ಪುಟ:ಕ್ರಾಂತಿ ಕಲ್ಯಾಣ.pdf/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಪಸಂಹಾರ ೪೮೩ ಪ್ರತಾಪರುದ್ರ, ಸೋವೆಯ ಕದಂಬ ಜಯಕೇಶಿ, ಬನವಾಸಿಯ ಕದಂಬ ಸಾಮಂತ ಕಾಮದೇವ, ಉಚ್ಚಂಗಿಯ ವೀರಪಾಂಡ್ಯ-ಮುಂತಾದವರುಗಳು ಇತಿಹಾಸ ಪ್ರಸಿದ್ದರು. ಬಸವಣ್ಣನವರ ಕುಮಾರ ಸಂಗಮನಾಥನು ಪ್ರಾಪ್ತವಯಸ್ಕನಾಗುವವರೆಗೆ ಗಂಗಾಂಬಿಕೆ ಜೀವಿಸಿದ್ದು ಅನಂತರ ಲಿಂಗೈಕ್ಯಳಾದಳು. ನಾಗಲಾಂಬೆಯು ಅದಕ್ಕಿಂತ ಹೆಚ್ಚು ಕಾಲ ಜೀವಿಸಿದ್ದು ಹೋಳ ನಾಡಿನ ಬಾಳೆಹೊನ್ನೂರಿನಲ್ಲಿ ಲಿಂಗೈಕ್ಯಳಾದಳೆಂದು ಐತಿಹ್ಯ ತಿಳಿಸುತ್ತದೆ. ಅಗ್ಗಳ ಬ್ರಹ್ಮಶಿವಪಂಡಿತರು ಉದ್ದೇಶಿಸಿದ್ದಂತೆ ಉತ್ತರಾಪಥದ ಯಾತ್ರಾತಂಡದೊಡನೆ ಪ್ರಯಾಣಮಾಡಿ ಕರ್ಹಾಡಕ್ಕೆ ಹಿಂದಿರುಗಿದರು. ವಿಜಯಾರ್ಕನು ಅವರಿಗೆ ಆಶ್ರಯ ಕೊಟ್ಟನು. ಅಗ್ಗಳನ ಕೆಲವು ಪದ್ಯಗಳು ವಲ್ಲಭದೇವನ “ಸುಭಾಷಿತಾವಳಿ” ಯಲ್ಲಿ ಉದ್ಭತವಾಗಿವೆ. ಕುಮಾರ ಪ್ರೇಮಾರ್ಣವನು ಪ್ರಾಪ್ತವಯಸ್ಕನಾಗುವಷ್ಟರಲ್ಲಿ ಕಲಚೂರ್ಯ ಪರ್ಯಾಯ ಮುಗಿದು ಚಾಲುಕ್ಯ ರಾಜ್ಯವು ಚೂರಾಪಾರಾಗಿ ಒಡೆದುಹೋಗಿತ್ತು. ತೈಲಪನ ಕಿರಿಯ ಸಹೋದರ ನಾಲ್ವಡಿ ಸೋಮೇಶ್ವರನು ಚಾಲುಕ್ಯ ಪುನಃಪ್ರತಿಷ್ಠೆಗಾಗಿ ಆಗಾಗ ಪ್ರಯತ್ನ ನಡೆಸುತ್ತಿದನು. ಈ ಬಗೆಯ ಎಲ್ಲ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದ ಪ್ರೇಮಾರ್ಣವನು ಕರ್ಹಾಡದಲ್ಲಿ ತನ್ನ ಬಂಧುಗಳ ಆಶ್ರಯದಲ್ಲಿ ಶಾಂತಿಯುತ ಬದುಕನ್ನು ಕಳೆದನು. ಮೋಳಿಗೆ ಮಾರಯ್ಯನವರು ಕ್ರಾಂತಿ ಮುಗಿದ ಮೇಲೂ ಕೆಲವು ವರ್ಷಗಳು ಕಲ್ಯಾಣದಲ್ಲಿದ್ದರು. ಒಂದು ವಚನದಲ್ಲಿ ಅವರು ೧೨೦ ವರ್ಷ ಜೀವಿಸಿದ್ದುದಾಗಿ ತಾವೇ ಹೇಳಿಕೊಂಡಿದ್ದಾರೆ. ಈ ಕಾದಂಬರಿಯಲ್ಲಿ ವರ್ಣಿಸಿದ ಘಟನೆಗಳು ನಡೆದ ಮೇಲೆ ಆರನೆಯ ವರ್ಷದಲ್ಲಿ, ಗೊಂದಲದಲ್ಲಿ ಪ್ರಾರಂಭವಾದ ಕಲಚೂರ್ಯ ಸೋಮೇಶ್ವರನ ಆಳ್ವಿಕೆಯು ಗೊಂದಲದಲ್ಲೇ ಮುಗಿಯಿತು. ಅವನ ಸೋದರರಾದ ಮೈಲುಗಿ, ಸಂಕಮ, ಆಹವಮಲ್ಲ ಮತ್ತು ಸಿಂಘಣರು ಅನುಕ್ರಮವಾಗಿ ಪಟ್ಟಕ್ಕೆ ಬಂದು ಹಲವಾರು ವರ್ಷಗಳು ಆಳಿದರು. ಕೊನೆಕೊನೆಗೆ ಕಲ್ಯಾಣದ ಸುತ್ತುಮುತ್ತಿನ ಪರಿಮಿತಿ ಪ್ರವೇಶ ಮಾತ್ರವೇ ಅವರ ಅಧೀನದಲ್ಲಿತ್ತು. ಕ್ರಿ. ಶ. ೧೧೮೩ ರಲ್ಲಿ, ಬಿಜ್ಜಳನ ಮರಣಾನಂತರ ಹದಿನಾರು ವರ್ಷಗಳ ಅನಂತರ, ಚಾಲುಕ್ಯ ನಾಲ್ವಡಿ ಸೋಮೇಶ್ವರನು ಕೊನೆಯ ಕಲಚೂರ್ಯ ಅರಸು ಸಿಂಘಣನನ್ನು ಯುದ್ಧದಲ್ಲಿ ಸೋಲಿಸಿ ಚಾಲುಕ್ಯ ರಾಜಸತ್ತೆಯನ್ನು ಪುನಃ ಪ್ರತಿಷ್ಠಿಸಿದನು.