ಪುಟ:ಕ್ರಾಂತಿ ಕಲ್ಯಾಣ.pdf/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೦ ಕ್ರಾಂತಿ ಕಲ್ಯಾಣ ಆಜ್ಞೆಯ ವಿರುದ್ಧ ನಗರದ ಶಾಂತಿಗೆ ಭಂಗ ತರುವವರು ಯಾರೇ ಆಗಲಿ ಉಗ್ರಶಿಕ್ಷೆಗೆ ಗುರಿಯಾಗುವರು,” ಎಂದು ಘೋಷಿಸಿದನು. ಆಗ ನಾಗರಿಕರಿಗೆ ಸಮಾಧಾನವಾಯಿತು. ಸೋಮೇಶ್ವರನು ಕಲಚೂರ್ಯ ಅರಮನೆಗೆ ಬಂದಾಗ ಬೇರೊಂದು ಪ್ರಸಂಗ ಎದುರಾಯಿತು. ದರ್ಶನಕ್ಕಾಗಿ ಕಾಯುತ್ತಿದ್ದ ರಾಜಪುರೋಹಿತ ನಾರಣ ಕ್ರಮಿತನು ಕೈಜೋಡಿಸಿ ಎದುರಿಗೆ ನಿಂತು, “ನನ್ನನ್ನು ಅಧಿಕಾರ ನಿವೃತ್ತನನ್ನಾಗಿ ಮಾಡಿ ವಾನಪ್ರಸ್ಥಕ್ಕೆ ಅನುಮತಿ ಕೊಡಬೇಕಾಗಿ ಬೇಡುತ್ತೇನೆ” ಎಂದು ಬಿನ್ನವಿಸಿಕೊಂಡು ಅಧಿಕಾರ ಲಾಂಛನಗಳನ್ನು ಮುಂದಿಟ್ಟನು. ಕ್ರಮಿತನ ಕಂಗೆಟ್ಟ ಮುಖ, ದೈನ್ಯವರ್ತನೆ, ಸೋಮೇಶ್ವರನನ್ನು ಸಂಭಿತಗೊಳಿಸಿದವು. ದುರಭಿಮಾನಿ ನಿಷ್ಟುರ ಅಧಿಕಾರಿಯೆಂದು ಹೆಸರಾಗಿದ್ದು ಅವನಲ್ಲಿ ಈ ಪರಿವರ್ತನೆ ತಲೆದೋರಿದ್ದು ಹೇಗೆ? ಎಂದು ಯೋಚಿಸಿ ಸೋಮೇಶ್ವರನು, “ನೀವು ವಾನಪ್ರಸ್ಥಕ್ಕೆ ಹೋಗಲು ಇನ್ನೂ ಸಮಯವಿದೆ. ನಿಮ್ಮನ್ನು ಅಧಿಕಾರ ನಿವೃತ್ತರನ್ನಾಗಿ ಮಾಡಲು ಯಾವ ಕಾರಣವೂ ಇರುವುದಿಲ್ಲ.” ಎಂದನು. ಕ್ರಮಿತನ ವರ್ತನೆ ಹೆಚ್ಚು ಗಂಭೀರವಾಯಿತು. ದೀರ್ಘವಾಗಿ ಉಸಿರೆಳೆದು ದುಗುಡ ತುಂಬಿದ ದನಿಯಿಂದ ಅವನು ನುಡಿದನು : “ಕಳೆದ ಹತ್ತು ದಿನಗಳಿಂದ ನಗರದಲ್ಲಿ ನಡೆದ ಎಲ್ಲ ದುರ್ಘಟನೆಗಳಿಗೆ ನಾನು ಕಾರಣನು, ಮಹಾಪ್ರಭು. ನನ್ನ ಒಂದು ಅವಿವೇಕ ನಿಮ್ಮ ಪೂಜ್ಯ ತಂದೆಯವರಿಗೆ ಮರಣ ತಂದಿತು, ಕಲ್ಯಾಣವನ್ನು ನಾಶ ಮಾಡಿತು. ನಾಗರಿಕರನ್ನು ಸಂಕಷ್ಟಗಳಿಗೆ ಗುರಿಪಡಿಸಿತು. ಈ ಚಿಂತೆ ಪರ್ವತ ಸಮನಾದ ಭಾರದಿಂದ ನನ್ನನ್ನು ತುಳಿಯುತ್ತಿದೆ. ನನ್ನನ್ನು ಬಂಧನದಲ್ಲಿಟ್ಟು ನನ್ನ ಅಪರಾಧಕ್ಕೆ ತಕ್ಕ ದಂಡನೆ ವಿಧಿಸಿರಿ. ಈ ಕಾರ್ಯ ನಿಮ್ಮಿಂದಾಗದಿದ್ದರೆ ನಾನೇ ವಾನಪ್ರಸ್ಥನಾಗಿ ಅರಣ್ಯಕ್ಕೆ ಹೋಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ನುಡಿಯುತ್ತಿದ್ದಂತೆ ಕ್ರಮಿತನ ಕಂಠ ಗದ್ಗದಿತವಾಯಿತು, ದೇಹ ಕಂಪಿಸಿತು, ಕಾಲುಗಳು ಕುಸಿದು ನಿಲ್ಲಲು ಅಸಮರ್ಥನಾದನು. ಆಗ ಸೋಮೇಶ್ವರನು ಅವನ ಕೈಹಿಡಿದು ಭದ್ರಾಸನದಲ್ಲಿ ಕುಳ್ಳಿರಿಸಿ, “ಮಂತ್ರಿಮಂಡಲದಲ್ಲಿ ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಬೇಕಾದ ನೀವೇ ಹೀಗಾದರೆ ನಮ್ಮಗತಿಯೇನು, ಕ್ರಮಿತರೆ? ಕೊಂಚ ಹೊತ್ತು ಇಲ್ಲಿ ವಿಶ್ರಮಿಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಳ್ಳಬೇಕಾಗಿ ಬೇಡುತ್ತೇನೆ,” ಎಂದು ಹೇಳಿದನು. ಸೋಮೇಶ್ವರನ ನಮ್ಮ ವರ್ತನೆ, ಅನುಕಂಪದ ನುಡಿಗಳು, ಬೀಸಣಿಗೆ