ಪುಟ:ಕ್ರಾಂತಿ ಕಲ್ಯಾಣ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೩೯

ಯೋಚಿಸಿದ್ದಿರಾ ಹೆಗ್ಗಡೆಗಳೆ? ಸಹೋದರನೆಂಬ ಕಾರಣದಿಂದ ಕರ್ಣದೇವರು ತಪ್ಪಿಸಿಕೊಳ್ಳಬಹುದು. ಆದರೆ ಬಿಜ್ಜಳರಾಯರ ಕೋಪ ಸಿಡಿಲಿನಂತೆ ಮೇಲೆರಗಿ ಖಂಡಿತವಾಗಿ ನಿಮ್ಮನ್ನು ನಾಶಮಾಡುವುದು."

ಹೆಗ್ಗಡೆ ಬೆದರಿದನು. "ಮಾತಾಡಿದ ರೀತಿಯನ್ನು ನೋಡಿದರೆ ನಿಜವಾಗಿ ಇವನು ಬಿಜ್ಜಳರಾಯರ ಅಧಿಕಾರಿಯೋ ನಿಯುಕ್ತನೋ ಆಗಿರಬೇಕು. ಅಲ್ಲದಿದ್ದರೆ ಸ್ವಯಂ ನಾರಣಕ್ರಮಿತರು ಇಲ್ಲಿಗೆ ಕರೆತಂದು ಬಿಡುತ್ತಿದ್ದರೆ? ಕಾವ್ಯೋಪದೇಶಿಯೆಂದು ಹೇಳಿ ಸಂದರ್ಶನವನ್ನೇರ್ಪಡಿಸಿದ್ದು ಒಂದು ಮೋಸದ ನಾಟಕ," ಎಂದು ಭಾವಿಸಿದನು.

ಅಗ್ಗಳನ ಹತ್ತಿರ ಬಂದು ಪಿಸುದನಿಯಿಂದ ಅವನು, "ಇದರಲ್ಲಿ ನನ್ನ ತಪ್ಪೇನೂ ಇಲ್ಲ, ಅಗ್ಗಳದೇವರಸರೆ. ಕರ್ಣದೇವರಸರು ಹೇಳಿದರೆ ನಾನು ನಿರಾಕರಿಸುವುದು ಹೇಗೆ? ಇವೊತ್ತು ಇವಳನ್ನು ಕಳುಹಿಸು, ನಾಳೆ ಅವಳು ಬರಲಿ ಎಂದು ದಿನಕ್ಕೊಂದು ಆಜ್ಞೆ ಮಾಡುತ್ತಾರೆ. ಹೆಣ್ಣು ತಲೆಗಳ ಸರ ಪೋಣಿಸಿ ಕೊರಳಿಗೆ ಹಾಕಿದರೂ ತೃಪ್ತಿ ಆಗುವುದಿಲ್ಲ ಅವರಿಗೆ, ನಿಮ್ಮ ಮಾತು ಕೇಳಿ ನನಗೆ ಭಯವಾಗುತ್ತಿದೆ. ಈ ವಿಚಾರಗಳೊಂದೂ ಬಿಜ್ಜಳರಾಯರ ಕಿವಿಗೆ ಬೀಳದಂತೆ ನಾವು ಎಚ್ಚರವಾಗಿರಬೇಕು," ಎಂದು ವಿನಯವಾಡಿದನು.

"ನೀವು ಮತ್ತು ಕರ್ಣದೇವ ನನ್ನ ಮಧುಪಾನದ ಗೆಳೆಯರು. ಈ ದಿನ ಒಂದೇ ಪಾತ್ರೆಯಲ್ಲಿ ಕುಡಿದು ಸಹೋದರರಾದೆವು. ನಿಮ್ಮ ಹಿತವೇ ನನ್ನ ಹಿತ. ಈ ವಿಚಾರಗಳು ಬಿಜ್ಜಳರಾಯರಿಗೆ ತಿಳಿಯದಂತೆ ನಾನು ನೋಡಿಕೊಳ್ಳುತ್ತೇನೆ. ನೀವು ಯೋಚನೆ ಮಾಡಬೇಕಾಗಿಲ್ಲ," ಎಂದು ಅಗ್ಗಳನು ಅವನಿಗೆ ಸಮಾಧಾನ ಹೇಳಿದನು.

ಕಣ್ಣ ಕೊನೆಯಿಂದ ಇದೆಲ್ಲವನ್ನೂ ನೋಡುತ್ತಿದ್ದ ಜಗದೇಕಮಲ್ಲನು, "ದಾಸಿಯರನ್ನು ಕರೆಯಿರಿ ಹೆಗ್ಗಡೆಗಳೆ, ಇವಳ ಚೇಷ್ಟೆ ತಡೆಯಲು ಇನ್ನು ನನ್ನಿಂದ ಸಾಧ್ಯವಿಲ್ಲ," ಎಂದನು.

ಹೆಗ್ಗಡೆ ಎದ್ದು ಹೊರಗೆ ಹೋಗಿ ಇಬ್ಬರು ಊಳಗಿತ್ತಿಯರನ್ನು ಕರೆತಂದನು. ಎದ್ದು ನಿಂತು ಉಡೆಗಳಚಲು ಅನುವಾಗಿದ್ದ ಸಖಿಯನ್ನು ಅವರು ಕೈ ಹಿಡಿದು ಬಲವಂತದಿಂದ ಅಂತಃಪುರಕ್ಕೆ ಕರೆದುಕೊಂಡು ಹೋದರು. ಪಾನಗೋಷ್ಟಿಯಲ್ಲಿ ಮತ್ತೆ ಶಾಂತಿ ನೆಲಸಿತು.

ಈ ರೀತಿ ಕೆಲವು ದಿನಗಳು ಕಳೆದವು. ಈ ಅವಧಿಯಲ್ಲಿ ಮೂವರು ಕೋಣೆಯ ಸಮಿತಿಯ ಸಭೆ ಎರಡು ಸಾರಿ ನಡೆಯಿತು. ಮೊದಲ ದಿನದಂತೆ