ಪುಟ:ಕ್ರಾಂತಿ ಕಲ್ಯಾಣ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೩೭

ನುಡಿದನು ಕರ್ಣದೇವ.

ಜಗದೇಕಮಲ್ಲನೆಂದನು: "ಈ ಹೆಣ್ಣು ದೇಹದ ಲಜ್ಜೆಗೇಡಿ ಭೂತಗಳ ಮಧ್ಯೆ ಸೆರೆಯಾಳಾಗಿ ಜೀವಿಸುವ ಆ ದುರ್ದೈವಿ ಅರಸನು ರಾಜ್ಯಭಾರ ಮಾಡುವುದು ಹೇಗೆ? ಈ ಸಮಸ್ಯೆಗೆ ನೀನು ಸಮಾಧಾನ ಹೇಳಬೇಕು, ಅಗ್ಗಳ."

"ಆ ಕಾರ್ಯವನ್ನು ಮಂತ್ರಿಗಳು ಮಾಡುತ್ತಾರೆ," ಅಗ್ಗಳನೆಂದನು. "ಅವರ ಸಹಾಯಕ್ಕಾಗಿ ಸಾಮಂತರು, ಸೇನಾಪತಿಗಳು, ನಿಯುಕ್ತರು, ಕಾರ್ಯಕರ್ತರು, ಕರಣಿಕರು, ನಿಯೋಗಿಗಳು ಮುಂತಾದ ಅಧಿಕಾರಿಗಳ ಒಂದು ದೊಡ್ಡ ಸೈನ್ಯವೇ ಇರುತ್ತದೆ. ಇವರು ವೈಯಕ್ತಿಕವಾಗಿ ನಡೆಸುವ ಪ್ರಜಾಹಿಂಸೆಯನ್ನು ನಾವು ರಾಜ್ಯಭಾರ ಎಂಬ ದೊಡ್ಡ ಹೆಸರಿನಿಂದ ಕರೆಯುತ್ತೇವೆ."

"ಹಾಗಾದರೆ ಪ್ರಜೆಗಳನ್ನು ರಕ್ಷಿಸುವುದು ರಾಜನ ಕರ್ತವ್ಯವೆಂಬ ಧರ್ಮಶಾಸ್ತ್ರ ನಿಬಂಧನೆಯನ್ನು ನೀವು ಒಪ್ಪುವುದಿಲ್ಲವೆ?"

"ಒಪ್ಪುತ್ತೇನೆ, ಜಗದೇಕಮಲ್ಲರಸರೆ," ಅಗ್ಗಳನು ಆವೇಶದಿಂದ ನುಡಿದನು. "ಆದರೆ ಪ್ರಜೆ, ರಾಜ್ಯ, ರಕ್ಷಣೆ ಈ ಮಾತುಗಳ ಅರ್ಥ ರಾಜನಿಗೆ ತಿಳಿದಿದ್ದರಲ್ಲವೆ ಆ ವಿಚಾರ? ಬಾಲ್ಯದಲ್ಲಿ ಉಪಾಧ್ಯಾಯರು, ಧರ್ಮಬೋಧಕರು ಈ ಮಾತುಗಳ ಅರ್ಥವನ್ನು ರಾಜನಿಗೆ ಪಾಠ ಹೇಳಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಅದನ್ನು ರಾಜನು ಅರ್ಧಂಬರ್ಧವಾಗಿ ತಿಳಿದುಕೊಂಡಿರುವುದೂ ಸಾಧ್ಯ. ಆದರೆ ಕೈಶೋರವನ್ನು ದಾಟಿ ಯೌವನದಲ್ಲಿ ಅಡಿಯಿಡುತ್ತ ರಾಜನು ಎಲ್ಲವನ್ನೂ ಮರೆತುಬಿಡುತ್ತಾನೆ. ಗಣಿಕಾವಾಸದ ವಿನೋದ ವಿಲಾಸಗಳೂ ಅವನನ್ನು ತಮ್ಮ ಕಡೆಗೆ ಸೆಳೆಯುತ್ತವೆ. ಹಿರಿಯ ಹೆಗ್ಗಡತಿಯೊಬ್ಬಳ ರಹಸ್ಯ ಪತಿಯಾಗಿ ಪ್ರೇಮ ಜೀವನದ ಮೊದಲ ಪಾಠ ಕಲಿಯುತ್ತಾನೆ. ಕ್ರಮವಾಗಿ ಮದ್ಯಪಾನ ಅಭ್ಯಾಸವಾಗುತ್ತದೆ. ರಾಜ್ಯ ಪ್ರಜೆಗಳು, ಮಂತ್ರಿಗಳು, ಅಧಿಕಾರಿಗಳು, ಇವರ ವಿಚಾರ ಬೇಡವಾಗುತ್ತದೆ. ಈ ವಿಲಾಸ ಜೀವನದಲ್ಲಿ ಅವನಿಗೆ ಎಲ್ಲೆಲ್ಲಿಯೂ ಕಾಣುವ ವಸ್ತುಗಳೆಂದರೆ, ಹೆಣ್ಣಿನ ಮುಖಕಮಲ, ಕನ್ನೈದಿಲೆ ಕಣ್ಣುಗಳು, ಜವಳಿ ಹಕ್ಕಿಯ ಎದೆಭಾವ, ತೊಡೆ ಮುಡಿಯ ತೀರ್ಥಶಿಲೆ, ತಾವರೆಯ ಎಳೇದಂಟಿನಂತೆ ಬಳಕುವ ಕೈಗಳು, ಶೈವಾಲದಂತೆ ನಿಬಿಡವಾದ ಕೇಶರಾಶಿ. ಈ ಕಾಳಿಂಗ ಮಡುವಿನಲ್ಲಿ ಮುಳುಗಿದ ರಾಜನು ಪುನಃ ಮಾನವನಾಗಿ ಮೇಲೇಳುವದು ಏಳೇಳು ಜನ್ಮಕ್ಕೂ ಸಾಧ್ಯವಾಗುವದಿಲ್ಲ."

"ರಾಜನ ಸ್ಥಿತಿ ಹೀಗಾದ ಮೇಲೆ ಮಂತ್ರಿಗಳ ಪಾಡೇನು? ಸ್ವಾರ್ಥದುರಭಿಮಾನಗಳು ಅವರ ಆಧಾರಸ್ತಂಭಗಳಾಗುವುವು. ಧನಸಂಗ್ರಹ ಆಸೆಯಿಂದ ಅವರು ನಿರಂಕುಶರಾಗಿ ಪ್ರಜಾಪೀಡನೆಗೆ ತೊಡಗುವರು. ಮಂತ್ರಿಶಾಖೆಯ