ಪುಟ:ಕ್ರಾಂತಿ ಕಲ್ಯಾಣ.pdf/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೮ ಕ್ರಾಂತಿ ಕಲ್ಯಾಣ ಹತ್ಯೆಯ ಬಗೆಗೆ ಕ್ರಮಿತನ ಸಂಶೋಧನೆ ಭದ್ರವಾದ ಅಸ್ತಿವಾರ ಮೇಲೆ ನಿಂತಿದೆ ಎಂಬುದನ್ನು ತಿಳಿದು, ಕ್ರಮಿತನ ಕಡೆ ತಿರುಗಿ, “ಇವು ನಿಮಗೆ ದೊರಕಿದ್ದು ಹೇಗೆ?” ಎಂದು ಕೇಳಿದನು. ಕ್ರಮಿತನು ಹೇಳಿದನು- “ರಾಜಗೃಹ ನಮ್ಮ ವಶವಾದ ಮೇಲೆ ಜಗದೇಕ ಮಲ್ಲರಸರ ಶಯನಾಗಾರದಲ್ಲಿ ಬಟ್ಟೆಗಳ ಅಡಿಯಲ್ಲಿ ರಕ್ತದ ಕಲೆಗಳಿದ್ದ ದೀವಟಿಗ ಸಮವಸ್ತ್ರವೊಂದು ಸಿಕ್ಕಿತು. ಮೃತದೇಹದ ಬಟ್ಟೆಗಳನ್ನು ಬದಲಾಯಿಸಿದವರು ಅಲ್ಲಿ ಅದನ್ನು ಅವಿಚಿಟ್ಟಿದ್ದರು. ಸಮವಸ್ತದ ಕಿಸೆಯಲ್ಲಿ ಈ ಪತ್ರಗಳಿದ್ದವು.” “ಈ ಸಂಬಂಧದಲ್ಲಿ ಚೆನ್ನಬಸವಣ್ಣನವರು ಕುಮಾರ ಪ್ರಮಾರ್ಣವನಿಗೆ ಆಶ್ರಯ ಕೊಟ್ಟದ್ದು, ಅವನನ್ನು ಕರ್ಹಾಡಕ್ಕೆ ಕಳುಹಿಸಲು ಮಾಚಿದೇವರು ಏರ್ಪಡಿಸಿದ್ದು ಯುಕ್ತವೇ ಎಂದು ಯೋಚಿಸುತ್ತಿದ್ದೇನೆ. ಶರಣರು ತಮ್ಮ ವರ್ತನೆಯಿಂದ....” ಸೋಮೇಶ್ವರನಿಗೆ ಮಾತು ಮುಗಿಸುವ ಅವಕಾಶವನ್ನೂ ಕೊಡದೆ ಕ್ರಮಿತನು ಹೇಳಿದನು : “ಮಾಚಿದೇವ, ಚೆನ್ನಬಸವಣ್ಣನವರು ಧರ್ಮನೀತಿಗಳಿಗೆ ಅನುಸಾರವಾಗಿ ನಡೆದುಕೊಂಡರು, ಸೋಮೇಶ್ವರ, ವಿಪದ್ಧಸ್ತರಿಗೆ ನೆರವಾಗುವುದು ಮಾನವ ಧರ್ಮ, ಆ ಬಾಲಕನನ್ನೂ ದಾಸಿಯನ್ನೂ ಬಿಜ್ಜಳರಾಯರೇ ಸುರಕ್ಷಿತವಾಗಿ ಕರ್ಹಾಡಕ್ಕೆ ವಿಜಯಾರ್ಕದೇವರ ಬಳಿಗೆ ಕಳುಹಿಸಬೇಕಾಗಿತ್ತು. ಮಾಚಿದೇವರು ಆ ಕಾರ್ಯ ಮಾಡಿದರು. ಅದರಲ್ಲಿ ಯಾವ ರಾಜಕೀಯ ಉದ್ದೇಶವೂ ಇರಲಿಲ್ಲ.” “ಸಂದೇಶದ ನುಡಿಗಳು ಶರಣರಿಗೆ ತಿಳಿದಿದ್ದಿತೆ ?” “ಜಗದೇಕ ಮಲ್ಲನಿಗೆ ತಿಳಿಸುವವರೆಗೆ ರಾಣಿಯು ಸ೦ದೇಶ ರಹಸ್ಯವಾಗಿತ್ತೆಂಬುದನ್ನು ದಾಸಿಯ ಪತ್ರದಿಂದ ತಿಳಿಯಬಹುದು. ದಾಸಿ ಜಗದೇಕಮಲ್ಲನನ್ನು ನೋಡಿದಳೆಂಬುದು ಶರಣರಿಗೆ ತಿಳಿಯದು. ಆಗ ಅವರು ವಲಸೆ ಹೋಗುವ ಸಿದ್ಧತೆಯಲ್ಲಿ ಮಗ್ನರಾಗಿದ್ದರು.” ಆಗ ಸೋಮೇಶ್ವರನು ಉಷಾವತಿಯ ಪತ್ರವನ್ನೂ ರಾಣಿಯ ಸಂದೇಶವಿದ್ದ ಕಂಚುಕದ ತುಂಡನ್ನೂ ಕೈಯಲ್ಲಿ ಹಿಡಿದು, “ಈಗ ಇವುಗಳನ್ನು ಏನು ಮಾಡಬೇಕೆಂದು ನಿಮ್ಮ ಸಲಹೆ?” ಎಂದನು. “ಇವುಗಳನ್ನು ನಾನೇ ನಿಮಗೆ ಕೊಡುವುದು ನನ್ನ ಉದ್ದೇಶವಾಗಿತ್ತು, ಸೋಮೇಶ್ವರ, ಆ ಕಾರ್ಯ ಮುಗಿಯಿತು. ನೀವು ಈ ಪತ್ರಗಳನ್ನು ಪ್ರೇಮದ ಸರ್ವವ್ಯಾಪೀ ಶಕ್ತಿಯ ನಿದರ್ಶನವಾಗಿ ನಿಮ್ಮಲ್ಲಿಯೇ ಇಟ್ಟುಕೊಳ್ಳಬಹುದು, ಇಲ್ಲವೇ ನಿಮ್ಮ ತಂದೆಯವರ ಅವಿಚಾರ ವರ್ತನೆಯ ಪ್ರತ್ಯಕ್ಷ ಸಾಕ್ಷ್ಯಗಳೆಂದು ತಿಳಿದು ಸುಟ್ಟು ಹಾಕಬಹುದು. ಇನ್ನು ವಾನಪ್ರಸ್ಥಕ್ಕೆ ಅನುಮತಿ ಬೇಡುತ್ತೇನೆ”