ಪುಟ:ಕ್ರಾಂತಿ ಕಲ್ಯಾಣ.pdf/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೪ ಕ್ರಾಂತಿ ಕಲ್ಯಾಣ ಕ್ರಿ.ಶ. ಏಳನೇ ಶತಮಾನದಲ್ಲಿ ಮಧ್ಯಭಾರತದ ಕಲಚೂರ್ಯರು ರಾಜ್ಯಭ್ರಷ್ಟರಾಗಿ ದಕ್ಷಿಣ ಭಾರತಕ್ಕೆ ವಲಸೆ ಬಂದರು. ಅವರ ವಂಶೀಯರಿಗೆ ಕಲ್ಯಾಣಿಯ ಚಾಲುಕ್ಯ ಅರಸರ ಆಶ್ರಯ ದೊರಕಿತು. ಅವರಲ್ಲಿ ಪ್ರಖ್ಯಾತನಾದ ಬಿಜ್ಜಳನು ತನ್ನ ಆಶ್ರಯ ದಾತನಾದ ನೂರ್ಮಡಿ ತೈಲಪನನ್ನು ಸೆರೆಯಲ್ಲಿಟ್ಟು ರಾಜ್ಯವನ್ನು ಅಪಹರಿಸಿದನು. ಅವನ ಆಳ್ವಿಕೆಯಲ್ಲಿ ಪ್ರವರ್ಧಮಾನವಾದ ಶರಣಧರ್ಮ ಕೊನೆಕೊನೆಗೆ ಅವನಿಂದಲೆ ಕಷ್ಟಕ್ಕೀಡಾಯಿತು. ಸಂಪ್ರದಾಯಗಳ ಅಂಧಶಕ್ತಿಗೆ ಅಧೀನರಾಗಿ ಅವನತಿಯ ಮಾರ್ಗ ಹಿಡಿದಿದ್ದ ಆಗಿನ ಕಾಲದ ಜನರನ್ನೂ, ಅವರ ಧಾರ್ಮಿಕ ಭರವಸೆಗಳನ್ನೂ ಸುಧಾರಿಸಿ ಅವರನ್ನು ಪ್ರಗತಿಪಥದಲ್ಲಿ ನಡೆಸಿದ ಮಹಾಪರಾಧಕ್ಕಾಗಿ ಶರಣರು ಬಿಜ್ಜಳನ ಆಕ್ರೋಶಕ್ಕೆ ಪಾತ್ರರಾದರು. ಕೊನೆಗೆ ಬಿಜ್ಜಳನ ಹಿಂಸೆಯಿಂದ ಪಾರಾಗಲು ಅವರು ಕಲ್ಯಾಣವನ್ನೇ ಬಿಡಬೇಕಾಯಿತು. ಅದೇ ಸಮಯಕ್ಕೆ ಚಾಲುಕ್ಯ ರಾಜಸತ್ತೆಯ ಪುನರ್‌ಪ್ರತಿಷ್ಠೆಗಾಗಿ ನಡೆಯುತ್ತಿದ್ದ ಸಂಚಿನಲ್ಲಿ ಬಿಜ್ಜಳನು ಹತನಾದನು. ಅವನ ಪುತ್ರರು ಹೆಚ್ಚು ಕಾಲ ಆಳಲು ಶಕ್ತರಾಗಲಿಲ್ಲ. ಯಾವ ಧರ್ಮವನ್ನು ಬಿಜ್ಜಳನು ಹಿಂಸೆ ದಬ್ಬಾಳಿಕೆಗಳಿಂದ ನಿರ್ಮೂಲಗೊಳಿಸಲು ಪ್ರಯತ್ನಿಸಿ ವಿಫಲನಾದನೋ ಆ ಶರಣಧರ್ಮ ಕಾಲಕ್ರಮದಲ್ಲಿ ಚಾಲುಕ್ಯ ಹೊಯ್ಸಳ ರಾಜ್ಯಗಳ ಪ್ರಭಾವಶಾಲೀ ಧರ್ಮವಾಯಿತು. ಕನ್ನಡನಾಡು ನುಡಿಗಳಿಗೆ ಶರಣರು ಅಪಾರ ಸೇವೆ ಸಲ್ಲಿಸಿದರು. ಬಿಜ್ಜಳನ ಹೆಸರು ಇತಿಹಾಸದಲ್ಲಿ ಇನ್ನೂ ಉಳಿದಿರುವುದು ಆ ಶರಣಧರ್ಮದ ಪ್ರಭಾವದಿಂದಲೆ ಆಗಿದೆ. ಇದೇನು ಯೋಗಾಯೋಗವೆ ?ವಿಧಿವಿಲಾಸವೆ ? ಕಾಲಕರ್ಮವಿಪಾಕದ ವೈಚಿತ್ರ್ಯವೇ? ಕಾಲಾಯ ತಸ್ಯೆ ನಮಃ