ಪುಟ:ಕ್ರಾಂತಿ ಕಲ್ಯಾಣ.pdf/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೧ ಉಪಸಂಹಾರ ತಂಗಡಿಯ ಕದನದಲ್ಲಿ ಸೋತು ಗಾಯಗೊಂಡಿದ್ದ ಮಾಧವ ನಾಯಕನು ಎರಡು ದಿನಗಳ ಅನಂತರ ಕಲ್ಯಾಣಕ್ಕೆ ಹಿಂದಿರುಗಿ ನಗರದ ಹೊರಗಿನ ಬಯಲಲ್ಲಿ ಶಿಬಿರ ಹಾಕಿ, ಸಂದರ್ಶನಕ್ಕಾಗಿ ಅನುಮತಿ ಕೇಳಲು ತನ್ನ ಕಾರ್ಯದರ್ಶಿಯನ್ನು ಸೋಮೇಶ್ವರನ ಬಳಿಗೆ ಕಳುಹಿಸಿದನು. ಶರಣರ ಮೇಲೆ ಹಾಗೂ ಕಲ್ಯಾಣದ ನಾಗರಿಕರ ಮೇಲೆ ತಾನು ನಡೆಸಿದ ಹಿಂಸಾಕೃತ್ಯಗಳ ಬಗೆಗೆ ಸೋಮೇಶ್ವರನ ಪ್ರತಿಕ್ರಿಯೆಯನ್ನು ತಿಳಿಯುವುದು ಅವನ ಉದ್ದೇಶವಾಗಿತ್ತು. ನಿರೀಕ್ಷಿಸಿದ್ದಂತೆ ಸೋಮೇಶ್ವರನು ದರ್ಶನಕ್ಕೆ ಅನುಮತಿ ಕೊಡಲಿಲ್ಲ. ಪ್ರತಿಯಾಗಿ ತನ್ನ ಸೈನ್ಯದಳದ ಮುಖ್ಯಾಧಿಕಾರಿಯನ್ನು ತನ್ನ ಸಂದೇಶದೊಡನೆ ಮಾಧವ ನಾಯಕನ ಶಿಬಿರಕ್ಕೆ ಕಳುಹಿಸಿದನು. “ಮಹಾದಂಡನಾಯಕ ಪದವಿಯ ಎಲ್ಲ ಅಧಿಕಾರಗಳನ್ನು ಪ್ರಭುಗಳು ತಾವೇ ವಹಿಸಿಕೊಂಡು ನಿಮ್ಮನ್ನು ಸುರಪುರದ ಮಂಡಲಾಧಿಕಾರಿಯಾಗಿ ನೇಮಿಸಿದ್ದಾರೆ,” ಎಂದು ಹೇಳಿ ಮುಖ್ಯಾಧಿಕಾರಿಯು ನಿರೂಪವನ್ನು ಕೈಗೆ ಕೊಟ್ಟಾಗ ಮಾಧವ ನಾಯಕನಿಗೆ ಆಕಾಶವೇ ಕಳಚಿಬಿದ್ದಂತಾಯಿತು. ನಗರದ ಎಲ್ಲ ಮಹಾದ್ವಾರಗಳು, ಸಮೀಪದ ಕೋಟೆ ಕೊತ್ತಳಗಳು ಸೋಮೇಶ್ವರನ ವಶದಲ್ಲಿರುವುದೆಂದು ಮುಖ್ಯಾಧಿಕಾರಿಯಿಂದ ತಿಳಿದಾಗ ರಾಜಾಜ್ಞೆಯನ್ನು ಪ್ರತಿಭಟಿಸುವ ಅವಕಾಶವೂ ತಪ್ಪಿತೆಂದು ನಿರ್ಧರಿಸಿದಕೊಂಡನು. “ಪ್ರಭುಗಳ ಆಜ್ಞೆಯನ್ನು ಶಿರಸಾವಹಿಸಿ ನಡೆಯುತ್ತೇನೆ,” ಎಂದು ಮುಖ್ಯಾಧಿಕಾರಿಗೆ ಹೇಳಿ ಕಳುಹಿಸಿ, ಆ ರಾತ್ರಿಯೇ ರಹಸ್ಯವಾಗಿ ಶಿಬಿರವೆತ್ತಿ ಉಳಿದಿದ್ದ ತನ್ನ ಅಲ್ಪ ಸೈನ್ಯದೊಡನೆ ವಿಜಯಪುರ ಮಂಡಲದಲ್ಲಿದ್ದ ತನ್ನ ಉಂಬಳಿ ಗ್ರಾಮವಾದ ಮಾಗಳಿಗೆ ಹೋದನು. ಸೋಮೇಶ್ವರನಿಗೆ ಈ ವಿಚಾರ ವರದಿಯಾದಾಗ, “ದಂಡನಾಯಕರಿಗೆ ವಿಶ್ರಾಂತಿ ಅಗತ್ಯ. ನಾವು ಪುನಃ ಆಜ್ಞೆಮಾಡುವವರೆಗೆ ಅವರು ಅಲ್ಲಿಯೇ ಇರಲಿ,” ಎಂದು ಹೇಳಿ ಸುರಪುರಕ್ಕೆ ಬೇರೊಬ್ಬ ಮಾಂಡಲಿಕನನ್ನು ಕಳುಹಿಸಿದನು. ಆಗಲೆ