ಪುಟ:ಕ್ರಾಂತಿ ಕಲ್ಯಾಣ.pdf/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೭೩ ಪರಿವಾರದೊಡನೆ ರಾಜಗೃಹವನ್ನು ಬಿಟ್ಟು ಧರ್ಮಾಧಿಕರಣದ ಸಮುಖದ ಚಾವಡಿಗೆ ಹೋದರು. ಆ ದಿನ ಅಲ್ಲಿ ಸಾಮಂತಾಧಿಕಾರಗಳ ರಹಸ್ಯ ಸಭೆ ಬಿಜ್ಜಳರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಶೈವಮಠಗಳನ್ನೆಲ್ಲ ಏಕಕಾಲದಲ್ಲಿ ನಾಶ ಮಾಡಬೇಕೆಂಬ ಮಾಧವ ನಾಯಕನ ಸಲಹೆ ಸಭೆಯಲ್ಲಿ ಚರ್ಚೆಗೆ ಬಂದಾಗ ಕರ್ಣದೇವ ತೀವ್ರವಾಗಿ ವಿರೋಧಿಸಿದನು. ಅಣ್ಣ ತಮ್ಮಂದಿರಿಗೆ ವಾದ ಬೆಳೆದು, ಕೋಪದಿಂದ ಕರ್ಣದೇವ ಸಭೆಯನ್ನು ಬಿಟ್ಟು ರಾಜಗೃಹಕ್ಕೆ ಹಿಂದಿರುಗಿದನು. ದೀವಟಿಗರ ವೇಷಧರಿಸಿದ್ದ ಜಗದೇಕಮಲ್ಲ ಬೊಮ್ಮರಸರು ಸಮುಖದ ಚಾವಡಿಯಲ್ಲಿಯೇ ಉಳಿದರು. ಸಭೆ ಮುಗಿದು ಬಿಜ್ಜಳರಾಯರು ಅರಮನೆಗೆ ಹೋದಾಗ ವೇಷಧಾರೀ ದೀವಟಿಗರು ಪರಿವಾರದೊಡನೆ ತಾವೂ ಅರಮನೆಯನ್ನು ಸೇರಿ, ಅಡಗಿದ್ದು, ಕೊಂಚ ಹೊತ್ತಿನ ಮೇಲೆ ಬಿಜ್ಜಳರಾಯರು ಏಕಾಕಿಯಾಗಿದ್ದಾಗ ಮೇಲೆ ಬಿದ್ದು ಕೊಂದರು. ಇದು ವಾಸ್ತವದಲ್ಲಿ ನಡೆದ ಘಟನೆ.” ಹತ್ಯೆಗೆ ಸಂಬಂಧಿಸಿದ ಈ ವಿವರಗಳನ್ನು ತಿಳಿಸುವುದಕ್ಕಾಗಿಯೇ ಕ್ರಮಿತನು ವೈರಾಗ್ಯದ ಸೋಗಿನಲ್ಲಿ ದರ್ಶನಕ್ಕಾಗಿ ಬಂದನೇ ಎಂದು ಸೋಮೇಶ್ವರನಿಗೆ ಸಂದೇಹ ಹುಟ್ಟಿತು. ಆದರೆ ಆ ದಿನ ಕ್ರಮಿತನ ನುಡಿಗಳಲ್ಲಿ ವಂಚನೆಗೆ ಎಡೆಯಿರಲಿಲ್ಲ. ಪಶ್ಚಾತ್ತಾಪದ ಜ್ವಾಲೆಯಿಂದ ಅವನ ಮನಸ್ಸಿನ ಮಾಲಿನ್ಯ ಕಳೆದು, ಪ್ರೋತ್ರೀಯ ಬ್ರಾಹ್ಮಣನಿಗೆ ಸಹಜವಾದ ಶಾಂತಿ ಶಿಷ್ಟಾಚಾರಗಳು ಕ್ರಮ ಕ್ರಮವಾಗಿ ಬೆಳಕಿಗೆ ಬರುತ್ತಿದ್ದವು. ಕೊಲೆಯ ಬಗೆಗೆ ವಿವರಗಳನ್ನು ತಿಳಿಯುವ ಕುತೂಹಲದಿಂದ ಸೋಮೇಶ್ವರನು, “ಆಮೇಲೆ ಹಂತಕರೇನಾದರು ? ಜಗದೇಕಮಲ್ಲನು ರಾಜಗೃಹಕ್ಕೆ ಹಿಂದಿರುಗಿದ್ದು ಹೇಗೆ ?” ಎಂದು ಕೇಳಿದನು. ಕ್ರಮಿತನು ಹೇಳಿದನು : "ಹಂತಕರು ಅರಮನೆಯಿಂದ ಹೊರಗೆ ಬಂದಾಗ ಕಾವಲು ಭಟರು ತಡೆದರು. ಹೋರಾಟ ನಡೆಯಿತು. ಇಬ್ಬರು ಭಟರನ್ನು ಕೊಂದು ಜಗದೇಕಮಲ್ಲನು ಮಡಿದನು. ಬೊಮ್ಮರಸ ತಪ್ಪಿಸಿಕೊಂಡನು. ಕೊಂಚ ಹೊತ್ತಿನ ಮೇಲೆ ಕೊಲೆಯ ಸುದ್ದಿ ತಿಳಿದು ಕರ್ಣದೇವ ಅರಮನೆಗೆ ಬಂದನು. ಸತ್ತು ಬಿದ್ದಿದ್ದವರಲ್ಲಿ ಜಗದೇಕಮಲ್ಲನನ್ನು ಗುರುತಿಸಿ ಅವನು, ಶವವನ್ನು ಇಲ್ಲಿಯೇ ಬಿಟ್ಟರೆ ರಾಜಗೃಹದ ರಕ್ಷಕನಾದ ತನ್ನ ಮೇಲೆ ಸಂದೇಹ ಬರಬಹುದೆಂದು ಭಾವಿಸಿ, ಚತುರತೆಯಿಂದ ಶವವನ್ನು ತನ್ನ ಮೇನೆಯಲ್ಲಿಟ್ಟುಕೊಂಡು ರಹಸ್ಯವಾಗಿ ರಾಜಗೃಹಕ್ಕೆ ತೆಗೆದುಕೊಂಡು ಹೋದನು. ಜಗದೇಕಮಲ್ಲನು ಅಸ್ವಸ್ಥನಾಗಿ ಸತ್ತನೆಂದು ಮರುದಿನ ಪ್ರಸಾರವಾಯಿತು. ಮರಣದ ಕಾರಣವನ್ನು ಮುಚ್ಚಿಡುವ ಉದ್ದೇಶದಿಂದ ಅವಸರದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಿಜ್ಜಳರಾಯರ ಮರಣದಿಂದ ಪ್ರಕ್ಷುಬ್ಧರಾಗಿದ್ದ