ಪುಟ:ಕ್ರಾಂತಿ ಕಲ್ಯಾಣ.pdf/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೭೭ ಕ್ರಮಿತನು ಹೇಳಿದನು : “ಅಗ್ನಿದಾಹದ ಹಿಂದಿನ ರಾತ್ರಿ ಮಂಗಳವೇಡೆಯ ಚಾಲುಕ್ಯ ಬಿಡಾರದಲ್ಲಿ ಏನು ನಡೆಯಿತೆಂಬುದು ಯಾರಿಗೂ ತಿಳಿಯದು, ಸೋಮೇಶ್ವರ, ಆ ರಹಸ್ಯವನ್ನು ಭೇದಿಸುವುದು ನನ್ನ ಉದ್ದೇಶವೂ ಅಲ್ಲ. ಮರುದಿನ ಮುಂಜಾವಿನಲ್ಲಿ ರಾಣಿ ಕಾಮೇಶ್ವರಿಯ ದಾಸಿಯೊಬ್ಬಳು ಕುಮಾರ ಪ್ರೇಮಾರ್ಣವನನ್ನು ಸಂಗಡ ಕರೆದುಕೊಂಡು ಚಾಲುಕ್ಯ ಬಿಡಾರವನ್ನು ಬಿಟ್ಟಳೆಂಬುದು ಅನೇಕರಿಗೆ ತಿಳಿದಿದೆ. ಶರಣರ ಒಂದು ಯಾತ್ರಾದಳದೊಡನೆ ಆ ದಾಸಿ ಕಲ್ಯಾಣಕ್ಕೆ ಬಂದು ಜಗದೇಕಮಲ್ಲನನ್ನು ನೋಡಿ ಕಾಮೇಶ್ವರಿ ಕಳುಹಿಸಿದ್ದ ಸಂದೇಶವನ್ನು ತಲುಪಿಸಿದಳು. ರಾಜಗೃಹದಲ್ಲಿ ನಾನು ನಡೆಸಿದ ಸಂಶೋಧನೆಯಲ್ಲಿ ಈ ಪತ್ರಗಳು ಸಿಕ್ಕವು.” -ಎಂದು ಕ್ರಮಿತನು ರಾಣಿಯ ಸಂದೇಶವಿದ್ದ ಎದೆಕಟ್ಟಿನ ತುಂಡನ್ನೂ, ದಾಸಿ ಉಷಾವತಿ ಜಗದೇಕಮಲ್ಲನಿಗೆ ಬರೆದಿದ್ದ ಪತ್ರವನ್ನೂ ಮುಂದಿಟ್ಟನು. ರಾಣಿಯ ಸಂದೇಶ ಈ ರೀತಿಯಿತ್ತು : ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕಾಗಿ ರಾಜಾತಿಥಿಯಾಗಿ ಮಂಗಳವೇಡೆಗೆ ಹೋಗಿದ್ದ ನನ್ನ ಬಿಡಾರಕ್ಕೆ ಮಾಘ ಶುದ್ಧ ನವಮಿಯಂದು ಸರಿರಾತ್ರಿಯಲ್ಲಿ ಬಿಜ್ಜಳನು ವಂಚನೆಯಿಂದ ಬಂದು ನನ್ನ ಮಾನಹರಣ ಮಾಡಿದನು. ಆ ದಾನವನ ಸ್ಪರ್ಶದಿಂದ ಕಳಂಕಿತವಾದ ದೇಹವನ್ನು ಅಗ್ನಿಯಿಂದ ದಹಿಸಲು ನಿರ್ಧರಿಸಿದ್ದೇನೆ. ನನ್ನ ಭಾಗಕ್ಕೆ ಮರಣವೇ ಮಹಾನವಮಿ. ಈ ಸಂದೇಶ ನಿಮಗೆ ತಲಪುವಷ್ಟರಲ್ಲಿ ಈ ಅಭಾಗಿನಿಯ ಮರಣದ ಸುದ್ದಿಯನ್ನು ನೀವು ಕೇಳುವಿರಿ. ಬಿಜ್ಜಳನು ಶರಣಧರ್ಮದ ಪರಮಶತೃ. ಚಾಲುಕ್ಯರಾಜ್ಯದ ಎಲ್ಲ ಶೈವಮಠಗಳನ್ನೂ ನಾಶಮಾಡಿ ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಅವನ ಉದ್ದೇಶ. ಚಾಲುಕ್ಯರ ಹೆಸರನ್ನು ಇತಿಹಾಸದಿಂದ ತೊಡೆದು ಹಾಕಿ ಕಲಚೂರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಅವನು ಹವಣಿಸುತ್ತಿದ್ದಾನೆ. ಈ ದಾನವರೂಪಿ ನಿರಂಕುಶ ಪ್ರಜಾಪೀಡಕನನ್ನು ವಧಿಸಿ ಚಾಲುಕ್ಯ ರಾಜ್ಯವನ್ನು, ಶರಣಧರ್ಮವನ್ನು, ವಿಪತ್ತಿನಿಂದ ಉದ್ದರಿಸುವ ಧೈರ್ಯ ಸಾಹಸಗಳು ನಿಮಗಿದೆಯೆ? ಅದರಿಂದ ಮಾತ್ರವೇ ನಾನು ಕಳಂಕ ವಿಮುಕ್ತಯಾಗುವೆನು. ನನ್ನ ಆತ್ಮಕ್ಕೆ ಶಾಂತಿ ದೊರಕುವುದು. - ಇತಿ ಚರಣದಾಸಿ, ಕಾಮೇಶ್ವರಿ. ದಾಸಿ ಉಷಾವತಿ ತನ್ನ ಪತ್ರದಲ್ಲಿ, ತಾನು ವೇಷಾಂತರದಿಂದ ರಾಜಗೃಹಕ್ಕೆ ಬಂದು ಜಗದೇಕಮಲ್ಲನಿಗೆ ಸಂದೇಶ ಮುಟ್ಟಿಸಿದ ವಿವರಗಳನ್ನು ತಿಳಿಸಿದ್ದಳು. ಎರಡು ಪತ್ರಗಳನ್ನೂ ಓದಿದಾಗ ಸೋಮೇಶ್ವರನಿಗೆ ಎಲ್ಲವೂ ಅರ್ಥವಾಯಿತು.