ಪುಟ:ಕ್ರಾಂತಿ ಕಲ್ಯಾಣ.pdf/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮C ಕ್ರಾಂತಿ ಕಲ್ಯಾಣ “ಬಸವಣ್ಣನವರು ಕಲ್ಯಾಣವನ್ನು ಬಿಟ್ಟ ಆ ಚರಿತ್ರಾರ್ಹವಾದ ದಿನ, ನಗರದ ಪಾಂಥನಿವಾಸವೊಂದರಲ್ಲಿ ಅಗ್ಗಳನು ಹೇಳಿದ ಸುಭಾಷಿತ ಇಂದು ನನಗೆ ನೆನಪಿಗೆ ಬರುತ್ತಿದೆ : “ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟರಿ ಅವ ವಾ ಮರಣಮಸ್ತು ಯುಗಾಂತರೇ ವಾ ನ್ಯಾಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ “ಬುದ್ದಿಜೀವಿಗಳು ಹೊಗಳಲಿ, ತೆಗಳಲಿ; ಸಿರಿಸಂಪತ್ತು ಬರಲಿ, ಹೋಗಲಿ; ಇಂದೇ ಮೃತ್ಯು ಎದುರಿಗೆ ನಿಲ್ಲಲಿ, ಅಥವಾ ಯುಗಾಂತರದಲ್ಲಿ ಅದು ಸಂಭವಿಸಲಿ; ಧೀರರು ನ್ಯಾಯದ ಹಾದಿಯಿಂದ ಒಂದು ಹೆಜ್ಜೆ ಕೂಡ ಅತ್ತ ಇತ್ತ ಸರಿಯುವುದಿಲ್ಲ. ತಾವು ಅಂತಹ ಧೀರರೆಂಬುದನ್ನು ತಮ್ಮ ವರ್ತನೆಯಿಂದ ಶರಣರು ಜಗತ್ತಿಗೆ ನಿದರ್ಶನ ಮಾಡಿಕೊಟ್ಟಿದ್ದಾರೆ. ಅವರು ತೋರಿಸಿದ ದಾರಿ ನಮ್ಮ ಜೀವನದ ಹೆದ್ದಾರಿಯಾಗಲಿ,” - -ಎಂದು ಹೇಳಿ ಕ್ರಮಿತನು ಬೀಳ್ಕೊಡುಗೆಯ ವಿನಯಾಚಾರಕ್ಕಾಗಿ ಕಾಯದೆ ಅಲ್ಲಿಂದ ಹೊರಟನು. ಆ ರಾತ್ರಿಯೇ ಅವನು ತಾನು ಆರ್ಜಿಸಿದ್ದ ಸಿರಿಸಂಪತ್ತುಗಳನ್ನೂ, ಪತ್ನಿ ಪುತ್ರರನ್ನೂ ತ್ಯಜಿಸಿ, ಏಕಾಂಗಿಯಾಗಿ ಕಲ್ಯಾಣವನ್ನು ಬಿಟ್ಟನು. ಆಮೇಲೆ ಇಹಲೋಕದಲ್ಲಿ ಅವನನ್ನು ಯಾರೂ ನೋಡಲಿಲ್ಲ.