ್ದರಲ್ಲವೆ?” -ದುಗುಡ ತುಂಬಿದ ದನಿಯಿಂದ ಸೋಮೇಶ್ವರನು ಕೇಳಿದನು. - “ಹತ್ಯೆಯ ಹಿಂದಿನ ರಾತ್ರಿ ಶರಣರ ಒಂದು ದೊಡ್ಡ ಗುಂಪು ಚೆನ್ನಬಸವಣ್ಣನವರ ನೇತೃತ್ವದಲ್ಲಿ ವಲಸೆ ಹೋಗಿದ್ದರು. ಉಳಿದವರಲ್ಲಿ ಹೆಚ್ಚು ಮಂದಿ ಮೋಳಿಗೆಯ ಮಾರಯ್ಯನವರ ಒತ್ತಾಯದಿಂದ ಮರುದಿನ ನಗರವನ್ನು ಬಿಟ್ಟರು. ಆಮೇಲೆ ಹೋರಾಟ ಪ್ರಾರಂಭವಾಗಿ ನಗರದ ಮಹಾದ್ವಾರಗಳನ್ನು ಮುಚ್ಚಿದ್ದರಿಂದ ಸುಮಾರು ಐದು ಸಾವಿರ ಮಂದಿ ಶರಣರು ನಗರದಲ್ಲಿಯೇ ಉಳಿದರು.” “ತಮ್ಮ ಮೇಲೆ ಆಕ್ರಮಣ ನಡೆಯುವುದೆಂದು ಅವರಿಗೆ ಮೊದಲೆ ತಿಳಿದಿತ್ತೆ?” “ತಿಳಿದಿತ್ತು ಮಹಾಪ್ರಭು. ಹತ್ಯೆ ನಡೆದ ದಿನ ಧರ್ಮಾಧಿಕರಣದ ಸಮ್ಮುಖದ ಚಾವಡಿಯಲ್ಲಿ ಸೇರಿದ್ದ ಸಾಮಂತಾಧಿಕಾರಿಗಳ ರಹಸ್ಯ ಸಭೆಯಲ್ಲಿ ಶೈವಮಠಗಳನ್ನು ನಾಶಮಾಡುವ ಯೋಜನೆ ಚರ್ಚಿಸಲ್ಪಟ್ಟು ಸರ್ವಾಧಿಕಾರಿಗಳ ಅನುಮೋದನೆ ಪಡೆಯಿತೆಂದು ಮಾಧವ ನಾಯಕರ ಕಡೆಯವರು ಹೇಳುತ್ತಾರೆ.” -ತಂದೆಯ ಒಪ್ಪಿಗೆಯಿಂದ ಈ ವಿನಾಶ ಕೃತ್ಯ ನಡೆಯಿತೆ? ಸೋಮೇಶ್ವರನಿಗೆ ಅದನ್ನು ನಂಬುವ ಇಚ್ಛೆಯೂ ಇರಲಿಲ್ಲ, ಆದರೂ ಭಯಗ್ರಸ್ತರಾದ ನಾಗರಿಕರು ನಿಜ ಹೇಳುತ್ತಿರುವರೆಂದು ಅವನು ತಿಳಿದನು. ಅಧಿಕಾರಿ ಸಾಮಂತರ ಪರಿಷ್ಕೃತ ವರದಿಗಿಂತ ನಾಗರಿಕರ ಮಾತು ಹೆಚ್ಚು ವಿಶ್ವಾಸಾರ್ಹವೆಂಬುದು ಮಂಗಳವೇಡೆಯ ಘಟನೆಗಳಿಂದ ಅವನಿಗೆ ಅನುಭವವಾಗಿತ್ತು. ಹರದನು ಮುಂದುವರಿದು ಹೇಳಿದನು : “ಆ ಎರಡು ದಿನಗಳಲ್ಲಿ ನಡೆದ ಅಮಾನುಷ ರಾಕ್ಷಸೀ ಕೃತ್ಯಗಳನ್ನು ನೆನಸಿಕೊಂಡರೆ ಎದೆ ನಡುಗುವುದು. ಚಾಲುಕ್ಯ ರಾಜ್ಯದಲ್ಲಿ ಹಿಂದೆ ಯಾವಾಗಲೂ ಎಲ್ಲಿಯೂ ನಡೆಯದ ದುಷ್ಕೃತ್ಯಗಳು ಕಲ್ಯಾಣದಲ್ಲಿ ನಡೆದವು. ಶರಣರು ಭಕ್ತಿ ಗೌರವಗಳಿಂದ ಕಟ್ಟಿಸಿದ್ದ ಮಹಮನೆ ಅನುಭವಮಂಟಪಗಳು ಬೆಂಕಿಯಿಂದ ನಾಶವಾದವು. ಕಲ್ಯಾಣದ ವಿಖ್ಯಾತ ಶಿಲ್ಪಗಳು ದೀರ್ಘ ಪರಿಶ್ರಮದಿಂದ ರಚಿಸಿದ್ದ ಕೆತ್ತನೆಯ ಕಂಬಗಳು, ಶೀಲವಂತ ಬರೆದಿದ್ದ ಭಿತ್ತಿಚಿತ್ರಗಳು ಕುಸುರಿ ಕೆಲಸದ ಭುವನೇಶ್ವರಿ, ಎಲ್ಲವನ್ನೂ ನಾಶ ಮಾಡಿದರು ಮಾಧವ ನಾಯಕರ