ಪುಟ:ಕ್ರಾಂತಿ ಕಲ್ಯಾಣ.pdf/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಕ್ರಾಂತಿ ಕಲ್ಯಾಣ -ಎಂದು ಹೇಳಿ ಕ್ರಮಿತನು ಅರ್ಥಗರ್ಭಿತವಾಗಿ ಸೋಮೇಶ್ವರನ ಮುಖ ನೋಡಿದನು. “ಆ ಎರಡರ ಹೊರತಾಗಿ ಮತ್ತಾವ ಕಾರಣವಿದೆ ? ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ಒಳಸಂಚು ನಡೆಯುತ್ತಿತ್ತು. ತಂದೆಯವರ ಆಡಳಿತ ನೀತಿಯಿಂದ ಶರಣರು ಅಸಂತುಷ್ಟರಾಗಿದ್ದರು. ಈ ಎರಡು ಶಕ್ತಿಗಳಲ್ಲಿ ಯಾವುದು ಪ್ರಬಲವಾಗಿ ತಂದೆಯವರನ್ನು ಬಲಿತೆಗೆದುಕೊಂಡಿತೆಂಬುದನ್ನು ನಾವು ಮುಂದೆ ತಿಳಿಯಬೇಕಾಗಿದೆ. -ಪ್ರಭುವಿಗೆ ಸಹಜವಾದ ದರ್ಪದಿಂದ ಸೋಮೇಶ್ವರ ಹೇಳಿದನು. “ಪ್ರಬಲವಾದ ಮತ್ತೊಂದು ಶಕ್ತಿಯ ಎದುರಿನಲ್ಲಿ ಧಾರ್ಮಿಕ ರಾಜಕೀಯ ಶಕ್ತಿಗಳು ನಿಸ್ತೇಜವಾದವು, ಸೋಮೇಶ್ವರ, ಎಲ್ಲಕ್ಕಿಂತ ಮಿಗಿಲಾದ ಆ ಮಹಾಶಕ್ತಿ ಬಿಜ್ಜಳರಾಯರನ್ನು ಬಲಿತೆಗೆದುಕೊಂಡಿತು.” -ತತ್ವದರ್ಶಿಯ ಗಾಂಭೀರ್ಯದಿಂದ ಕ್ರಮಿತನು ಉತ್ತರ ಕೊಟ್ಟನು. ಸೋಮೇಶ್ವರನ ಕುತೂಹಲ ಕೆರಳಿತು. “ಯಾವುದು ಆ ಮಹಾಶಕ್ತಿ ?” ಎಂದನು, ಅವಿಶ್ವಾಸದ ನಗೆಬೀರಿ. “ಪ್ರೇಮವೇ ಆ ಮಹಾಶಕ್ತಿ ಸೋಮೇಶ್ವರ” ಕ್ರಮಿತನು ಹೇಳಿದನು"ಪ್ರೇಮಮೂಲವಾದ ವೈಯಕ್ತಿಕ ವಿದ್ವೇಷ ಬಿಜ್ಜಳರಾಯರ ಹತ್ಯೆಗೆ ಕಾರಣವಾಯಿತು. ಆರು ವರ್ಷಗಳ ಹಿಂದೆ ಒಂದು ದಿನ ಕಾಮೇಶ್ವರಿ ಸಂತಾನಾಪೇಕ್ಷೆಯಿಂದ ವೇಶ್ಯಯ ವೇಷದಲ್ಲಿ, ಜಗದೇಕಮಲ್ಲನ ಮೃಗಯಾಶಿಬಿರಕ್ಕೆ ಹೋಗಿದ್ದಳು. ಆ ಸಂದರ್ಭದಲ್ಲಿ ಕಾಮೇಶ್ವರಿ ತೋರಿದ ಸಾಹಸ ಚತುರತೆಗಳು, ಅವಳಲ್ಲಿ ಜಗದೇಕಮಲ್ಲನ ಅನನ್ಯ ಪ್ರೇಮಕ್ಕೆ ಕಾರಣವಾದುವು. ಅತಿಥಿಯಾಗಿ ಮಂಗಳವೇಡೆಗೆ ಹೋಗಿದ್ದ ರಾಣಿಯೊಡನೆ ಬಿಜ್ಜಳರಾಯರ ಲಂಪಟ ವರ್ತನೆ, ಅಪಮಾನಿತೆಯಾದ ಅವಳು ಬೆಂಕಿಯಲ್ಲಿ ಬಿದ್ದು ಸತ್ತಳೆಂಬ ಜನಾಪವಾದ, ಇವುಗಳನ್ನು ಕೇಳಿ ಉದ್ರೇಕಗೊಂಡ ಜಗದೇಕಮಲ್ಲನು ಈ ಘೋರ ಕೊಲೆಗೆ ಸಿದ್ಧನಾದನು.” ಆ ದಿನ ಸೋಮೇಶ್ವರನು, ಕ್ರಮಿತನೆದುರಿಗೆ ಮೂರನೆಯ ಸಾರಿ ಅಪ್ರತಿಭನಾದನು. ತಂದೆಯ ಬಗೆಗೆ ಮಂಗಳವೇಡೆಯಲ್ಲಿ ಹರಡಿದ್ದ ಅಪವಾದ ಕಲ್ಯಾಣದಲ್ಲಿ ಪೆಡಂಭೂತವಾಗಿ ಎದುರಿಗೆ ನಿಲ್ಲುವುದೆಂದು ಅವನು ಭಾವಿಸಿರಲಿಲ್ಲ. ಅಸಮಾಧಾನದ ಬಿರುದನಿಯಿಂದ ಅವನು, “ಅಡೆತಡೆಯಿಲ್ಲದ ಜನಾಪವಾದಕ್ಕೆ ನೀವು ಸಲ್ಲದ ಪ್ರಾಮುಖ್ಯತೆ ಕೊಡುತ್ತಿದ್ದೀರಿ, ಕ್ರಮಿತರೆ,” ಎಂದನು. ಅರ್ಥಗರ್ಭಿತವಾದ ತೀವ್ರ ದೃಷ್ಟಿಯಿಂದ ಸೋಮೇಶ್ವರನನ್ನು ನೋಡುತ್ತ