ಪುಟ:ಕ್ರಾಂತಿ ಕಲ್ಯಾಣ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಕ್ರಾಂತಿ ಕಲ್ಯಾಣ

ಕರಣಿಕ ಕಾರ್ಯಕರ್ತರಲ್ಲಿ, ನಿಯುಕ್ತ ನಿಯೋಗಿಗಳಲ್ಲಿ, ನಿರಂಕುಶ ಸ್ವೇಚ್ಛಾಡಳಿತದ ವಿಷಜ್ವಾಲೆ ಹರಡಿ ರಾಜ್ಯವನ್ನೇ ಸುಡಲು ಮೊದಲಾಗುವುದು.

"ಇನ್ನು ಸಾಮಂತರು, ಮಾಂಡಲಿಕರು, ಸೇನಾನಾಯಕರು ಮುಂತಾದ ಶಸ್ತ್ರೋಪಜೀವಿಗಳ ವಿಷಯ ಕೇಳಬೇಕೆ? ಯುದ್ದದಲ್ಲಿ ಶತ್ರುಗಳ ಸಂಗಡ ಹೋರಾಟ, ಶಾಂತಿಯಲ್ಲಿ ಪ್ರಜೆಗಳ ಸುಲಿಗೆ, ಇವೆರಡೇ ತಮ್ಮ ಧರ್ಮವೆಂದು ತಿಳಿದು ಅವರು ರಾಜನ ಪರೋಕ್ಷದಲ್ಲಿ ತಾವೇ ರಾಜರಂತೆ ಮೆರೆಯುವರು. ಇಂತಹ ರಾಜರು, ರಾಜ್ಯಗಳೂ ಚಾಳುಕ್ಯ ನಾಡಿನಲ್ಲಿ ಎಲ್ಲ ಕಡೆ ಬೆಳೆದು ನೂರು ಮುಖದ ಜಿಗಣಿಯಂತೆ ಪ್ರಜೆಗಳ ಸರ್ವಸ್ವವನ್ನು ಹೀರುತ್ತಿವೆ. ಈ ಸ್ಥಿತಿಯಲ್ಲಿ ರಾಜ್ಯದ ಪ್ರಜೆಗಳ ಶ್ರೇಯಸ್ಸು ಅಭ್ಯುದಯಗಳನ್ನು ನಿರೀಕ್ಷಿಸುವದು ತಿರುಕನ ಕನಸಿನಂತೆ"—ಎಂದು ಅಗ್ಗಳನು ಮುಗಿಸಿದನು. ಅವನ ಮಾತುಗಳಲ್ಲಿ ಅರೆ ಮರೆಯಾಗಿದ್ದ ಕ್ರಾಂತಿಯ ಕಿಡಿಗಳನ್ನು ಗುರುತಿಸಬಲ್ಲವರು ಆಗ ಅಲ್ಲಿ ಯಾರೂ ಇರಲಿಲ್ಲ.

ಕರ್ಣದೇವನು ಮತ್ತನಾಗಿ ಕಟುಕನು ವಧಾಪೀಠಕ್ಕೆ ಕಟ್ಟಿದ ಹಂದಿಯಂತೆ ಗುರುಗುರು ಶಬ್ದ ಮಾಡುತ್ತಿದ್ದನು. ಪಾನೋನ್ಮತ್ತಳಾಗಿ ವಿಕೃತ ಚೇಷ್ಟೆಗಳಿಗೆ ತೊಡಗಿದ್ದ ಸಖಿಯನ್ನು ಸಮಾಧಾನಪಡಿಸುವುದರಲ್ಲಿ ಜಗದೇಕಮಲ್ಲನು ಮಗ್ನನಾಗಿದ್ದನು. ಹೆಗ್ಗಡೆಗೆ ಇನ್ನೂ ಮತ್ತೇರಿರಲಿಲ್ಲ. ಅಗ್ಗಳನ ಮಾತುಗಳಲ್ಲಿ ಏನೋ ಸಿಡಿಮದ್ದು ಅಡಗಿದೆಯೆಂದು ಅವನು ತಿಳಿದರೂ ಅದೇನೆಂಬುದನ್ನು ಬಿಚ್ಚಿ ನೋಡುವ ಬುದ್ಧಿಶಕ್ತಿಯಿರಲಿಲ್ಲ. ದನಿಯನ್ನು ನಸು ಗಡುಸಾಗಿಸಿ, "ನೀವು ಆಡುತ್ತಿರುವುದು ರಾಜದ್ರೋಹ ಅಗ್ಗಳ?" ಎಂದನು.

ಅಗ್ಗಳನ್ನು ಸಿಡಿದೆದ್ದು ನುಡಿದನು: "ನಾನು ಹೇಳುತ್ತಿರುವುದನ್ನು ನೀವು ಅಪಾರ್ಥ ಮಾಡುತ್ತಿದ್ದೀರಿ, ಹೆಗ್ಗಡೆಗಳೆ. ಚಾಲುಕ್ಯ ಅರಸು ಜಗದೇಕಮಲ್ಲರಸರನ್ನು ರಾಜಕೀಯ ಕಾರಣಗಳಿಗಾಗಿ ಗೃಹಬಂಧನದಲ್ಲಿರಿಸುವುದು ಬಿಜ್ಜಳರಾಯರಿಗೆ ಅಗತ್ಯವಾಯಿತು. ಆ ಕಾರ್ಯವನ್ನು ದಕ್ಷತೆ, ವಿವೇಚನೆಗಳಿಂದ, ಜಗದೇಕಮಲ್ಲರ ಗೌರವ ಪ್ರತಿಷ್ಟೆಗಳಿಗೆ ಕುಂದಾಗದ ರೀತಿಯಲ್ಲಿ ನಿರ್ವಹಿಸಲು ನಂಬಿಕಸ್ತರಾದ ನಿಮ್ಮನ್ನು ಗೊತ್ತುಮಾಡಿದರು. ಆದರೆ ಇಲ್ಲಿ ನಡೆಯುತ್ತಿರುವುದೇನು? ನಿಮ್ಮ ದೃಷ್ಟಿಯಲ್ಲಿ ಜಗದೇಕಮಲ್ಲ ಭಂಡರಾಜ, ವಿನೋದ ಉಪಹಾಸಗಳ ವಸ್ತು. ಹುಚ್ಚುದೊರೆ! ಅವನ ಉಪಭೋಗಕ್ಕಾಗಿ ನೇಮಿಸಲ್ಪಟ್ಟ ಗಣಿಕೆಯರು ಒತ್ತೆಯಿಲ್ಲದೆ ನಿಮ್ಮನ್ನು ಸೇವಿಸುವ ದಾಸಿಯರು. ಬಿಜ್ಜಳರಾಯರು ಯಾರಲ್ಲಿ ಗೌರವದಿಂದ ನಡೆದುಕೊಳ್ಳುವರೋ ಆ ರಾಜಬಂದಿಯ ಮೇಲೆ ನಿಮ್ಮ ಅಪಮಾನ ಅತ್ಯಾಚಾರಗಳ ಸುರಿಮಳೆ! ಈ ವಿಚಾರಗಳು ಬಿಜ್ಜಳರಾಯರಿಗೆ ತಿಳಿದರೆ ಏನಾಗುವುದೆಂಬುದನ್ನು