ಪುಟ:ಕ್ರಾಂತಿ ಕಲ್ಯಾಣ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ಕ್ರಾಂತಿ ಕಲ್ಯಾಣ

ಜಗದೇಕಮಲ್ಲನು ಮೂರ್ಛಹೋದಂತೆ ಕದಲದೆ ಬಿದ್ದಿದ್ದನು. ಆಗ ಅಗ್ಗಳನು ತನ್ನ ತಡಿಚೀಲದಲ್ಲಿದ್ದ ಸ್ಥಾಲಿಯನ್ನು ತಂದು ಹಣೆ ಮುಖಗಳಿಗೆ ನೀರು ಸವರಿದಾಗ ಜಗದೇಕಮಲ್ಲನು ಕರೆದು ಸುತ್ತ ನೋಡಿದನು.

"ಪೆಟ್ಟಾಯಿತೇ, ಅರಸರೆ?" ಅಗ್ಗಳನು ಕಳವಳದಿಂದ ಕೇಳಿದನು.
"ಹಿಂದೆ ಬರುತ್ತಿದ್ದ ಸವಾರರೆಲ್ಲಿ?"
"ಅವರು ಬಹಳ ದೂರದಲ್ಲಿದ್ದಾರೆ. ಇಲ್ಲಿಗೆ ಬರಲು ಕೊಂಚ ಹೊತ್ತಾಗಬಹುದು."

ಆಗ ಜಗದೇಕಮಲ್ಲನು ಬದಲಿಸಿದ ಕಂಠದಿಂದ ಅವಸರವಾಗಿ, "ನಿನ್ನೊಡನೆ ಏಕಾಂತವಾಗಿ ಮಾತಾಡುವುದಕ್ಕಾಗಿ ನಾನು ಬೇಟೆಗೆ ಬಂದದ್ದು, ಹೇಳಬೇಕಾದ್ದನ್ನು ಜಾಗ್ರತೆ ಹೇಳು,' ಎಂದನು.

ಈ ಅವಕಾಶಕ್ಕಾಗಿಯೇ ಕಾಂಯುತ್ತಿದ್ದ ಅಗ್ಗಳನೆಂದನು: "ಮಹಾರಾಣಿ ಕಾಮೇಶ್ವರೀದೇವಿಯವರು ಚಾಲುಕ್ಯ ಅರಸುತನದ ಪುನರುದ್ಧಾರಕ್ಕಾಗಿ ಸಂಚು ಹೂಡಿದ್ದಾರೆ. ಕರ್ಹಾಡದ ವಿಜಯಾರ್ಕ ಮಹಾರಾಜರು, ದೇವಗಿರಿಯ ಸೇವುಣ ಅರಸರು, ಬನವಾಸಿ ನಾಡಿನ ಪ್ರಮುಖ ಸಾಮಂತರು ಸಂಚಿಗೆ ಅನುಮೋದನೆಯಿತ್ತು ಸಹಾಯ ಮಾಡಲು ಒಪ್ಪಿದ್ದಾರೆ. ಬಿಜ್ಜಳನ ರಾಜ್ಯಾಪಹಾರದ ದುರಾಡಳಿತವನ್ನು ಕೊನೆಗಾಣಿಸಿ, ನಿಮ್ಮನ್ನು ಚಾಲುಕ್ಯ ಸಿಂಹಾಸನದಲ್ಲಿ ಕುಳ್ಳಿರಿಸುವುದು ಸಂಚಿನ ಉದ್ದೇಶ. ನಿಡುಗಲ್ಲಿನ ದುರ್ಗಾಧಿಪತಿ ಬೊಮ್ಮರಸನು ಮಹಾರಾಣಿಯವರ ಪ್ರತಿನಿಧಿಯಾಗಿ ಚಾಲುಕ್ಯ ರಾಜ್ಯದ ಅನೇಕ ಕಡೆಗಳಲ್ಲಿ ಸಂಚಾರಮಾಡಿ ಸಾಮಂತಮನ್ನೆಯರ ಅಭಿಮತ ತಿಳಿದು ಬಂದಿದ್ದಾನೆ. ನಿಮ್ಮ ಒಪ್ಪಿಗೆ ಸಹಕಾರಗಳು ಈಗ ಅಗತ್ಯ"

ಜಗದೇಕಮಲ್ಲನು ಕೆಲವು ಕ್ಷಣಗಳು ಯೋಚಿಸಿ, "ಈಗ ಬೊಮ್ಮರಸನೆಲ್ಲಿದ್ದಾನೆ?" ಎಂದನು.

"ಏನಾದರೊಂದು ತಂತ್ರಹೂಡಿ ನಿಮ್ಮೊಡನೆ ಸಂಧಾನ ಪ್ರಾರಂಭಿಸುವ ಉದ್ದೇಶದಿಂದ ಹತ್ತು ದಿನಗಳ ಹಿಂದೆ ನಾವು ಕಲ್ಯಾಣಕ್ಕೆ ಬಂದೆವು. ನಮ್ಮ ದುರಾದೃಷ್ಟ ಬಂದ ರಾತ್ರಿಯೆ ನಾರಣಕ್ರಮಿತನು ನನ್ನನ್ನು ಮೋಸದಿಂದ ರಾಜಗೃಹಕ್ಕೆ ಕರೆತಂದು ಸೆರೆಯಿಟ್ಟನು. ಆಮೇಲೆ ಬೊಮ್ಮರಸನೇನಾದನೆಂಬುದು ತಿಳಿಯದು."

"ಮಹಾರಾಣಿಯ ಒಳಸಂಚು ಬಿಜ್ಜಳನಿಗೆ ತಿಳಿದಿದೆಯೆಂದು ನೀನು ಭಾವಿಸುವೆಯಾ?"

"ತಿಳಿದಿಲ್ಲವೆಂದೇ ನನ್ನ ವಿಶ್ವಾಸ. ತಿಳಿದಿದ್ದರೆ ನನ್ನನ್ನು ರಾಜಗೃಹಕ್ಕೆ ಕರೆತಂದ