ಪುಟ:ಕ್ರಾಂತಿ ಕಲ್ಯಾಣ.pdf/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಡೆಯ ನಾಲ್ಕು ಮಾತು ೪೮೯ ದುಷ್ಟ ಸಂಪ್ರದಾಯ ಮುಸ್ಲಿಂ ಅರಸರಂತೆ ಹಿಂದೂ ಅರಸರಲ್ಲಿಯೂ ಪ್ರಚಾರದಲ್ಲಿ ಇದ್ದಿತೆಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳಿವೆ. “ಶಚಿಯನ್ನು ಪಡೆಯದೆ ಇಂದ್ರತ್ವ ಪೂರ್ಣವಾಗುವುದಿಲ್ಲ” ಎಂದು ಹೇಳಿ ನಮ್ಮ ಪುರಾಣಗಳೂ ಇದನ್ನು ಒಂದು ರೀತಿಯಲ್ಲಿ ಅನುಮೋಸಿದಿವೆ. ನೂರ್ಮಡಿ ತೈಲಪನ ಮರಣಾನಂತರ ಬಿಜ್ಜಳನ ವಂಚನೆ ದೌರ್ಜನ್ಯಗಳಿಗೆ ಬಲಿಯಾದ ತೈಲಪನ ರಾಣಿಯೊಬ್ಬಳು ಅವನ ವಧೆಗೆ ಕಾರಣಳಾದದ್ದು ಮಧ್ಯಯುಗದ ರಾಜವಂಶಗಳ ಇತಿಹಾಸದಲ್ಲಿ ಅಸಂಭವ ಘಟನೆಯಲ್ಲ. ಗೀತೆ ಹೇಳುವಂತೆ ಮತಿಭ್ರಂಶ ವಿನಾಶಗಳಿಗೆ ಕಾರಣವಾದ ಕಾಮ ಕ್ರೋಧ ಲೋಭ ಮೋಹ ಮುಂತಾದ ದುಷ್ಟ ಗುಣಗಳೆಲ್ಲವೂ ಬಿಜ್ಜಳನಲ್ಲಿದ್ದವು. ಕಾಮೇಶ್ವರಿಯ ಮಾತುಗಳಲ್ಲಿ ಅವನು 'ಪ್ರಜಾಪೀಡಕ ಮಾನವರೂಪೀದಾನವ' ನಾಗಿದ್ದನು. ಜನತೆಯ ದೃಷ್ಟಿಯಲ್ಲಿ ಲೋಕಕಂಟಕನಾಗಿದ್ದ ದಾನವೇಶ್ವರ ರಾವಣನನ್ನು "ಪ್ರವರಪುರುಷನನ್ನಾಗಿ ವರ್ಣಿಸಿದ ಒಂದು ವಿಶಿಷ್ಟ ಸಂಪ್ರದಾಯದ ಕವಿಗಳು, ಇತಿಹಾಸ ಶಾಸನಾಧಾರಗಳನ್ನು ಅತ್ತಿಟ್ಟು ಬಿಜ್ಜಳನನ್ನು “ಆದರ್ಶರಾಜ” ನನ್ನಾಗಿ ವರ್ಣಿಸಿದುದು ಸಹಜವಾಗಿದೆ. ಆದರೆ ಸತ್ಯದೂರವೂ ಅತಿರಂಜಿತವೂ ಆದ ಅಂತಹ ರಚನೆಗಳಿಗೆ ಇತಿಹಾಸದ ದೃಷ್ಟಿಯಿಂದ ಯಾವ ಮೌಲ್ಯವೂ ಇರುವುದಿಲ್ಲ. ಬಿಜ್ಜಳನ ವಧೆ ಶರಣರ ಪ್ರಚೋದನೆಯಿಂದ ನಡೆಯಿತೆಂಬ ಸತ್ಯದೂರವಾದ ಅತಿರಂಜಿತ ಅಪವಾದ, ವಧೆ ನಡೆದ ಕೆಲವು ವರ್ಷಗಳ ಮೇಲೆ, ಕಲಚೂರ್ಯ ಅಧಿಕಾರ ಅಸ್ತವಾದ ಅನಂತರ, ನಾಲ್ವಡಿ ಸೋಮೇಶ್ವರನ ಕಾಲದಲ್ಲಿ ಪ್ರಚಾರಕ್ಕೆ ಬಂದಿರಬೇಕು. ಪ್ರಜಾಪೀಡಕನೂ ರಾಜ್ಯಾಪಹಾರಿಯೂ ಆಗಿದ್ದ ಬಿಜ್ಜಳನ ವಧೆ ತಮ್ಮ ಪ್ರಚೋದನೆ ಪ್ರೋತ್ಸಾಹಗಳಿಂದ ನಡೆಯಿತೆಂದು ಶರಣರೇ ಜಂಭದಿಂದ ಹೇಳಿಕೊಂಡಿರಬೇಕು. ಕ್ರಿ.ಶ. ೧೧೯೧ ರಲ್ಲಿ ರಚಿತವಾಗಿರಬಹುದಾದ ತೆಲುಗು “ಬಸವ ಪುರಾಣದಲ್ಲಿ ಮೊಟ್ಟಮೊದಲು ಇದರ ಸೂಚನೆ ದೊರೆಯುತ್ತದೆ. ಅದನ್ನು ರಚಿಸಿದ ಪಾಲ್ಕುರಿಕೆ ಸೋಮನಾಥನು, “ಪ್ರಸ್ತುತಿಂಪಂಗ ಸಧ್ಯಕ್ತಿ ವಿಸ್ಸುರಣ ಪ್ರಸ್ತುತಿಕಿಕ್ಕಿನ ನಸವುನಿ ಚರಿತ ಚೆಪ್ಪಿತಿ ಭಕ್ತುಲಚೆವಿನ್ನಮಾಡಿ,” ಎಂದು ಹೇಳಿಕೊಂಡಿದ್ದಾನೆ. ಸ್ತುತಿರೂಪವಾಗಿ ಜನರಲ್ಲಿ ಹರಡಿ ಪ್ರಖ್ಯಾತಿಗೇರಿದ ಬಸವನ ಚರಿತ್ರೆಯನ್ನು ಭಕ್ತರಿಂದ ಕೇಳಿದಂತೆ ನಾನು ಬರೆಯುತ್ತೇನೆ ಎಂಬ ಅವನ ಈ ಹೇಳಿಕೆ ಅರ್ಥಗರ್ಭಿತವಾಗಿದೆ. ಪಾಲ್ಕುರಿಕೆ ಸೋಮನಾಥನು ಬಸವಣ್ಣನವರ ಸಮಕಾಲೀನನಾಗಿದ್ದು ಅವರ ಚರಿತ್ರೆಯನ್ನು ಸ್ವಯಂ ತಿಳಿದವನಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಘಟನೆಗಳು ನಡೆದ ಸ್ಥಳದಿಂದ ಬಹು ದೂರದ