ಪುಟ:ಕ್ರಾಂತಿ ಕಲ್ಯಾಣ.pdf/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೨ ಕ್ರಾಂತಿ ಕಲ್ಯಾಣ ಅವನ ಅಸಮಾಧಾನ ಅರ್ಧ ಮುಗಿದಿತ್ತು. ಎರಡು ವರ್ಷಗಳ ಮೇಲೆ ಅವನ ಸಹೋದರ ಮೈಲುಗಿ ಮಂಗಳವೇಡೆಯನ್ನು ಆಕ್ರಮಿಸಿಕೊಂಡು ಅಣ್ಣನ ಮೇಲೆ ಯುದ್ಧ ಹೂಡಿದಾಗ ಸೋಮೇಶ್ವರನು ಮಾಧವ ನಾಯಕನನ್ನು ಹಿಂದಕ್ಕೆ ಕರೆಸಿಕೊಂಡು ಪುನಃ ದಂಡನಾಯಕನನ್ನಾಗಿ ಮಾಡಿದನು. ತೈಲಪನ ಕಿರಿಯ ಸಹೋದರ ನಾಲ್ವಡಿ ಸೋಮೇಶ್ವರನು ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ಆ ಸಂದರ್ಭದಲ್ಲಿ ಮತ್ತೆ ಪ್ರಯತ್ನಿಸಿದನು. ಗೋವೆಯ ಕದಂಬ ಅರಸು ಜಯಕೇಶಿ, ಬನವಾಸಿ, ಹಾನಗಲ್ಲುಗಳ ಕದಂಬ ವಂಶೀಯ ಸಾಮಂತರು, ಓರಂಗಲ್ಲಿನ ಕಾಕತೀಯರು, ಉಚ್ಚಂಗಿಯ ಪಾಂಡ್ಯರು, ಕರ್ಹಾಡದ ವಿದ್ಯಾಧರ ವಂಶದ ವಿಜಯಾರ್ಕನು, ದೇವಗಿರಿಯ ಯಾದವ ಭಿಲ್ಲಮನು, ಚಾಲುಕ್ಯ ಸೋಮೇಶ್ವರನ ಪಕ್ಷ ವಹಿಸಿ ಸಹಕಾರ ನೀಡಿದರು. ಆಗ ನಡೆದ ಯುದ್ದಗಳಲ್ಲಿ ಮಾಧವ ನಾಯಕನಿಗೆ ಜಯವಾಯಿತು. ಕಲಚೂರ್ಯ ಸೋಮೇಶ್ವರನ ಕಾಲದ ಒಂದು ಶಾಸನದಲ್ಲಿ ಮಾಧವ ನಾಯಕನು 'ಕಲಚುರಿ ಭೂಪಾಲವಿಪುಳ ರಾಜ್ಯೋದ್ಧರಣಂ' ಎಂದು ಪ್ರಶಂಸಿಸಲ್ಪಟ್ಟಿದ್ದಾನೆ. ಕುರುಗೋಡಿನಲ್ಲಿ ಮಾಚಿದೇವರಿಂದ ಬೀಳ್ಕೊಂಡ ಶರಣರ ಯಾತ್ರಾ ತಂಡ, ಚೆನ್ನಬಸವಣ್ಣನವರ ನೇತೃತ್ವದಲ್ಲಿ ಹುಬ್ಬಳ್ಳಿ ಧಾರವಾಡಗಳ ಮಾರ್ಗವಾಗಿ ಯಾವ ದುರ್ಘಟನೆಗಳೂ ಇಲ್ಲದೆ ನಿಧಾನವಾಗಿ ಪಯಣಮಾಡುತ್ತ ಉಳಿವೆಯನ್ನು ಸೇರಿತು. ಗೋವೆಯ ಜಯಕೇಶಿಯ ಸಾಮಂತರಾಗಿದ್ದ ಸೂಪಕಂಪಣದ ಹರಿಯಪರಾಣಿ ಮತ್ತು ಬೋಪದೇವರಾಣಿ ಎಂಬ ಹೆಗ್ಗಡಿತಿಯರು ಉಳಿವೆಯ ಮಹಮನೆ ಶಿವಪುರಗಳ ರಚನೆಗೆ ಸಹಾಯ ಮಾಡಿದರು. ಅತ್ಯಲ್ಪ ಕಾಲದಲ್ಲಿ ಉಳಿವೆಯ ಮಹಮನೆ ನಾಡಿನ ಎಲ್ಲ ಕಡೆ ಪ್ರಸಿದ್ದ ಪಡೆದ ಓರಂಗಲ್, ಕೊಂಡವೀಡು, ಅನಂತಪುರ, ಭಾಗಾನಗರ, ರಾಯಚೂರು, ಹಂಪೆ, ಆನೆಗೊಂದಿ, ಹೊನ್ನಾವರು, ಮಂಗಳೂರು, ಬೆಂಗಳೂರು, ಶ್ರೀರಂಗಪಟ್ಟಣ, ತೆರಕಣಾಂಬಿ ಮುಂತಾದ ಕಡೆಗಳಿಂದ ಶರಣರನ್ನು ಆಕರ್ಷಿಸಿತು. ಅಲ್ಲಿ ಆಗಾಗ ನಡೆಯುತ್ತಿದ್ದ ಗಣಪರ್ವಗಳೂ ಚಾಲುಕ್ಯ, ಹೊಯ್ಸಳ, ಕಾಕತೀಯ ನಾಡುಗಳಲ್ಲಿ ಶರಣಧರ್ಮ ಹರಡಲು ಕಾರಣವಾಯಿತು. ಅಪರಿಮಿತ ಪರಿಶ್ರಮದಿಂದ, ಕಲ್ಯಾಣದ ಅನುಭವಮಂಟಪದಿಂದ ಉಳಿವೆಗೆ ತಂದ ಸರಸ್ವತೀ ಭಂಡಾರವನ್ನು ಚೆನ್ನಬಸವಣ್ಣನವರು ವಿಪುಲವಾಗಿ ವೃದ್ಧಿಗೊಳಿಸಿದರು. ವಚನ ಸಂಗ್ರಹ, ಪ್ರಬಂಧಗಳ ಪ್ರತಿ ಮಾಡಿಸಿ ನಾಡಿನ ಎಲ್ಲ ಶೈವಮಠಗಳಿಗೆ ಹಂಚಿಸಿದರು. ಈ ಜ್ಞಾನ ಪ್ರಸಾರ ಕಾರ್ಯದಲ್ಲಿ ಚೆನ್ನಬಸವಣ್ಣನವರಿಗೆ ಅಗತ್ಯವಾದ ಎಲ್ಲಾ ರೀತಿಯ ಜನ, ಮನ, ಧನ ಸಹಾಯಗಳನ್ನು ಒದಗಿಸಿದ ಓರಂಗಲ್ಲಿನ